ಕೆ.ಆರ್.ಪೇಟೆ: ತಾಲೂಕಿನ ಸಚಿವರಿಗೆ ಹಾಗೂ ಲೋಕೋಪ ಯೋಗಿ ಇಲಾಖೆ ಅಧಿಕಾರಿಗಳಿಗೆ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು ಆಗುತ್ತಿಲ್ಲ ಎಂದರೆ ಯಾವ ಪುರುಷಾರ್ಥಕ್ಕೆ ಕೆಲಸ ಮಾಡುತ್ತಿದ್ದೀರಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯ ಕರ್ತರು ಪ್ರಶ್ನಿಸಿದರು.
ತಾಲೂಕು ಘಟಕದ ಅಧ್ಯಕ್ಷ ಹೊನ್ನೇನಹಳ್ಳಿ ವೇಣು ನೇತೃತ್ವದಲ್ಲಿ ಪಟ್ಟಣದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಮಾತನಾಡಿದರು.
ಗುಂಡಿ ಬಿದ್ದಿವೆ: ತಾಲೂಕಿಗೆ ಎಲ್ಲಾ ಮೂಲಭೂತ ಸೌಕರ್ಯ ಕೊರತೆ ಎದ್ದು ಕಾಣುತ್ತಿದೆ. ತಾಲೂಕಿನ ಜನತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ತೆರಿಗೆ ಮತ್ತು ಜಿಎಸ್‌ಟಿ ಕಟ್ಟುತ್ತಿಲ್ಲವೇ. ಆ ಹಣ ಬಳಸಿ ಸೌಕರ್ಯ ಏಕೆ ಕಲ್ಪಿಸುತ್ತಿಲ್ಲ. ಗ್ರಾಮೀಣ ರಸ್ತೆಗಳಿಂದ ಹಿಡಿದು ಮೈಸೂರು, ಚನ್ನರಾಯಪಟ್ಟಣ, ಶ್ರವಣಬೆಳಗೊಳ, ಮಾದಾಪುರ, ಬೀರವಳ್ಳಿ, ಶೀಳನೆರೆ, ಬೂಕನಕೆರೆ ರಸ್ತೆ ಸೇರಿ ಬಹುತೇಕ ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳೆಲ್ಲವೂ ಗುಂಡಿ ಬಿದ್ದಿವೆ ಎಂದು ದೂರಿದರು.
ಇಲ್ಲವಾಗಿದ್ದಾರೆ: ರಕ್ಷಣಾ ವೇದಿಕೆ ಪದವೀಧರ ಘಟಕದ ಅಧ್ಯಕ್ಷ ಸಿ.ಬಿ.ಚೇತನ್ ಕುಮಾರ್ ಮಾತನಾಡಿ, ಗುತ್ತಿಗೆದಾರರಿಂದ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಹೇಳುವವರು ಕೇಳು ವವರು ಇಲ್ಲವಾಗಿದ್ದಾರೆ. ರಸ್ತೆ ಅಪಘಾತದಲ್ಲಿ ಜೀವ ಹಾನಿಯಾ ದರೆ ಅವರ ಕುಟುಂಬಕ್ಕೆ ನೀವು ಆಸರೆ ಆಗುತ್ತೀರಾ. ನಮ್ಮ ಪಕ್ಕದ ತಾಲೂಕುಗಳಾದ ಪಾಂಡವಪುರ, ಚನ್ನರಾಯಪಟ್ಟಣ ಮುಂತಾದ ಕಡೆ ಗುಣಮಟ್ಟದ ರಸ್ತೆಗಳಿವೆ. ನಮ್ಮ ತಾಲೂಕಿನಲ್ಲಿ ಉತ್ತಮವಾದ ಒಂದು ರಸ್ತೆ ಏಕಿಲ್ಲ ಎಂದರು.
ಇದೇನಾ ಎರಡನೇ ಶಿಕಾರಿಪುರ, ಮೈಸೂರು, ಮಂಡ್ಯ, ಚನ್ನ ರಾಯಪಟ್ಟಣ ಕಡೆಗಳಿಗೆ ಹೋಗಬೇಕಾದರೆ ಜೀವವನ್ನು ಕೈಯಲ್ಲಿ ಹಿಡಿದು ಹೋಗಬೇಕಾದ ಪರಿಸ್ಥಿತಿ ಇದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ವಾರದಲ್ಲಿ ಗುಂಡಿ ಮುಚ್ಚದಿದ್ದರೆ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಎಇಇ ರಾಜಶೇಖರ್‌ರಿಗೆ ಮನವಿ ನೀಡಿದರು.
ಇದೇ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷ ಮದನ್‌ಗೌಡ, ಯುವ ಘಟಕದ ಅಧ್ಯಕ್ಷ ಆನಂದ, ತಾಲೂಕು ಉಪಾಧ್ಯಕ್ಷ ಶ್ರೀನಿಧಿ ಶ್ರೀನಿವಾಸ್, ತಾಲೂಕು ಸಂಚಾಲಕ ಜಹೀರ್, ಮುಖಂಡರಾದ ಫಯಾಜ್, ಕಲೀಲ್, ಶೀಳನೆರೆ ಹೋಬಳಿ ಘಟಕದ ಅಧ್ಯಕ್ಷ ಚನ್ನೇಗೌಡ, ಸಂಘಟನಾ ಕಾರ್ಯದರ್ಶಿ ಸ್ವಾಮಿ, ಬಸವೇಗೌಡ, ಯುವ ಘಟಕದ ಕಾರ್ಯದರ್ಶಿ ಮನು, ಈಶ್ವರ, ಅಶ್ವತ್ಥ, ಬೂಕನಕೆರೆ ಮಧು ಮತ್ತಿತರರು ಇದ್ದರು.