Advertisement

ಬಿಸಿಯೂಟ ನೌಕರರ ಸಂಭಾವನೆ: ಕೇಂದ್ರದ ಪಾಲು ಹೆಚ್ಚಳಕ್ಕೆ ಸಚಿವ ಸುರೇಶ್ ಕುಮಾರ್ ಆಗ್ರಹ

09:24 AM Apr 29, 2020 | Hari Prasad |

ಬೆಂಗಳೂರು: ಮಧ್ಯಾಹ್ನ ಉಪಹಾರ ಯೋಜನೆಯಲ್ಲಿ ಕೆಲಸ ಮಾಡುವ ಅಡುಗೆ ಸಹಾಯಕರರು ಅತಿ ಕನಿಷ್ಠ ಸಂಭಾವನೆಯಲ್ಲಿ ದುಡಿಯುತ್ತಿರುವುದರಿಂದ ಈ ನೌಕರರಿಗೆ ನೀಡುವ ಕೇಂದ್ರದ ಪಾಲನ್ನು ಹೆಚ್ಚಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಕೇಂದ್ರ ಸಚಿವರನ್ನು ಆಗ್ರಹಿಸಿದ್ದಾರೆ.

Advertisement

ಮಂಗಳವಾರ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಕ್ರಿಯಾಲ್ ಅವರು ನಡೆಸಿದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಾಥಮಿಕ ಶಿಕ್ಷಣ ಸಚಿವರೊಂದಿಗೆ ನಡೆಸಿದ ವಿಡಿಯೋ ಸಂವಾದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಸಿಯೂಟ ಯೋಜನೆ ಆರಂಭವಾದಾಗ ಕೇಂದ್ರ ಸರ್ಕಾರ ನೀಡುತ್ತಿದ್ದ ಪಾಲಿನ ಮೊತ್ತವೇ ಈಗಲೂ ಮುಂದುವರೆದಿದ್ದು, ರಾಜ್ಯ ಸರ್ಕಾರ ಮಾತ್ರವೇ ತನ್ನ ಪಾಲನ್ನು ಹೆಚ್ಚಿಸಿದೆ ಎಂದರು.

ಕೇಂದ್ರವು ಮೊದಲಿನಿಂದಲೂ ನೀಡುತ್ತಿದ್ದ 600 ರೂ. ಮಾತ್ರವೇ ಈಗಲೂ ಮುಂದುವರೆದಿದೆ. ಆದರೆ ರಾಜ್ಯ ಸರ್ಕಾರ ತಾನು ನೀಡುತ್ತಿರುವ ಮೊತ್ತವನ್ನು ಸಾಕಷ್ಟು ಬಾರಿ ಹೆಚ್ಚಿಸಿದೆ, ಆದರೆ ಕೇಂದ್ರದ ಪಾಲು ಮಾತ್ರ ಮೊದಲಿನಷ್ಟೇ ಇರುವುದರಿಂದ ಬಿಸಿಯೂಟ ನೌಕರರು ತೀವ್ರ ಸಂಕಷ್ಟದಿಂದ ಬದುಕುವಂತಾಗಿರುವುದರಿಂದ ಕೇಂದ್ರದ ಪಾಲನ್ನು ಆದಷ್ಟು ಶೀಘ್ರವೇ ಹೆಚ್ಚಿಸಬೇಕೆಂದು ಒತ್ತಾಯಿಸಿದರು.

ಬೇಸಿಗೆ ರಜೆ ಅವಧಿಯಲ್ಲಿಯೂ ಸಹ ಮಧ್ಯಾಹ್ನ ಉಪಹಾರ ಯೋಜನೆಯನ್ನು ವಿಸ್ತರಿಸಲು ನಿರ್ಧರಿಸಿರುವ ಕೇಂದ್ರದ ಕ್ರಮವನ್ನು ಶ್ಲಾಘಿಸಿದ ಸುರೇಶ್ ಕುಮಾರ್, ಕರ್ನಾಟಕ ಸರ್ಕಾರವು ಈಗಾಗಲೇ ತನ್ನ ಪಾಲಿನ ಅನುದಾನದಲ್ಲಿ ರಜಾ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟದ ಪಡಿತರವನ್ನು ವಿತರಿಸುತ್ತಿರುವ ಅಂಶವನ್ನು ಗಮನಕ್ಕೆ ತಂದರು.

ಕೋವಿಡ್ ಸೃಷ್ಟಿಸಿರುವ ಹೊಸ ಜೀವನ ಶೈಲಿಯನ್ನು ಸಮರ್ಥವಾಗಿ ಎದುರಿಸಲು ಶೈಕ್ಷಣಿಕ ವ್ಯವಸ್ಥೆಯಲ್ಲಿ ತಂತ್ರಜ್ಞಾನಾಧಾರಿತವಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಾದ ಅನಿವಾರ್ಯತೆಯಿದ್ದು, ಕೇಂದ್ರ ಸರ್ಕಾರವು ರಾಜ್ಯಗಳಿಗೆ ಹೆಚ್ಚಿನ ಆರ್ಥಿಕ ಸಹಕಾರ ಒದಗಿಸಬೇಕೆಂದು ಆಗ್ರಹಿಸಿದ ಸಚಿವ ಸುರೇಶ್ ಕುಮಾರ್, ಕರ್ನಾಟಕ ಸರ್ಕಾರವು ಈಗಾಗಲೇ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ದೂರದರ್ಶನದ ಚಂದನ ವಾಹಿನಿಯಲ್ಲಿ ಪುನರ್ ಮನನ ತರಗತಿಗಳನ್ನು ಹಾಗೂ ಯೂ-ಟ್ಯೂಬ್ ಚಾನೆಲ್ ನಲ್ಲಿ ಮಕ್ಕಳ ಸಮೃದ್ಧ ಕಲಿಕೆಗೆ ವೇದಿಕೆಗೆ ಸೃಷ್ಟಿಸಿದೆ ಎಂದರು.

Advertisement

ಲಾಕ್ ಡೌನ್ ಮುಂದುವರಿಕೆಯಿಂದ ಮುಂದಿನ ಶೈಕ್ಷಣಿಕ ಸಾಲಿನ ಪಠ್ಯಕ್ರಮವನ್ನು ಪರಿಷ್ಕರಿಸಲು ಶಿಕ್ಷಣ ಇಲಾಖೆ ನಿರ್ಣಯಿಸಿದ್ದು, ಶಿಕ್ಷಕರ ಸಮಿತಿಗಳ ಮೂಲಕ ಇಂತಹ ಕ್ರಮಕ್ಕೆ ಮುಂದಾಗಲಾಗುತ್ತಿದೆ ಎಂಬುದನ್ನು ಸಚಿವರು ಕೇಂದ್ರ ಸಚಿವರ ಗಮನಕ್ಕೆ ತಂದರು. ಕೇಂದ್ರ ಪಠ್ಯ ಕ್ರಮದ ಶಾಲೆಗಳಿಗೂ ಮುಂಬರುವ ಸಾಲಿನ ಪಠ್ಯಕ್ರಮವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕ್ರಮವಹಿಸಿ ದೇಶಾದ್ಯಂತ ಸಮಾನ ಶೈಕ್ಷಣಿಕ ವ್ಯವಸ್ಥೆಯನ್ನು ಜಾರಿಯಲ್ಲಿಡಬೇಕಾದ ಅಗತ್ಯವನ್ನು ಸಚಿವರು ಒತ್ತಿ ಹೇಳಿದರು.

ಲಾಕ್ ಡೌನ್ ನಂತರ ಎಸ್ ಎಸ್ ಎಲ್ ಸಿ ಪರೀಕ್ಷೆ
ಪಂಜಾಬ್ ಸೇರಿದಂತೆ ಹಲವು ರಾಜ್ಯಗಳ ಶಿಕ್ಷಣ ಸಚಿವರು ಎಸ್ ಎಸ್ ಎಲ್ ಸಿ ಪರೀಕ್ಷೆಯ ಪ್ರಾಮುಖ್ಯತೆ ಬಗ್ಗೆ ವಿವರಿಸಿದ್ದು, ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಗಳನ್ನು ಕರ್ನಾಟಕ ಸರ್ಕಾರವೂ ಸಹ ನಡೆಸಲು ಲಾಕ್ ಡೌನ್ ಬಳಿಕ ನಡೆಸಲು ಎಲ್ಲ ಪೂರ್ವ ಸಿದ್ಧತೆಯನ್ನು ಕೈಗೊಳ್ಳಲಾಗಿದೆ ಎಂಬ ಅಂಶವನ್ನು ವಿವರಿಸಿದ ಸಚಿವ ಸುರೇಶ್ ಕುಮಾರ್, ವಿದ್ಯಾರ್ಥಿಗಳ ಹಿತಕ್ಕಾಗಿ ಈ ಪರೀಕ್ಷೆಗಳನ್ನು ನಡೆಸುವುದು ಸೂಕ್ತವೆಂಬ ಅಂಶವನ್ನುಪ್ರತಿಪಾದಿಸಿದರು.

ಸಮಗ್ರ ಶಿಕ್ಷಣ ಕರ್ನಾಟಕಕ್ಕೆ ಕೇಂದ್ರ ಸರ್ಕಾರವು ಬಿಡುಗಡೆ ಮಾಡಬೇಕಾದ ಅನುದಾನವನ್ನು ಶೀಘ್ರ ನೀಡಲು ಕೋರಿದ ಸಚಿವ ಸುರೇಶ್ ಕುಮಾರ್, ನೀತಿ- ನಿರೂಪಣಾ ಮಂಡಳಿಯ ಅನುಮೋದನೆ ಕಾಯ್ದಿರಿಸಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಅನುದಾನ ಬಿಡುಗಡೆಗೆ ಮುಂದಾಗಿರುವ ಕ್ರಮಕ್ಕೆ ಧನ್ಯವಾದ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next