Advertisement

ಟಿಪ್ಪು ಆದರ್ಶ ಪ್ರತಿಪಾದಕರಿಂದ ನಾರಾಯಣ ಗುರುಗಳಿಗೆ ಅವಮಾನ: ಸಿದ್ದು ವಿರುದ್ಧ ಸುನಿಲ್ ಆಕ್ರೋಶ

03:46 PM Jan 20, 2022 | Team Udayavani |

ಬೆಂಗಳೂರು: ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗಣರಾಜ್ಯೋತ್ಸವ ಪರೇಡ್ ಗೆ ಟಿಪ್ಪು ಸುಲ್ತಾನ್ ಸ್ಥಬ್ದಚಿತ್ರ ಕಳುಹಿಸುವಂತೆ ಶಿಫಾರಸ್ಸು ಮಾಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಈಗ ಮಹರ್ಷಿ ನಾರಾಯಣ ಗುರುಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಅಕ್ಷಮ್ಯ ಎಂದು ಕನ್ನಡ – ಸಂಸ್ಕ್ರತಿ ಹಾಗೂ ಇಂಧನ ಸಚಿವ ವಿ.ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

Advertisement

ತಮ್ಮ ಬಿಡುವಿನ ವೇಳೆಯನ್ನು ಸತ್ಕಾರ್ಯಕ್ಕೆ ಬಳಸಿಕೊಳ್ಳುವ ಬದಲು ಎಲ್ಲದರಲ್ಲೂ ರಾಜಕೀಯವನ್ನು ಹುಡುಕುವ ಸಿದ್ದರಾಮಯ್ಯನವರು ಕೇರಳದ ಕಮ್ಯುನಿಷ್ಟ್ ಸರಕಾರ ಹಚ್ಚಿದ ಬೆಂಕಿಯಲ್ಲಿ ಮೈ ಕಾಯಿಸಿಕೊಳ್ಳಲು ಹೊರಟಿದ್ದಾರೆ. ನಾರಾಯಣ ಗುರು ರಾಜಕೀಯ ವಸ್ತುವಲ್ಲ, ಅವರನ್ನು ರಾಜಕೀಯ ಬಳಸಿಕೊಳ್ಳುವುದಕ್ಕೆ ಹೋಗಬೇಡಿ. ಟಿಪ್ಪು ಆದರ್ಶ ಪ್ರತಿಪಾದಕರು ಈಗ ನಾರಾಯಣ ಗುರುಗಳಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈ ಹಿಂದೆ ಕೇರಳ ಸರಕಾರ ನಾರಾಯಣ ಗುರು ಪ್ರತಿಮೆಯನ್ನು ಶಿಲುಬೆಗೆ ಕಟ್ಟಿ ಅವಮಾನ ಮಾಡಿದಾಗ ಸಿದ್ದರಾಮಯ್ಯನವರಿಗೆ ಪ್ರಶ್ನೆ ಮಾಡುವ ಧೈರ್ಯ ಇರಲಿಲ್ಲ. ಗಣರಾಜ್ಯೋತ್ಸವದ ಪರೇಡ್ ಗೆ ಟಿಪ್ಪು ಸುಲ್ತಾನ್ ಸ್ಥಬ್ದಚಿತ್ರ ಕಳುಹಿಸುವಂತೆ ಶಿಫಾರಸ್ಸು ಮಾಡಿದ್ದ ನೀವು ಹಿಂದು ಧಾರ್ಮಿಕ ಸಂತರ ಪರ ಈಗ ವಕಾಲತು ವಹಿಸುವುದು ಚೋದ್ಯ. “ಒಂದೇ ಕಣ್ಣಿನಲ್ಲಿ ನೀರು ಸುರಿಸಿ ಅಮಾಯಕರನ್ನು ಬಲಿ ಪಡೆಯುವ ನಿಮ್ಮ ಮಕರ ನೀತಿ” ಯನ್ನು ರಾಜ್ಯದ ಜನತೆ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಸಚಿವರು ಟೀಕಿಸಿದ್ದಾರೆ.

ಕೇರಳದ ಸ್ಥಬ್ದಚಿತ್ರವನ್ನು ಪರೇಡ್ ಗೆ ಪರಿಗಣಿಸಿಲ್ಲ ಎಂದು ವಿವಾದ ಸೃಷ್ಟಿಸುತ್ತಿರುವ ನಿಮಗೆ ರಾಜ್ಯದ ಸ್ಥಬ್ದಚಿತ್ರ ಆಯ್ಕೆಯಾಗಿರುವ ಬಗ್ಗೆ ಪರಿವೆ ಇಲ್ಲವೇ? ಈ ಸಂಬಂಧ ಕೇಂದ್ರ ಸರಕಾರವನ್ನು ಅಭಿನಂದಿಸುವುದನ್ನು ಬಿಟ್ಟು ಪ್ರಧಾನಿ ನರೇಂದ್ರ ಮೋದಿಯವರ ಟೀಕೆಗೆ ಪ್ರಕರಣವನ್ನು ಬಳಸಿಕೊಳ್ಳುತ್ತಿದ್ದೀರಿ. ನಾರಾಯಣ ಗುರುಗಳ ಸಮಾಜ ಸುಧಾರಣಾ ಕಾರ್ಯದ ಬಗ್ಗೆ ಪ್ರಧಾನಿ ಮೋದಿ ಅಪಾರ ಕಾಳಜಿ ಹೊಂದಿದ್ದು, ತಮ್ಮ ಭಾಷಣದಲ್ಲಿ ಅನೇಕ ಬಾರಿ ಪ್ರಸ್ತಾಪಿಸಿದ್ದಾರೆ. ನಾರಾಯಣಗುರುಗಳ ಆಶ್ರಮಕ್ಕೆ ಎರಡು ಬಾರಿ ಭೇಟಿ ನೀಡಿದ್ದಷ್ಟೇ ಅಲ್ಲ, ಈ ಆಶ್ರಮದ ಗುರುಗಳಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನಿಮ್ಮ ಹಾಗೆ ತೋರಿಕೆಯ ಭಕ್ತಿ ಪ್ರದರ್ಶನ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರಕಾರ ಅಧಿಕಾರಕ್ಕೆ ಬಂದ ನಂತರ‌ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಹಿಂದುಳಿದ ವರ್ಗಗಳ‌ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ದೊರಕಿರುವುದು ಬಿಜೆಪಿ ಸರಕಾರದ ಅವಧಿಯಲ್ಲಿ. ಇದನ್ನೆಲ್ಲ ನೋಡುವುದಕ್ಕೆ ಶುದ್ಧ ಮನಸು ಹಾಗೂ ಹೃದಯ ಬೇಕು. ಆದರೆ ನೀವು ಕಣ್ಣಿಗೆ ಹಳದಿ ಪಟ್ಟಿಕಟ್ಟಿಕೊಂಡು ಪ್ರಪಂಚವನ್ನು ವೀಕ್ಷಿಸುತ್ತಿದ್ದೀರಿ. ದೃಷ್ಟಿಯಂತೆ ಸೃಷ್ಟಿ ಎಂಬ ಮಾತು ನಿಮ್ಮಂಥವರ ನಡಾವಳಿಯನ್ನು ನೋಡಿಯೇ ಸೃಷ್ಟಿಸಿದ್ದಿರಬೇಕು ಎಂದು ವ್ಯಂಗ್ಯವಾಡಿದ್ದಾರೆ.

Advertisement

ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಮಹಾಪುರುಷರ ತತ್ವ, ಆದರ್ಶಗಳ ಪಾಲನೆ ಬೇಕಿಲ್ಲ. ಮಹಾಪುರುಷರನ್ನು ಎಷ್ಟು ಸಾಧ್ಯವೋ ಅಷ್ಟು ಬಳಸಿಕೊಳ್ಳುವ ಹೊಟ್ಟೆಬಾಕತನ ಮಾತ್ರ ಬೇಕು. ಗಾಂಧಿ ಆದರ್ಶದ ಪಾಲನೆಯಿಲ್ಲದಿದ್ದರೂ ಗಾಂಧಿ ಹೆಸರು ಬಳಸಿಕೊಂಡಿರಿ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ ಕಾಂಗ್ರೆಸಿಗರು, ಅವರ ಹೆಸರನ್ನು ಮಾತ್ರ ಬಳಕೆ ಮಾಡಿಕೊಳ್ಳುತ್ತಾರೆ. ಈಗ ನಾರಾಯಣಗುರುಗಳ ಹೆಸರನ್ನು ರಾಜಕೀಯಕ್ಕೆ ಎಳೆದು ತರುತ್ತಾ ಇದ್ದೀರಿ. ಮಹರ್ಷಿ ನಾರಾಯಣಗುರು ರಾಜಕೀಯದ ವಸ್ತು ಅಲ್ಲ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ:ಗೋರಖ್ ಪುರ್ ಕ್ಷೇತ್ರ: ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಚಂದ್ರಶೇಖರ್ ಆಜಾದ್ ಕಣಕ್ಕೆ

ಸ್ಥಬ್ದಚಿತ್ರಗಳ ಆಯ್ಕೆಯಲ್ಲಿ ಸರಕಾರದ ಹಸ್ತಕ್ಷೇಪ ಇರುವುದಿಲ್ಲ. ಆದರೆ ಮೂಲ ಸೌಕರ್ಯವನ್ನು ಮಾತ್ರ ಕಲ್ಪಿಸಲಾಗುತ್ತದೆ. ಈ ಬಾರಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ” ಸ್ವಾತಂತ್ರ್ಯ 75″ ರ ಸಾಧನೆ ಇತ್ಯಾದಿ ಪರಿಕಲ್ಪನೆ ನೀಡಲಾಗಿತ್ತು. ಕೇರಳ, ತಮಿಳು ನಾಡು, ಪಶ್ಚಿಮ ಬಂಗಾಲ, ಆಂಧ್ರಪ್ರದೇಶ ಇತ್ಯಾದಿ ರಾಜ್ಯಗಳ ಸ್ಥಬ್ದಚಿತ್ರಗಳ ಗುಣಮಟ್ಟ ನಿರೀಕ್ಷಿತ ಪ್ರಮಾಣದಲ್ಲಿ ಇರಲಿಲ್ಲ. 2018, 2021ರಲ್ಲಿ ಯಾವ ಮಾನದಂಡ ಆಧರಿಸಿ ಕೇರಳದ ಸ್ಥಬ್ದಚಿತ್ರವನ್ನು ಸ್ವೀಕರಿಸಲಾಗಿತ್ತೋ, ಈಗ ಅದೇ ಮಾನದಂಡದ ಅನ್ವಯ ಅವಕಾಶ ನಿರಾಕರಿಸಲಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳದೇ ವಿವಾದವೇ ಅಲ್ಲದ ವಿಚಾರಕ್ಕೆ ವಿವಾದದ ಸ್ವರೂಪ‌ ನೀಡಲು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಹೊರಟಿರುವುದು ಹಾಸ್ಯಾಸ್ಪದ ಎಂದು ಸುನೀಲ್ ಕುಮಾರ್ ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next