ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಜೋಡೆತ್ತುಗಳಲ್ಲ. ಅವೆರಡು ಅಧಿಕಾರಕ್ಕಾಗಿ ಕಾದಾಡುವ ಹೋರಿಗಳು. ಇಬ್ಬರೂ ಮುಖ್ಯಮಂತ್ರಿ ಕುರ್ಚಿ ಆಸೆಗಾಗಿ ಬಡಿದಾಡುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಟೀಕಿಸಿದರು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಪ್ರಕಣ ತನಿಖೆಯಲ್ಲಿರುವುದರಿಂದ ಹೆಚ್ಚಿಗೆ ಏನೂ ಮಾತನಾಡುವುದಿಲ್ಲ. ಈ ಪ್ರಕರಣದಲ್ಲಿ ಹಲವರ ಕೈವಾಡವಿದೆ. ಕೆಲ ಸಂಘ ಸಂಸ್ಥೆಗಳು ಭಾಗಿಯಾಗಿರುವ ಶಂಕೆಯಿದೆ. ಎಲ್ಲವೂ ತನಿಖೆಯಿಂದ ಹೊರಬರಲಿದೆ. ಮೈತ್ರಿ ಸರಕಾರದ ದುರಾಡಳಿತ ಕೊನೆಗಾಣಿಸಲು ಕೆಲ ಶಾಸಕರು ತಮ್ಮ ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಬೆಂಬಲ ನೀಡಿದ್ದರು. ಈ ಕಾರಣಕ್ಕಾಗಿ ಅವರ ತೇಜೋವಧೆ ಮಾಡುವ ಕೆಲಸ ನಡೆಯುತ್ತಿದೆ ಎಂದರು.
ಇದನ್ನೂ ಓದಿ:ಮೋದಿ ಕೊಲ್ಕತ್ತಾ ಭೇಟಿ ಹಿನ್ನೆಲೆಯಲ್ಲೇ ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ
ಆರು ಸಚಿವರು ನ್ಯಾಯಾಲಯಕ್ಕೆ ಹೋಗಿದ್ದಾರೆ ಎಂದ ಮಾತ್ರಕ್ಕೆ ರಾಸಲೀಲೆ ಇರಬಹುದು ಎಂದು ಭಾವಿಸುವುದು ತಪ್ಪು. ಫೋನ್ ಸಂಭಾಷಣೆ, ದಾಖಲಾತಿಗಳು ಇರಬಹುದು. ಹಲವು ವರ್ಷಗಳ ಕಾಲ ಜನ ಸೇವೆಯಲ್ಲಿರುವವರನ್ನು ಕಾಂಗ್ರೆಸ್ ನಾಯಕರು ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಸುಳ್ಳಿಗೆ ಬಲಿಯಾಗಬಾರದು ಎನ್ನುವ ಕಾರಣಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತೆಗೆದುಕೊಂಡಿದ್ದಾರೆ. ಇದಕ್ಕೆ ಬೇರ ಅರ್ಥ ಕಲ್ಪಿಸುವುದು ಸರಿಯಲ್ಲ. ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ನಾಯಕರಿಗೆ ಮಾಡಲು ಬೇರೆ ಕೆಲಸ ಇಲ್ಲದಂತಾಗಿದೆ. ಹೀಗಾಗಿ ಬಿಜೆಪಿ ಸಚಿವರ ತೇಜೋವಧೆ ಮಾಡುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 8ನೇ ಆಯವ್ಯಯ ಮಂಡಿಸುತ್ತಿದ್ದಾರೆ. ಶಿಕ್ಷಣ, ಆರೋಗ್ಯ, ಕೃಷಿ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೂ ಆದ್ಯತೆ ನೀಡಲಾಗುತ್ತದೆ. ಇಲಾಖೆಯ ಪ್ರಗತಿ ಪರಿಶೀಲನೆಗಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಸ್ಥಾನಮಾನ ನೀಡುವ ಬಗ್ಗೆ ಎಂದೂ ಕೇಳುವುದಿಲ್ಲ. ಈ ಬಗ್ಗೆ ಬೇಸರವೂ ಇಲ್ಲ ಎಂದು ಸಚಿವ ಶ್ರೀರಾಮುಲು ಹೇಳಿದರು.