Advertisement

ಹೆಸರಘಟ್ಟ ವೀರ್ಯ ಸಂಸ್ಕರಣಾ ಘಟಕಕ್ಕೆ ಸಚಿವ ಪ್ರಭು ಚವ್ಹಾಣ್ ದಿಢೀರ್ ಭೇಟಿ

06:47 PM Apr 06, 2022 | Team Udayavani |

ಬೆಂಗಳೂರು: ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಅವರು ಬೆಂಗಳೂರಿನ ಹೆಸರಘಟ್ಟದಲ್ಲಿರುವ ವಿವಿಧ ಜಾನುವಾರು ಕ್ಷೇತ್ರಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ವೀರ್ಯ ಉತ್ಪಾದನೆಗೆ ಬಳಸಿದ ರಾಸುಗಳು ವಯಸ್ಸಾದ ನಂತರದಲ್ಲಿ ಗೋಶಾಲೆಗಳಿಗೆ ಕಳುಹಿಸುವ ಬದಲು ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ಎಂದು ಕೇಳಿ ಬಂದ ದೂರುಗಳ ಹಿನ್ನೆಲೆಯಲ್ಲಿ ರಾಜ್ಯ ಘನವೀರ್ಯ ಸಂಸ್ಕರಣಾ ಘಟಕಕ್ಕೆ ದಿಢೀರ್ ಭೇಟಿ ನೀಡಿದ ಸಚಿವರು, ವೀರ್ಯ ಉತ್ಪಾದನೆಗಾಗಿ ಬಳಸಲಾಗುತ್ತಿರುವ ರಾಸುಗಳನ್ನು ಇಲ್ಲಿಯವರೆಗೂ ಯಾವ ಯಾವ ಗೋಶಾಲೆಗಳಿಗೆ ಕಳುಹಿಸಲಾಗಿದೆ. ಅಂಕಿ ಅಂಶಗಳ ಸಮೇತ ಮಾಹಿತಿ ನೀಡುವಂತೆ ಅಧಿಕಾರಿಗಳ ವಿರುದ್ಧ ಸಚಿವ ಪ್ರಭು ಚವ್ಹಾಣ್ ಗರಂ ಆದರು.

ವಯಸ್ಸಾದ ರಾಸುಗಳನ್ನು ಕೆಲ ಅಧಿಕಾರಿಗಳು ಹಣದ ಆಸೆಗಾಗಿ ಕಸಾಯಿಖಾನೆಗಳಿಗೆ ಮಾರಾಟ ಮಾಡಲಾಗುತ್ತಿದೆ. ಹೆಸರಘಟ್ಟದಲ್ಲಿರುವ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಗೆ ಸೇರಿದ ಸ್ವತ್ತು ಒತ್ತುವರಿಯಾಗುತ್ತಿದ್ದರೂ ಅಧಿಕಾರಿಗಳು ಕ್ರಮ ಜರುಗಿಸುತ್ತಿಲ್ಲ. ಅಧಿಕಾರಿಗಳು ರಿಯಲ್ ಎಸ್ಟೇಟ್ ಉದ್ಯಮಿಗಳೊಂದಿಗೆ ಸೇರಿಕೊಂಡು ಸರ್ಕಾರದ ಸ್ವತ್ತನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂದು ದೂರುಗಳು ಬರುತ್ತಿವೆ. ಅಧಿಕಾರಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಒತ್ತಡ ತಂದರೂ ಬಿಡುವುದಿಲ್ಲ ಎಂದು ಕೆಂಡಾಮಂಡಲರಾದ ಸಚಿವ ಪ್ರಭು ಚವ್ಹಾಣ್, ಸರ್ಕಾರದ ಆಸ್ತಿ ರಕ್ಷಣೆಗೆ ನಾನು ಸದಾ ಸಿದ್ಧನಿದ್ದೇನೆ. ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸುವುದಿಲ್ಲ ಎಂದು ಗುಡುಗಿದರು.

ರಾಜ್ಯ ಘನವೀರ್ಯ ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿದ ಸಚಿವರು, ಘನಿಕೃತ ವೀರ್ಯ ಉತ್ಪಾದನೆಗಾಗಿ ಸಾಕಾಣಿಕೆ ಮಾಡುತ್ತಿರುವ ವಿವಿಧ ತಳಿಗಳ ಹೋರಿ/ಕೋಣಗಳ ನಿರ್ವಹಣೆ, ವೀರ್ಯ ನಳಿಕೆಗಳನ್ನು ಶೇಖರಣೆ ಮತ್ತು ಗುಣಮಟ್ಟ ಪರಿಶೀಲನೆ ಮಾಡುವ ಲ್ಯಾಬ್ ಪರಿಶೀಲಿಸಿದರು.

ನಾವು ಆಹಾರ ಸೇವಿಸುವ ಹಾಗೇ ರಾಸುಗಳಿಗೂ ಸರಿಯಾಗಿ ಆಹಾರ ನೀಡಬೇಕು, ಇಲ್ಲಿರುವ ರಾಸುಗಳನ್ನು ಗಮನಿಸಿದಾಗ ಸರಿಯಾಗಿ ಪಾಲನೆ ಪೋಷಣೆ ಮಾಡಲಾಗದೇ ಬಡಕಲಾಗುತ್ತಿವೆ. ಅವುಗಳ ಪಾಲನೆ, ಪೋಷಣೆ, ನಿರ್ವಹಣೆ ಸರಿಯಾಗಿ ಆಗ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಪ್ರಭು ಚವ್ಹಾಣ್, ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಜಾಗೃತೆ ವಹಿಸಿ ಕೂಡಲೇ ಉತ್ತಮ ಗುಣಮಟ್ಟದ ಮೇವು ನೀಡುವಂತೆ ಹಾಗೂ ಕ್ಷೇತ್ರದಲ್ಲಿನ ಆವರಣದಲ್ಲಿ ಸ್ವಚ್ಛವಾಗಿ ಇಡುವಂತೆ ತಾಕೀತು ಮಾಡಿದರು.

Advertisement

ವೀರ್ಯ ಉತ್ಪಾದನೆ ಮತ್ತು ಮಾರಾಟ, ಇದರಿಂದ ಸರ್ಕಾರಕ್ಕೆ ಬರುವ ಆದಾಯ ಪ್ರಮಾಣದ ಬಗ್ಗೆ ಸಚಿವರ ಪ್ರಶ್ನೆಗೆ ಉತ್ತರಿಸಲು ತಡಬಡಾಯಿಸಿದ ಉಪ ನಿರ್ದೇಶಕರ ವಿರುದ್ಧ ಕೆಲಸ ಮಾಡ್ತಾ ಇದ್ದೀರಾ ಇಲ್ಲ, ಸರಿಯಾಗಿ ಮಾಹಿತಿ ನೀಡಿ ಎಂದು ಗರಂ ಆದ ಪ್ರಭು ಚವ್ಹಾಣ್, ರೈತರ ನಿರೀಕ್ಷೆಗೆ ತಕ್ಕಂತೆ ವೀರ್ಯ ಸರಬರಾಜು ಮಾಡಬೇಕು.‌ ರಾಸುಗಳಿಗೆ ಸಕಾಲದಲ್ಲಿ ಮೇವು ನೀಡಿದರೆ ಉತ್ತಮ ಗುಣಮಟ್ಟದ ವೀರ್ಯ ನೀಡುತ್ತವೆ. ಇದರಿಂದ ಗರ್ಭ ಧರಿಸುವ ರಾಸುಗಳು ಅಧಿಕ ಇಳುವಳಿ ನೀಡುವುದರಿಂದ ರೈತರ ಆದಾಯ ವೃದ್ಧಿಯಾಗುತ್ತದೆ. ರೈತರು ಆರ್ಥಿಕವಾಗಿ ಬಲಿಷ್ಠರಾಗುತ್ತಾರೆ ಎಂದು ಸಲಹೆ ನೀಡಿದರು.

ಜಾನುವಾರು ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ ಸಚಿವ ಪ್ರಭು ಚವ್ಜಾಣ್ ಅವರು ತರಬೇತಿ ಪಡೆಯುತ್ತಿದ್ದ ರೈತರೊಂದಿಗೆ ಸಂವಾದ ನಡೆಸಿದ ಸಂದರ್ಭದಲ್ಲಿ ಆನೇಕಲ್ ತಾಲ್ಲೂಕಿನ ನಂಜುಂಡೇಗೌಡ ಎನ್ನುವವರು ದೂರದ ಊರುಗಳಿಂದ ತರಬೇತಿಗಾಗಿ ಇಲ್ಲಿಯವರೆಗೂ ಬರಬೇಕಿದೆ. ಇದರ ಬದಲಾಗಿ ಜಿಲ್ಲಾ ಅಥವಾ ತಾಲ್ಲೂಕು ಕೇಂದ್ರಗಳಲ್ಲೆ ರಾಸು ಸಾಕಾಣಿಕೆ ಕುರಿತು ತರಬೇತಿ ನೀಡಿದರೆ ನನ್ನಂತಹ ಸಾವಿರಾರು ರೈತರು ಹೈನುಗಾರಿಕೆಯಲ್ಲಿ ತೊಡಗಲು ಸಹಕಾರಿಯಾಗುತ್ತದೆ ಎಂದು ಮನವಿ ಮಾಡುತ್ತಿದ್ದಂತೆ, ನಿಮ್ಮ ಸಲಹೆ ಉತ್ತಮವಾಗಿ ಮುಂದಿನ ದಿನಗಳಲ್ಲಿ ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಕ್ರಮವಹಿಸುತ್ತೆನೆ ಎಂದು ಭರವಸೆ ನೀಡಿದರು.

ಆರ್.ಕೆ.ವೈ ಯೋಜನೆಯಡಿ ರೂ.100.00 ಲಕ್ಷ ಅನುದಾನದಡಿ ಸ್ಥಾಪಿಸಲಾದ ಆಧುನಿಕ ಹಂದಿ ಸಾಕಾಣಿಕೆ ಕೇಂದ್ರಕ್ಕೆ ಭೇಟಿ ನೀಡಿ, ಆಧುನಿಕ ವೈಜ್ಞಾನಿಕತೆಯಿಂದ ಹಂದಿ ಸಾಕಾಣಿಕೆ ನಿರ್ವಹಣೆಯನ್ನು ಪರಿಶೀಲಿಸಿದರು. ಹಂದಿ ಸಾಕಾಣಿಕೆಯು ರೈತರಿಗೆ ಆರ್ಥಿಕ ಲಾಭದಾಯಕವಾಗಿದ್ದು ಗೋಹತ್ಯೆ ನಿಷೇಧ ಕಾನೂನು ಹಿನ್ನೆಲೆಯಲ್ಲಿ ಹಂದಿ ಸಾಕಾಣಿಕೆಗೆ ಪ್ರೋತ್ಸಾಹ ನೀಡಲು ರೈತರಿಗೆ ಹೆಚ್ಚಿನ ಮಾಹಿತಿ ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಎಮ್ಮೆ ತಳಿ ಸಂವರ್ಧನಾ ಕೇಂದ್ರಕ್ಕೆ ತೆರಳಿ ಸಾಕಾಣಿಕೆ ಮಾಡುತ್ತಿರುವ ಮಾದರಿಯನ್ನು ಪರಿಶೀಲನೆ ನಡೆಸಿದ ಸಚಿವ ಪ್ರಭು ಚವ್ಹಾಣ್, ಜಾನುವಾರು ಸಾಕಾಣಿಕೆ ಕೇಂದ್ರದಲ್ಲಿ ಸ್ವಚ್ಛತೆ, ಗುಣಮಟ್ಟ ಕಾಯ್ದುಕೊಳ್ಳುವಂತೆ ಸೂಚಿಸಿದರು.

ವೀರ್ಯ ಸಂಗ್ರಹಣೆಗೆ ಯೋಗ್ಯವಾದ ಹಳ್ಳಿಕಾರ್ ಮತ್ತು ಅಮೃತ್ ಮಹಲ್ ಹೋರಿ ಕರುಗಳ ಸಾಕಾಣಿಕೆ, ಹೆಚ್ ಎಫ್ ಹಾಗೂ ಮಿಶ್ರತಳಿ ರಾಸುಗಳ ಸಾಕಾಣಿಕೆ, ರಾಜ್ಯ ವೀರ್ಯ ಸಂಕಲನಾ ಕೇಂದ್ರಕ್ಕೆ ಬೇಕಾದ ಹಸಿ ಮತ್ತು ಒಣ ಮೇವು ಉತ್ಪಾದನೆ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ಆಯುಕ್ತ ಬಸವರಾಜೇಂದ್ರ, ನಿರ್ದೇಶಕ ಮಂಜುನಾಥ್ ಪಾಳೇಗಾರ್ ಸೇರಿದಂತೆ ಇಲಾಖೆಯ ವಿವಿಧ ವಿಭಾಗಗಳ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next