Advertisement

ರೋಗಿಗಳ ಸಮಸ್ಯೆ ಆಲಿಸಿದ ಆರೋಗ್ಯ ಸಚಿವ

09:25 PM Sep 25, 2019 | Team Udayavani |

ಚಾಮರಾಜನಗರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ನಗರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ರಾತ್ರಿ ಆಸ್ಪತ್ರೆಯಲ್ಲೇ ವ್ಯಾಸ್ತವ್ಯ ಹೂಡಿದರು. ಆರೋಗ್ಯ ಸಚಿವರು ಜಿಲ್ಲಾಸ್ಪತ್ರೆಗೆ ಆಗಮಿಸಿ, ವಿವಿಧ ವಿಭಾಗಗಳು, ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಮೊದಲಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ವಾರ್ಡ್‌ನಲ್ಲಿದ್ದ ರೋಗಿಗಳ ಆರೋಗ್ಯ ವಿಚಾರಿಸಿದರು. ರೋಗಿಗಳ ಹಾಸಿಗೆಯಲ್ಲಿಯೆ ಕುಳಿತು ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ಚಿಕಿತ್ಸೆ, ಔಷಧೋಪಚಾರಗಳ ಬಗ್ಗೆ ರೋಗಿಗಳಿಂದಲೇ ಮಾಹಿತಿ ಪಡೆದರು.

ಯೋಗಕ್ಷೇಮ ವಿಚಾರಣೆ: ಮಕ್ಕಳ ವಿಭಾಗಕ್ಕೆ ಭೇಟಿಕೊಟ್ಟು ಅಲ್ಲಿ ನೀಡಲಾಗುತ್ತಿರುವ ಚಿಕಿತ್ಸೆ ವಿಧಾನಗಳ ಬಗ್ಗೆ ವಿವರ ಪಡೆದರು. ಅಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯಗಳು ಸಿಗುತ್ತಿವೆಯೇ ಎಂಬ ಬಗ್ಗೆ ಪ್ರಶ್ನಿಸಿದರು. ರೋಗಿಗಳೊಂದಿಗೆ ಮಾತನಾಡಿ ಯೋಗಕ್ಷೇಮ ವಿಚಾರಿಸಿದರು.

ಚಿಕಿತ್ಸೆ ಸೌಲಭ್ಯಗಳ ಕುರಿತು ಮಾಹಿತಿ: ತುರ್ತು ಚಿಕಿತ್ಸಾ ಘಟಕಕ್ಕೆ ಭೇಟಿ ನೀಡಿ ಅಲ್ಲಿರುವ ವ್ಯವಸ್ಥೆಗಳನ್ನು ವೀಕ್ಷಿಸಿದರು. ಅಲ್ಲಿಯು ಸಹ ಚಿಕಿತ್ಸೆಗಾಗಿ ಬಂದಿದ್ದ ಸಾರ್ವಜನಿಕರೊಂದಿಗೆ ಮಾತನಾಡಿ ಚಿಕಿತ್ಸೆ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು. ಗ್ರಾಮೀಣ ಭಾಗದಿಂದ ಬಂದಿದ್ದ ತೀವ್ರತರದ ಅನಾರೋಗ್ಯಕ್ಕೆ ತುತ್ತಾಗಿದ್ದ ಓರ್ವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲು ಶಿಫಾರಸ್ಸು ಮಾಡುವಂತೆ ಸೂಚಿಸಿದರು.

ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಿ: ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಚಿಕಿತ್ಸೆ ನೀಡಬೇಕು. ಸರ್ಕಾರದ ಆರೋಗ್ಯ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಬೇಕು. ಔಷಧಿ, ಉಪಚಾರಗಳಿಗೆ ಯಾವುದೇ ದೂರು ಬಾರದಂತೆ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಸೂಚನೆ ನೀಡಿದರು.

Advertisement

ಆರೋಗ್ಯ ಯೋಜನೆಗಳ ಸದುಪಯೋಗಪಡಿಸಿಕೊಳ್ಳಿ: ಆಸ್ಪತ್ರೆಯ ಹೊರಭಾಗದಲ್ಲಿ ಜಮಾವಣೆಗೊಂಡಿದ್ದ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಆರೋಗ್ಯ ಸ‌ಚಿವರು, ಸರ್ಕಾರ ಬಡವರಿಗಾಗಿ 5 ಲಕ್ಷ ರೂ. ವರೆಗಿನ ಚಿಕಿತ್ಸಾ ವೆಚ್ಚವನ್ನು ಭರಿಸುತ್ತಿದೆ. ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು. ವಿವಿಧ ಆರೋಗ್ಯ ಯೋಜನೆಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಆಸ್ಪತ್ರೆಗಳಿಗೆ ಭೇಟಿ ಕೊಡುವೆ: ಸಾರ್ವಜನಿಕರ ಆರೋಗ್ಯ ಸೌಕರ್ಯ, ಕೊರತೆಗಳನ್ನು ತಿಳಿದು ಕ್ರಮ ವಹಿಸುವ ಸಲುವಾಗಿ ಆಸ್ಪತ್ರೆಗಳಿಗೆ ಭೇಟಿ ಕೊಡುತ್ತಿದ್ದೇನೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವಾಸ್ತವ್ಯ ಹೂಡುವ ಮೂಲಕ ಆರೋಗ್ಯ ಸೌಲಭ್ಯಗಳಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ಅಲಿಸುತ್ತಿದ್ದೇನೆ ಎಂದು ಸಚಿವರು ನುಡಿದರು.

ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹರ್ಷಲ್‌ ಬೋಯರ್‌ ನಾರಾಯಣರಾವ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ. ಆನಂದ್‌ಕುಮಾರ್‌, ಜಿಪಂ ಸದಸ್ಯ ಸಿ.ಎನ್‌.ಬಾಲರಾಜು, ಜಿಪಂ ಮಾಜಿ ಅಧ್ಯಕ್ಷಎಂ. ರಾಮಚಂದ್ರ, ಡಿಎಚ್‌ಒ ಡಾ. ಎಂ.ಸಿ. ರವಿ, ಡೀನ್‌ ರಾಜೇಂದ್ರ,ಮುಖಂಡರಾದ ನಿಜಗುಣರಾಜು, ಗಣೇಶ್‌ ದೀಕ್ಷಿತ್‌,ಮಹದೇವನಾಯಕ ಇದ್ದರು.

ಆಸ್ಪತ್ರೆಯಲ್ಲೇ ಸಚಿವರ ವಾಸ್ತವ್ಯ
ಚಾಮರಾಜನಗರ: ಜಿಲ್ಲಾ ಆಸ್ಪತ್ರೆಯ 2ನೇ ಮಹಡಿಯಲ್ಲಿರುವ ಪ್ರಯೋಗಾಲಯ ವಿಭಾಗದ ಡೆಮಾನ್‌ಷ್ಟ್ರೇಶನ್‌ ಕೊಠಡಿಯಲ್ಲಿ ಸಚಿವರು ವಾಸ್ತವ್ಯ ಹೂಡಿದರು. ಕೊಠಡಿಯಲ್ಲಿ ಸಚಿವರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಹಾಲು ಹಣ್ಣು ಸೇವಿಸಿದ ಶ್ರೀರಾಮುಲು ರಾತ್ರಿ 11.30ರ ಬಳಿಕ ಮಲಗಿದರು.

ಆರೋಗ್ಯ ಸಚಿವ ಶ್ರೀರಾಮುಲು ಅವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ವಾಸ್ತವ್ಯ ಹೂಡುವುದು ಪೂರ್ವ ನಿಗದಿತ ಕಾರ್ಯಕ್ರಮವಾದ್ದರಿಂದ ಮಂಗಳವಾರ ಜಿಲ್ಲಾಸ್ಪತ್ರೆಸಕಲ ರೀತಿಯಲ್ಲೂ ಸಿದ್ಧಗೊಂಡಿತ್ತು. ಎಲ್ಲ ವೈದ್ಯರೂ ಆಸ್ಪತ್ರೆಯಲ್ಲಿ ಕರ್ತವ್ಯನಿರತರಾಗಿದ್ದರು. ಎಲ್ಲವೂ ವ್ಯವಸ್ಥಿತವಾಗಿತ್ತು. ಪ್ರತಿದಿನ ಸ್ವಚ್ಛತೆ ಕಾಣದ ಆಸ್ಪತ್ರೆ ಸಚಿವರ ಭೇಟಿ ಹಿನ್ನೆಲೆಯಲ್ಲಿ ಸ್ವಚ್ಛವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next