ಮುಂಬಯಿ:ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಪಾಳಕ್ಕೆ ಹೊಡೆಯುತ್ತಿದ್ದೆ ಎಂದು ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದ ಕೇಂದ್ರ ಸಚಿವ ನಾರಾಯಣ ರಾಣೆ ಇದೀಗ ಬಂಧನ ಭೀತಿಗೆ ಒಳಗಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಉದ್ಧವ್ ಠಾಕ್ರೆ ವಿರುದ್ಧ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಸಚಿವ ನಾರಾಯಣ ರಾಣೆ ವಿರುದ್ಧ ಹಲವು ಎಫ್ ಐಆರ್ ಗಳು ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಕೊಂಕಣ್ ಪ್ರದೇಶದಲ್ಲಿ ಜನ ಆಶೀರ್ವಾದ ರಾಲಿಯಲ್ಲಿ ಭಾಗವಹಿಸಿರುವ ರಾಣೆಯನ್ನು ಬಂಧಿಸಲು ಪೊಲೀಸರು ಸ್ಥಳಕ್ಕೆ ತೆರಳಿರುವುದಾಗಿ ಮೂಲಗಳು ಹೇಳಿವೆ.
ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ್ದು ಯಾವ ವರ್ಷ ಎಂಬುದನ್ನು ತಿಳಿಯದೇ ಇರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ಸಚಿವ ನಾರಾಯಣ ರಾಣೆ ಹೇಳಿಕೆ ನೀಡಿದ್ದರು.
ಮುಖ್ಯಮಂತ್ರಿ ಠಾಕ್ರೆ ವಿರುದ್ಧ ನಾರಾಯಣ ರಾಣೆ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ಶಿವಸೇನಾ ಕಾರ್ಯಕರ್ತರು ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮುಂಬಯಿಯಲ್ಲಿರುವ ರಾಣೆ ನಿವಾಸದತ್ತ ಪ್ರತಿಭಟನಾ ಮೆರವಣಿಗೆ ತೆರಳಿದ್ದ ಪರಿಣಾಮ ಬಿಜೆಪಿ ಮತ್ತು ಶಿವಸೇನಾ ಕಾರ್ಯಕರ್ತರ ನಡುವೆ ಘರ್ಷಣೆ ಏರ್ಪಟ್ಟಿರುವುದಾಗಿ ವರದಿ ವಿವರಿಸಿದೆ.
ಮುಂಬಯಿ ಜುಹೂವಿನಲ್ಲಿರುವ ಮನೆಯ ಹೊರಭಾಗದಲ್ಲಿ ಘರ್ಷಣೆ ನಡೆದಿದ್ದು, ಕಲ್ಲು ತೂರಾಟ ಕೂಡಾ ನಡೆದಿದೆ. ಘಟನೆಯನ್ನು ಖಂಡಿಸಿ ಶಿವಸೇನಾ ಕಾರ್ಯಕರ್ತರು ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದು, ಇದರ ಪರಿಣಾಮ ಟ್ರಾಫಿಕ್ ಜಾಮ್ ಸಂಭವಿಸಿರುವುದಾಗಿ ವರದಿ ತಿಳಿಸಿದೆ.