ಹುಮನಾಬಾದ: ಕಂದಾಯ ಇಲಾಖೆಯ ಕೆಲ ಸೇವೆಗಳು ಜನರು ಮನೆಯಿಂದಲೇ ಪಡೆಯುವಂತೆ ಡಿಜಿಟಲ್ ವ್ಯವಸ್ಥೆ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಜನರಿಗೆ ಅನುಕೂಲ ಆಗಲಿದೆ ಎಂದು ಕಂದಾಯ ಸಚಿವ ಕೃಷ್ಣಭೈರೆಗೌಡ ಹೇಳಿದರು.
ಪಟ್ಟಣದ ತಹಶೀಲ್ದಾರ ಕಚೇರಿಗೆ ಆ.24ರ ಗುರುವಾರ ಮಧ್ಯಾಹ್ನ ಭೇಟಿ ನೀಡಿ ವಿವಿಧ ಇಲಾಖೆಗಳ ದಾಖಲೆಗಳ ಪರಿಶೀಲನೆ ಮಾಡುವುದರೊಂದಿಗೆ ಇಲಾಖೆಗಳಲ್ಲಿ ಇರುವ ಸಮಸ್ಯೆಗಳು ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕಂದಾಯ ಇಲಾಖೆಯ ವಿವಿಧ ಸೇವೆಗಳು ಇದೀಗ ಡಿಜಿಟಲ್ ಮಾದರಿಯಲ್ಲಿ ಪರಿವರ್ತನೆ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಸೇವೆಗಳು ಆನ್‌ಲೈನ್ ಮೂಲಕ ಜನರು ಮನೆಯಿಂದ ಸೇವೆ ಪಡೆಯುವಂತೆ ಮಾಡಲಾಗುವುದು ಎಂದರು.
ಕಂದಾಯ ಇಲಾಖೆ ಅಡಿಯಲ್ಲಿನ ನೋಂದಣೆ ಇಲಾಖೆ, ದಾಖಲೆಗಳ ಇಲಾಖೆ ಹಾಗೂ ಕಂದಾಯ ಇಲಾಖೆಯಲ್ಲಿನ ಸಮಸ್ಯೆಗಳು ಆಲಿಸುವ ನಿಟ್ಟಿನಲ್ಲಿ ಭೇಟಿ ನೀಡಿದ್ದೇನೆ. ತಾಲೂಕು ಕಚೇರಿಗಳಲ್ಲಿ ಉತ್ತಮ ಸೇವೆ ನೀಡಬೇಕಿದೆ ಎಂದು ಹೇಳಿದರು.
ಜನರು ಎದುರಿಸುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂದಿದ್ದೇನೆ. ದಿನನಿತ್ಯ ಜನರು ತಾಲೂಕು ಕಚೇರಿಗಳಿಗೆ ಭೇಟಿ ನೀಡುತ್ತಿದ್ದಾರೆ. ಜನರ ಹಳೆಯ ಎಲ್ಲಾ ದಾಖಲೆಗಳು ಸ್ಕಾನ್ ಮಾಡುವ ಕೆಲಸ ಮಾಡಬೇಕಿದೆ ಎಂದರು.
ಕೆಲ ಇಲಖೆಗಳಲ್ಲಿ ಅರ್ಜಿಗಳ ವಿಲೇವಾರಿ ತಡವಾಗುತ್ತಿದೆ. ಹೆಚ್ಚಿನ ಹಣ ಪಡೆಯುತ್ತಿದ್ದಾರೆ. ನಿಗದಿತ ಅವಧಿಗೆ ಜನರಿಗೆ ಸೇವೆಗಳು ಲಭ್ಯವಾಗುತ್ತಿಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಪಾರದರ್ಶ ಆಡಳಿತ ವ್ಯವಸ್ಥೆ ಜಾರಿಮಾಡಲಾಗುತ್ತಿದೆ. ಹೆಚ್ಚಿನ ಹಣ ಪಡೆಯುತ್ತಿರುವ ಇಲಾಖೆಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಲಾಗುವುದು. ಆಡಳಿತ ಸುದಾರಣೆ ಮಾಡುವ ಮೂಲಕ ಉತ್ತಮ ಸೇವೆ ನೀಡುವ ಗುರಿ ಇದೆ ಎಂದು ಹೇಳಿದರು.