Advertisement

ಮೀಸಲಾತಿ ಹಂಚಿಕೆಯಿಂದ ಯಾವುದೇ ಸಮುದಾಯಕ್ಕೂ ಅನ್ಯಾಯವಾಗಿಲ್ಲ: ಕೋಟ

06:21 PM Mar 30, 2023 | Team Udayavani |

ಉಡುಪಿ: ಮೀಸಲಾತಿ ಎಂಬ ಜೇನುಗೂಡಿಗೆ ಕೈ ಹಾಕಿ ಸಿಹಿಯನ್ನು ಎಲ್ಲ ಸಮುದಾಯಕ್ಕೂ ಹಂಚಿದ್ದೇವೆ. ಹೀಗಾಗಿ ಮೀಸಲಾತಿ ಹಂಚಿಕೆಯಿಂದ ಯಾವುದೇ ಸಮುದಾಯಕ್ಕೂ ಅನ್ಯಾಯವಾಗಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಮೀಸಲಾತಿ ಹೆಚ್ಚಳ ವಿಚಾರವಾಗಿ ದೇವರಾಜ ಅರಸು ಬಳಿಕ ದೊಡ್ಡ ಸಾಹಸ ಮಾಡಿದ ಸರಕಾರ ನಮ್ಮದು. ಊಹಿಸಲು ಸಾಧ್ಯವಾಗದ ಕಠಿನ ನಿರ್ಧಾರಗಳನ್ನು ತೆಗೆದುಕೊಂಡು ಎಲ್ಲ ಸಮುದಾಯಗಳಿಗೂ ನ್ಯಾಯ ನೀಡುವ ಪ್ರಯತ್ನ ಮಾಡಿದ್ದೇವೆ. ಇದರ ಜತೆಗೆ ವಿವಿಧ ಸಮುದಾಯಗಳಿಗೆ ಸುಮಾರು 20 ನಿಗಮ ಮಂಡಳಿ ಸ್ಥಾಪಿಸಿದ್ದೇವೆ. ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಿದ್ದೇವೆ ಎಂದು ಉಡುಪಿಯಲ್ಲಿ ಪತ್ರಕರ್ತರಿಗೆ ಅವರು ತಿಳಿಸಿದರು.

ಆರ್ಥಿಕವಾಗಿ ಹಿಂದುಳಿದವರಿಗೂ ಕೇಂದ್ರ ಸರಕಾರ ನೀಡಿರುವ ಶೇ. 10ರಷ್ಟು ಮೀಸಲಾತಿಯಲ್ಲಿ ಹಂಚಿಕೆ ಮಾಡಿದ್ದೇವೆ. ಧರ್ಮಾಧಾರಿತವಾಗಿ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಕರಾವಳಿಯಲ್ಲಿ ಬಂಟ ಸಮುದಾಯವು ರಾಷ್ಟ್ರೀಯತೆಯ ಬಗ್ಗೆ ವಿಶೇಷ ಒಲವನ್ನು ಹೊಂದಿದೆ. ಅವರ ಭಾವನೆಗಳನ್ನು ಗೌರವಿಸಲಿದ್ದೇವೆ ಎಂದರು.

ಅನಾಥ ಮಕ್ಕಳಿಗೆ ಮೀಸಲಾತಿ ನೀಡುವ ಸಂಬಂಧ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆಯವರು ವರದಿ ನೀಡಿದ್ದಾರೆ. ಅದರಂತೆ ಸರಕಾರ ಸೂಕ್ತ ಸ್ಪಂದನೆಯನ್ನು ವ್ಯಕ್ತಪಡಿಸಿ, ಬಹುತೇಕ ಒಪ್ಪಿಗೆ ಸೂಚಿಸಿದೆ ಎಂದರು.

ಚುನಾವಣೆ ಸಂದರ್ಭ ಸಮೀಕ್ಷೆಗಳು ಸಹಜ. ಆದರೆ ಅದನ್ನು ಮೀರಿದ ಗೆಲುವು ಬಿಜೆಪಿಗೆ ಸಿಗಲಿದೆ. ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಪಕ್ಷದ ವರಿಷ್ಠರು ಆಂತರಿಕ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಹಾಲಿ ಶಾಸಕರನ್ನು ಗಮನಿಸಿ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಟಿಕೆಟ್‌ ಹಂಚಿಕೆ ನಡೆಯಲಿದೆ. ಆರೆಸ್ಸೆಸ್‌ ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಮತ್ತು ಅದು ರಾಜಕೀಯ ಸಂಘಟನೆಯೂ ಅಲ್ಲ. ಆರೆಸ್ಸೆಸ್‌ ಹಿರಿಯರ ಮಾರ್ಗದರ್ಶನವನ್ನು ನಾವು ಪಡೆಯುತ್ತೇವೆ ಎಂದರು.

Advertisement

ಉರಿಗೌಡ, ನಂಜೇಗೌಡ ವಿಚಾರದಲ್ಲಿ ಒಕ್ಕಲಿಗ ಸಮುದಾಯದ ಸ್ವಾಮೀಜಿಯವರು ಪಕ್ಷದ ಪ್ರಮುಖರನ್ನು ಕರೆದು ಮಾತನಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಗುಡುಗು, ಸಿಡಿಲು ಸಹಜ. ಪ್ರಮೋದ್‌ ಮುತಾಲಿಕ್‌ ಯಾವುದೇ ಪಕ್ಷ ಅಥವಾ ಪಕ್ಷೇತರವಾಗಿ ಸ್ಪರ್ಧಿಸಲು ಸ್ವತಂತ್ರರು.

ಕಾರ್ಕಳದಲ್ಲಿ ಬಿಜೆಪಿ ಅಭ್ಯರ್ಥಿ ಜಯ ಸಾಧಿಸಲಿದ್ದಾರೆ. ರಾಜ್ಯದಲ್ಲಿ 150ಕ್ಕೂ ಅಧಿಕ ಸೀಟುಗಳೊಂದಿಗೆ ಅಧಿಕಾರಕ್ಕೆ ಬರಲಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next