Advertisement

ಪ್ರಜ್ಞಾವಂತ ಮತದಾರರು ಬಿಜೆಪಿಯನ್ನೇ ಗೆಲ್ಲಿಸ್ತಾರೆ : ಸಚಿವ ಕೆ.ಸುಧಾಕರ

03:06 PM Oct 19, 2021 | Team Udayavani |

ಹಾನಗಲ್ಲ: ಹಾನಗಲ್ಲ ಜನತೆ 5 ವರ್ಷದ ಅವಧಿಗೆ ಬಿಜೆಪಿಗೆ ಮತ ನೀಡಿದ್ದಾರೆ. ಆದರೆ ದಿ.ಸಿ.ಎಂ.ಉದಾಸಿ ಅವರ ಅಗಲಿಕೆಯಿಂದ ತೆರವಾದ ಸ್ಥಾನಕ್ಕೆ ಮತ್ತೆ ಚುನಾವಣೆ ಎದುರಾಗಿದ್ದು, ತಾಲೂಕಿನ ಪ್ರಜ್ಞಾವಂತ ಮತದಾರರು ಬಿಜೆಪಿಯನ್ನೇ ಆಯ್ಕೆ ಮಾಡಿ ಪೂರ್ಣಾವಧಿ  ಸೇವೆಗೆ ಅವಕಾಶ ನೀಡುತ್ತಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ.ಸುಧಾಕರ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿ ಜಿಲ್ಲೆಯ ಆರೋಗ್ಯ ಕ್ಷೇತ್ರಕ್ಕೆ ನಮ್ಮ ಸರ್ಕಾರ ಅಪಾರ ಕೊಡುಗೆ ನೀಡಿದೆ. ಅದರಲ್ಲಿ ಪ್ರಮುಖ ವಾಗಿ ಹಾವೇರಿಗೆ ಮೆಡಿಕಲ್‌ ಕಾಲೇಜು ಮಂಜೂರಾಗಿ ಕೆಲಸ ಪ್ರಗತಿಯಲ್ಲಿದೆ. ಕಾಮನ್‌ಮ್ಯಾನ್‌ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಜಿಲ್ಲೆಯವರಾಗಿದ್ದರಿಂದ ವಿಶೇಷ ಅನುದಾನ ನೀಡಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಮುಂದಾಗುವ ಕನಸು ಕಂಡಿದ್ದಾರೆ. ಅವರ ಕನಸು ನನಸಾಗಲು ಹಾನಗಲ್ಲಿನಲ್ಲಿ ಬಿಜೆಪಿ ಗೆಲ್ಲಿಸಲೇಬೇಕು ಎಂದರು.

ಚುನಾವಣಾ ಪ್ರಚಾರ ಕಾರ್ಯದಲ್ಲಿ ಜನಸ್ತೋಮ ನೋಡಿದರೆ ನಾವು ಗೆದ್ದೇ ಬಿಟ್ಟಿದ್ದೇವೆ ಎನ್ನುವ ಕಾಂಗ್ರೆಸ್‌ ನಾಯಕರು ಇಲ್ಲೇ ಠಿಕಾಣಿ ಹೂಡಿದ್ದೇಕೆ. ಬೆಂಗಳೂರಿಗೆ ಹೋಗಬಹುದಿತ್ತಲ್ಲ ಎಂದು ಕಟುಕಿದ ಅವರು, ಇದೆಲ್ಲ ಕಾಂಗ್ರೆಸ್ಸಿಗರ ದುರಹಂಕಾರದ ಮಾತುಗಳು. ಮತದಾರರನ್ನು ಖರೀದಿಸಿದವರಂತೆ ಮಾತನಾಡುತ್ತಾರೆ. ನಾಯಕರಿಗೆ ಇರಬೇಕಾದ ಜವಾಬ್ದಾರಿ ಇಲ್ಲ. ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತ ಜನರ ದಾರಿ ತಪ್ಪಿಸುತ್ತಿದ್ದಾರೆ. ಹಿಂದುಳಿದ ವರ್ಗದವರ ಬಗ್ಗೆ ಮಾತನಾಡುವ ಇವರು ಮನೋಹರ ತಹಶೀಲ್ದಾರ್‌ ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ಟಿದ್ದೇಕೆ? ಹಾಗೂ ಟಿಕೆಟ್‌ ನೀಡಿಲ್ಲವೇಕೆ ಎಂದು ಪ್ರಶ್ನಿಸಿದರು. ಅಲ್ಲದೇ, ಸಾಂಕ್ರಾಮಿಕ ರೋಗವನ್ನೂ ಕೂಡ ರಾಜಕೀಯಕ್ಕೆ ಬಳಸಿಕೊಳ್ಳು ವಂತಹ ಹೀನ ಸ್ಥಿತಿಗೆ ಕಾಂಗ್ರೆಸ್‌ ತಲುಪಿದೆ ಎಂದರು.

ಕೋವಿಡ್‌ ವಿಚಾರದಲ್ಲಿ ರಾಜ್ಯ ಉತ್ತಮ ನಿರ್ವಹಣೆ ಮಾಡಿರುವ ಕುರಿತು ಕೇಂದ್ರದಿಂದ ಪ್ರಶಂಸನಾ ಪತ್ರ ಪಡೆದಿದೆ. ಲಸಿಕೆ ಹಾಕುವುದರಲ್ಲಿ ನಮ್ಮ ದೇಶ ಇನ್ನು ಎರಡು ಮೂರು ದಿನಗಳಲ್ಲಿ 100 ಕೋಟಿ ಲಸಿಕೆ ಗುರಿ ಮುಟ್ಟಲಿದೆ. ಇಡೀ ವಿಶ್ವಕ್ಕೆ ಮಾದರಿ ಆಗಲಿದೆ. ಹಾನಗಲ್ಲ ಕ್ಷೇತ್ರದ ಉತ್ತಮ ಭವಿಷ್ಯಕ್ಕಾಗಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಈ ವೇಳೆ ಚುನಾವಣಾ ಉಸ್ತುವಾರಿ, ವಿಪ ಸದಸ್ಯ ಎನ್‌.ರವಿಕುಮಾರ, ಹಾನಗಲ್ಲ ಮಂಡಲ ಅಧ್ಯಕ್ಷ ನಿಂಗಪ್ಪ ಗೊಬ್ಬೇರ, ಸಿದ್ದರಾಜ್‌ ಕಲಕೋಟಿ, ಭೋಜರಾಜ ಕರೂದಿ, ಕಲ್ಯಾಣಕುಮಾರ್‌ ಶೆಟ್ಟರ್‌, ವಿ.ಎಸ್‌.ಪಾಟೀಲ, ಗುರು ಪಾಟೀಲ, ಹೇಮಲತಾ ನಾಯಕ, ಗಣೇಶ ಮೂಡಲಿ, ಡಾ| ಸುನೀಲ್‌ ಹಿರೇಮಠ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next