ಶಿವಮೊಗ್ಗ: ಬಿಜೆಪಿಯಲ್ಲಿ ಕುಟುಂಬ ವ್ಯವಸ್ಥೆಯಿದೆ. ಈ ಕುಟುಂಬ ವ್ಯವಸ್ಥೆಯಲ್ಲಿ ಕುಟುಂಬದ ಹಿರಿಯರು ತೀರ್ಮಾನ ತೆಗೆದುಕೊಂಡಿದ್ದಾರೆ. ನಾವು ನಮ್ಮ ವಿವೇಚನೆಯಲ್ಲಿ ತೀರ್ಮಾನ ಮಾಡಿ ತಕ್ಕಂತೆ ಅವರಿಗೆ ಪಟ್ಟಿ ಕಳುಹಿಸಿದ್ದೇವೆ. ಇದಕ್ಕಿಂತ ಒಳ್ಳೆಯದ್ದು ಎಂದು ಅವರು ಯೋಚನೆ ಮಾಡಿ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕು ಎಂಬ ಚಿಂತನೆ ಮಾಡಿಕೊಟ್ಟಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು ರಾಜ್ಯಸಭೆ ಟಿಕೆಟ್ ಹಂಚಿಕೆ ವಿಚಾರವಾಗಿ ಮಾತನಾಡಿದರು.
ಜಿಲ್ಲೆಯಲ್ಲಿ ಆಯ್ಕೆ ಆಗುವ ಮುಂಚೆ ನಗರದಲ್ಲಿ ಆಯ್ಕೆ ಆಗುತ್ತದೆ. ಜಿಲ್ಲೆಯಿಂದ ರಾಜ್ಯಕ್ಕೆ, ರಾಜ್ಯದಿಂದ ದೇಶಕ್ಕೆ ಆಯ್ಕೆ ಪ್ರಕ್ರಿಯೆ ಹೋಗುತ್ತದೆ. ಜಿಲ್ಲೆ, ರಾಜ್ಯ ಹಾಗೂ ದೇಶದ ಹಿತದೃಷ್ಟಿಯಿಂದ ಯೋಚನೆ ಮಾಡಿಯೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದಕ್ಕೆ ಅವರನ್ನು ಹಿರಿಯರು ಅಂತಾ ಕರೆಯುವುದು. ಆ ಹಿರಿಯರು ಏನು ತೀರ್ಮಾನ ತೆಗೆದುಕೊಂಡಿದ್ದಾರೆ. ಅದನ್ನು ಪಕ್ಷದ ಎಲ್ಲಾ ಕಾರ್ಯಕರ್ತರು ಸಂತೋಷದಿಂದ ಸ್ವಾಗತಿಸಿದ್ದಾರೆ ಎಂದಿದ್ದಾರೆ.
ರಾಜ್ಯಸಭಾ ಟಿಕೆಟ್ ಹಂಚಿಕೆಯಲ್ಲಿ ಅಸಮಾಧಾನ ಸಾಧ್ಯವೇ ಇಲ್ಲ. ಅಸಮಾಧಾನ ಎನ್ನುವ ಪ್ರಶ್ನೆಯೇ ಇಲ್ಲ. ಕೋರ್ ಕಮಿಟಿಯಲ್ಲಿ ಹೆಸರು ಕಳುಹಿಸಿದ್ದವರು ಸಹ ಈ ಆಯ್ಕೆಯನ್ನು ಸ್ವಾಗತಿಸಿದ್ದಾರೆ. ಪಟ್ಟಿಯಲ್ಲಿ ಈ ಎರಡು ಹೆಸರು ಇರಲಿಲ್ಲ. ಇವರ ಬಗ್ಗೆ ನಾವು ಚರ್ಚೆ ಮಾಡಿಲ್ಲ. ಸಂಘಟನೆಯನ್ನು ಶಕ್ತಿಶಾಲಿಯಾಗಿ ರೂಪಿಸುವಲ್ಲಿ ಈ ಆಯ್ಕೆ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿಯು ಕಾರ್ಯಕರ್ತರ ಶಕ್ತಿಯಿಂದಲೇ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.