ಬೆಂಗಳೂರು: ಪುಸ್ತಕಗಳ ಬಗೆಗಿನ ಅಭಿರುಚಿ ಬೆಳೆಸಲು ಲಂಡನ್, ನ್ಯೂಯಾರ್ಕ್ ಮಾದರಿಯಲ್ಲಿ ರಾಜ್ಯದಲ್ಲೂ “ಬುಕ್ ಪಾರ್ಕ್’ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಡಾ. ಜಯಾಮಾಲ ಹೇಳಿದ್ದಾರೆ.
ಕನ್ನಡ ಪುಸ್ತಕ ಪ್ರಾಧಿಕಾರದ “ಬೆಳ್ಳಿ ಹಬ್ಬ’ ಸಮಾರಂಭವನ್ನು ಬುಧವಾರ ಬೆಂಗಳೂರಿನ ನಯನ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ರಾಜಧಾನಿ ಬೆಂಗಳೂರು, ಮೈಸೂರು, ಧಾರವಾಡ ಸೇರಿದಂತೆ ರಾಜ್ಯದ ಪ್ರಮುಖ ಸ್ಥಳಗಳಲ್ಲಿ “ಬುಕ್ ಪಾರ್ಕ್’ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಲಂಡನ್ ಮತ್ತು ನ್ಯೂಯಾರ್ಕ್‌ಗೆ ನಾನು ಪ್ರವಾಸ ಕೈಗೊಂಡಿದ್ದಾಗ ಅಲ್ಲಿನ “ಬುಕ್ ಪಾರ್ಕ್’ಗಳನ್ನು ನೋಡಿದ್ದೇನೆ. ಅಲ್ಲಿ ಪುಸ್ತಕಗಳ ಜೋಡಣೆ, ಅಚ್ಚುಕಟ್ಟಾದ ವ್ಯವಸ್ಥೆ, ಹೊಸ-ಹೊಸ ಪುಸ್ತಕಗಳ ಲಭ್ಯತೆ, ಪುಸ್ತಕ ಸಂಸ್ಕೃತಿ ಬೆಳೆಸುವ ಸಂಬಂಧ ಅಲ್ಲಿ ನಡೆಯುವ ಚಟುವಟಿಕೆಗಳು, ಓದುಗರ ಅಭಿರುಚಿ, ಲೇಖಕರ ಮತ್ತು ಪ್ರಕಾಶಕರ ಆಸಕ್ತಿ ಕಂಡು ಇಂತಹದೊಂದು ವ್ಯವಸ್ಥೆ ನಮ್ಮಲ್ಲೂ ಯಾಕೆ ತರಬಾರದು ಎಂದು ಅನಿಸಿತು. ಈಗ ಕನ್ನಡ ಪುಸ್ತಕ ಪ್ರಾಧಿಕಾರ ಸಹ ಇದೇ ಪ್ರಸ್ತಾವನೆ ಸಲ್ಲಿಸಿದೆ. ಆದ್ದರಿಂದ ಓದುವ ಅಭಿರುಚಿ ಬೆಳೆಸಲು ಪ್ರಪಂಚದ ವಿವಿಧ ದೇಶಗಳ, ದೇಶದ ವಿವಿಧ ರಾಜ್ಯಗಳ ಪುಸ್ತಕಗಳು ಒಂದೆಡೆ ಲಭ್ಯವಾಗಬೇಕು. ಲೇಖಕರು ಮತ್ತು ಪ್ರಕಾಶಕರ ನಡುವೆ ಆರೋಗ್ಯಕರ ಪೈಪೋಟಿ ನಡೆಯಬೇಕು ಎಂಬ ಉದ್ದೇಶದಿಂದ ರಾಜ್ಯದಲ್ಲೂ “ಬುಕ್ ಪಾರ್ಕ್’ ಮಾಡಲಾಗುವುದು ಎಂದು ಸಚಿವೆ ಹೇಳಿದರು.
ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಅನುದಾನ ನೀಡುವಲ್ಲಿ “ಜಿಪುಣತನ’ ತೋರುವುದಿಲ್ಲ. ಪುಸ್ತಕ ಪ್ರಾಧಿಕಾರವಾಗಲಿ ಅಥವಾ ಕನ್ನಡ ಸಾಹಿತ್ಯ, ಭಾಷೆಗೆ ಸಂಬಂಧಿಸಿದ ಕೆಲಸ ಮಾಡುತ್ತಿರುವ ಎಲ್ಲ ಸಮಿತಿ, ಮಂಡಳಿ, ಪ್ರಾಧಿಕಾರಗಳಿಗೆ ಎಲ್ಲ ರೀತಿಯ ಸಹಕಾರ ನೀಡಲು ಸರ್ಕಾರ ಬದ್ಧವಾಗಿದೆ. ಏನೇ ಬೇಡಿಕೆಗಳಿದ್ದರೆ, ಅವುಗಳನ್ನು ಆದ್ಯತೆಯ ಮೇಲೆ ಈಡೇರಿಸಲಾಗುವುದು. ತೆರೆಗೆ ಸರಿದ ಅಥವಾ ಕಣ್ಣಿಗೆ ಕಾಣದ ಲೇಖಕರು ಮತ್ತು ಸಾಹಿತ್ಯವನ್ನು ಮುಂಚೂಣಿಗೆ ತರುವ ಕೆಲಸ ಪುಸ್ತಕ ಪ್ರಾಧಿಕಾರ ಮಾಡಬೇಕು. ಸಂಕಷ್ಟದಲ್ಲಿರುವ ಕಲಾವಿದರಿಗೆ ನೀಡಲಾಗುತ್ತಿರುವ ರೀತಿಯಲ್ಲಿ ಪ್ರಕಾಶಕರಿಗೂ ಮಾಸಾಶನ ನೀಡಬೇಕು ಎಂಬ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಕಳಿಸಿದ್ದೇನೆ ಎಂದು ಜಯಾಮಾಲ ತಿಳಿಸಿದರು.
ಮಾಜಿ ಅಧ್ಯಕ್ಷರಿಗೆ ಸನ್ಮಾನ: ಪುಸ್ತಕ ಪ್ರಾಧಿಕಾರದ ಹಿಂದಿನ ಅಧ್ಯಕ್ಷರುಗಳಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಡಾ. ಸಿದ್ದಲಿಂಗಯ್ಯ, ಪ್ರೊ. ಎಸ್.ಜಿ ಸಿದ್ದರಾಮಯ್ಯ ಹಾಗೂ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಲೋಕಾರ್ಪಣೆಗೊಂಡ ಪುಸ್ತಕಗಳ ಲೇಖಕರಿಗೆ ಇದೇ ವೇಳೆ ಸನ್ಮಾನಿಸಲಾಯಿತು. 25ಕ್ಕೂ ಹೆಚ್ಚು ಪುಸ್ತಕಗಳು, ದನಿ ಹೊತ್ತಿಗೆಗಳು, ಇ-ಪುಸ್ತಕ, ಸಾಕ್ಷ್ಯಚಿತ್ರ, ಅಂಚೆ ಲಕೋಟೆ, ಅಂಚೆ ಚೀಟಿ, ಪುಸ್ತಕ ಸೂಚಿ, ಪುಸ್ತಕ ಲೋಕ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಂಸದ ಎಂ. ವೀರಪ್ಪ ಮೊಯ್ಲಿ, ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ, ಮಾಜಿ ಅಧ್ಯಕ್ಷರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಡಾ. ಸಿದ್ದಲಿಂಗಯ್ಯ, ಪ್ರೊ. ಎಸ್.ಜಿ ಸಿದ್ದರಾಮಯ್ಯ, ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್ ಹೊಸಮನಿ, ಚೀಫ್ ಪೋಸ್ಟ್‌ಮಾಸ್ಟರ್ ಜನರಲ್ ಚಾರ್ಲ್ಸ್ ಲೋಬೋ ಮತ್ತಿತರರು ಇದ್ದರು.
ಕೈ ಕೊಟ್ಟ ಕರೆಂಟ್; ಸಚಿವರಿಗೆ ಪೇಚು
ಸಚಿವೆ ಜಯಮಾಲಾ ಭಾಷಣ ಮಾಡುತ್ತಿದ್ದಾಗ ಕರೆಂಟ್ ಕೈ ಕೊಟ್ಟಿತ್ತು. ಇದರಿಂದ ಸಚಿವರು ಪೇಚಿಗೆ ಸಿಲುಕಿದರು. ಮಧ್ಯಾಹ್ನ 12.30ಕ್ಕೆ ಕರೆಂಟ್ ಹೋಯಿತು. ಇಡೀ ಸಭಾಂಗಣ ಕತ್ತಲಮಯವಾಯಿತು. ಫ್ಯಾನ್ ಗಾಳಿ ಇಲ್ಲದೇ ಸಚಿವರು ಶಕೆ ಅನುಭವಿಸಿದರು. ವೇದಿಕೆಯಲ್ಲಿ ಮತ್ತು ಸಭಾಂಗಣದಲ್ಲಿದ್ದವರಿಗೆ ಆಹ್ವಾನ ಪತ್ರಿಕೆ, ಪುಸ್ತಕಗಳೇ ಗಾಳಿಯಾಡಿಸಿಕೊಳ್ಳುವ ಅಸ್ತ್ರವಾದವು. ಸಚಿವರ ಚಡಪಡಿಕೆ ನೋಡಲಾರದೆ, ಎದ್ದು ಬಂದ ವಸುಂಧರಾ ಭೂಮಪತಿ ಅವರನ್ನು ವೇದಿಕೆಯಲ್ಲಿ ಕೂರಿಸಿದರು. ನಿಮಿಷದ ಬಳಿಕ ಕರೆಂಟ್ ಬಂದಾಗ, ವೇದಿಕೆಗೆ ಬಂದು ಮಾತು ಆರಂಭಿಸಿದ ಸಚಿವರು, ವಿದ್ಯುತ್ ಅಡಚಣೆಗೆ ಸಭಿಕರಲ್ಲಿ ಕ್ಷಮೆ ಕೇಳಿದರು. ಮುಂದೆ ಇಂತಹ ಅನಾನುಕೂಲ ಆಗದಂತೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿ ಮಾತು ಮುಂದುವರಿಸಿದರು, ಕೆಲ ನಿಮಿಷದ ಬಳಿಕ ಮತ್ತೇ ಕರೆಂಟ್ ಕೈ ಕೊಟ್ಟಿತು. ಆಗ ಸಚಿವರು ನಕ್ಕು ಸುಮ್ಮನಾದರು.