Advertisement

Rain Situation ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿದ ಉಸ್ತುವಾರಿ ಸಚಿವೆ

12:08 AM Jul 22, 2024 | Team Udayavani |

ಮಲ್ಪೆ: ಮಳೆಯಿಂದ ಯಾವುದೇ ಅನಾಹುತ ಸಂಭವಿಸದಂತೆ ತಡೆಯಲು ಉಡುಪಿ ಜಿಲ್ಲಾಡಳಿತವು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

Advertisement

ಅವರು ರವಿವಾರ ಹೂಡೆ – ಗುಜ್ಜರಬೆಟ್ಟು ಸಹಿತ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮಳೆ ಹಾನಿ ಬಗ್ಗೆ ಮಾಹಿತಿ ಪಡೆದುಕೊಂಡರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ವಿಧಾನ ಮಂಡಲ ಅಧಿವೇಶನ ನಡೆಯುತ್ತಿದೆ. ಮಳೆ ಪರಿಸ್ಥಿತಿ ಕುರಿತು ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ರವಿವಾರ ರಜೆ ಇದ್ದರೂ ಪರಿಶೀಲಿಸಲು ಬಂದಿರುವೆ ಎಂದರು.

ಉಡುಪಿಯಲ್ಲೇ ಮನೆ ಮಾಡಲು ಸಿದ್ಧ
ನೆರೆ ಬಂದರೂ ಉಸ್ತುವಾರಿ ಸಚಿವರು ಉಡುಪಿಗೆ ಭೇಟಿ ನೀಡಿಲ್ಲ. ಅವರು ಇಲ್ಲೇ ಇರಬೇಕಿತ್ತೆಂದು ಜನರು ಹೇಳುತ್ತಿದ್ದಾರೆಂದು ಪತ್ರಕರ್ತರು ಸಚಿವರ ಗಮನಕ್ಕೆ ತಂದಾಗ, “ಅಗತ್ಯ ಬಿದ್ದರೆ ನಾನು ಇಲ್ಲೇ ಮನೆ ಮಾಡಿಕೊಂಡಿರಲು ಸಿದ್ಧನಿದ್ದೇನೆ. ದಿನದ 24 ಗಂಟೆಯೂ ಜಿಲ್ಲಾಡಳಿತ, ಸರಕಾರ ಎಚ್ಚರವಾಗಿದೆ. ಮಳೆ ಹಾನಿಯನ್ನು ತಡೆಯನ್ನು ಅಗತ್ಯ ಮುನ್ನೆಚ್ಚರಿಕೆ ಕೈಗೊಂಡಿದ್ದೇವೆ ಎಂದರು.

600 ಮರ ತೆರವು
25 ದಿನಗಳ ಹಿಂದೆಯೇ ಜಿಲ್ಲಾ ಮಟ್ಟದ ಮುಂಜಾಗ್ರತಾ ಸಭೆ ನಡೆಸಿ, ಬೀಳುವ ಹಂತದಲ್ಲಿರುವ ಮರಗಳನ್ನು ಕಡಿಯುವಂತೆ ಸೂಚಿಸಿದ್ದೆ. ಹಾಗಾಗಿ ಅರಣ್ಯ ಇಲಾಖೆ ವತಿಯಿಂದ 500ರಿಂದ 600 ಮರಗಳನ್ನು ತೆರವು ಮಾಡಲಾಗಿದೆ. ಶಾಲೆಯ ಪಕ್ಕ ಇರುವ ತಂತಿಗಳನ್ನು ತೆರವು ಮಾಡಲು ಮೆಸ್ಕಾಂಗೆ ಈ ಮೊದಲೇ ಸೂಚನೆ ನೀಡಿದ್ದು, ಅದಕ್ಕೂ ಅಧಿಕಾರಿಗಳು ಸ್ಪಂದಿಸಿದ್ದಾರೆ ಎಂದರು.

Advertisement

ತಾರತಮ್ಯ ಆಗಿಲ್ಲ
ನಗರದಲ್ಲಿ ಚರಂಡಿಯಿಂದ ಸಮಸ್ಯೆ ಆಗಿತ್ತಾದರೂ ಈಗ ಸರಿಪಡಿಸಲಾಗಿದೆ. ಕಾಲು ಸಂಕಗಳ ಸಮಸ್ಯೆ ಆಗದಂತೆ ನೋಡಿಕೊಂಡಿದ್ದೇವೆ. ಜಿಲ್ಲಾಡಳಿತದಿಂದ ಸಹಾಯವಾಣಿ ತೆರೆಯಲಾಗಿದೆ. ಮಳೆ ಹಾನಿ ಸಂಬಂಧಿಸಿ ಪರಿಹಾರ ನೀಡುವ ವಿಷಯದಲ್ಲಿ ಯಾವುದೇ ತಾರತಮ್ಯ ಆಗಿಲ್ಲ ಎಂದು ಸಚಿವೆ ಸ್ಪಷ್ಟ ಪಡಿಸಿದರು.

ಕಡಲ್ಕೊರೆತಕ್ಕೆ 5 ಕೋ. ರೂ. ಬಿಡುಗಡೆ ಆಗದ ಬಗ್ಗೆ ಪ್ರತಿಕ್ರಿಯಿಸಿದ ಸಚಿವೆ, ಹಳೆ ಬಾಕಿ ಪಾವತಿಗೆ ಪ್ರಸ್ತಾವನೆ ಸಲ್ಲಿಸಿದ್ದು, ತತ್‌ಕ್ಷಣ 5 ಕೋ. ರೂ. ಬಿಡುಗಡೆ ಮಾಡಲು ಮನವಿ ಮಾಡಲಾಗಿದೆ. ಅದು ಶೀಘ್ರದಲ್ಲಿ ಸಿಗುವ ಎಲ್ಲ ನಿರೀಕ್ಷೆ ಇದೆ ಎಂದರು.

ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ, ಎಸ್‌.ಪಿ. ಡಾ| ಕೆ.ಅರುಣ್‌, ಜಿಲ್ಲಾ ಪಂಚಾಯತ್‌ ಸಿಇಒ ಪ್ರತೀಕ್‌ ಬಯಲ್‌, ಕುಂದಾಪುರ ವಿಭಾಗದ ಸಹಾಯಕ ಆಯುಕ್ತ ಎಸ್‌. ಆರ್‌. ರಶ್ಮಿ, ತಹಶೀಲ್ದಾರ್‌ ಗುರುರಾಜ್‌ ಸಹಿತ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸಿಎಂ ಸಮರ್ಥರು
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ವಿರುದ್ಧ ಸಿಎಂ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದರು, ಸಿಬಿಐ ಕೊಡಿ ಎಂದು ಪತ್ರ ಬರೆದಿದ್ದಾರೆ.

ಸಿಎಂ ರಾಜಕೀಯಕ್ಕಾಗಿ ಆರೋಪ ಮಾಡುವುದಿಲ್ಲ. ಅವರು ಜವಾಬ್ದಾರಿಯುತ ಸ್ಥಾನ ದಲ್ಲಿದ್ದಾರೆ. ಖಚಿತತೆ ಇದ್ದರೆ ಮಾತ್ರ ಮಾತನಾ ಡುತ್ತಾರೆ. ಸಂಸದರಿಗೆ ಸಮರ್ಥ ಉತ್ತರ ಕೊಡುತ್ತಾರೆ ಎಂದು ಸಚಿವೆ ಹೆಬ್ಬಾಳ್ಕರ್ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next