ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ಕೋಟಾದಡಿ ಮುಸ್ಲಿಂ ಸಮುದಾಯದ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕೆಂದು ಜೆಡಿಎಸ್ ಹಿರಿಯ ಮುಖಂಡ ಎಚ್.ವಿಶ್ವನಾಥ್ ಒತ್ತಾಯಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಆವರು, ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ಮುಸ್ಲಿಂ ಸಮುದಾಯಕ್ಕೆ ಮಂತ್ರಿ ಮಂಡಲದಲ್ಲಿ ಅವಕಾಶ ನೀಡಿಲ್ಲ. ಇದು ಬೇಸರದ ಸಂಗತಿ. ಈಗಲಾದರೂ ತಕ್ಷಣ ಮಂತ್ರಿ ಸ್ಥಾನ ನೀಡಬೇಕೆಂದು ಆಗ್ರಹಿಸಿದರು.
ತೆಲಂಗಾಣದಲ್ಲಿ ಮುಸ್ಲಿಮರಿಗೆ ಅವಕಾಶ ನೀಡಲಾಗಿದೆ. ಆಂಧ್ರಪ್ರದೇಶದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರದಲ್ಲಿ ಮುಸ್ಲಿಂ ಸಮುದಾಯಕ್ಕೆ ಅವಕಾಶ ಕೊಟ್ಟಿದ್ದಾರೆ. ಯಡಿಯೂರಪ್ಪ ಅವರು ಸಹ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಮುಮ್ತಾಜ್ ಅಲಿ ಖಾನ್ ಅವರನ್ನು ಮಂತ್ರಿ ಮಾಡಿದ್ದರು. ಆದರೆ, ಜೆಡಿಎಸ್‌ನಿಂದ ನೀಡದಿರುವುದು ಸರಿಯಲ್ಲ ಎಂದು ಹೇಳಿದರು.
ದೇಶದ ರಾಜಕೀಯ ಪರಿಸ್ಥಿತಿ ಬದಲಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ನಮಗೆ ನಿರೀಕ್ಷಿತ ಬೆಂಬಲ ನೀಡದಿರಬಹುದು. ಆದರೆ, ಇತ್ತೀಚಿನ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬೆಂಬಲ ನೀಡಿದ್ದಾರೆ. ಈ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಗೆದ್ದವರ ಪೈಕಿ ಶೇ.40 ರಷ್ಟು ಮಂದಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂದು ದೇವೇಗೌಡರೇ ಸಂತಸ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ ಸಚಿವ ಸಂಪುಟದಲ್ಲಿ ನಮ್ಮ ಪಕ್ಷದಿಂದ ಆ ಸಮುದಾಯಕ್ಕೆ ಅವಕಾಶ ಕೊಡಬೇಕಲ್ಲವೇ ಎಂದರು.
ಈ ಹಿಂದೆ ಪಕ್ಷದ ವತಿಯಿಂದ ಖಾಲಿ ಇದ್ದ ಎರಡು ಸ್ಥಾನಗಳ ಪೈಕಿ ಒಂದು ಸ್ಥಾನವನ್ನು ಮುಸ್ಲಿಂ ಹಾಗೂ ಮತ್ತೂಂದು ಸ್ಥಾನ ದಲಿತರಿಗೆ ನೀಡಬೇಕಿತ್ತು ಎಂದು ಹೇಳಿದರು. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಮತ್ತೆ ಆ ಜಾಗದಲ್ಲಿ ಮುಂದುವರಿಯುವ ಪ್ರಶ್ನೆಯೇ ಇಲ್ಲ. ರಾಷ್ಟ್ರೀಯ ಅಧ್ಯಕ್ಷರಿಗೂ ಅದನ್ನೇ ಹೇಳಿದ್ದೇನೆ ಎಂದು ತಿಳಿಸಿದರು.