Advertisement

ತ್ಯಾಜ್ಯಮುಕ್ತ ಜಿಲ್ಲೆಯಾಗಿಸಲು ಸಹಕರಿಸಿ : ಸಚಿವ ಪ್ರಮೋದ್‌

08:35 AM Aug 08, 2017 | Harsha Rao |

ಉಡುಪಿ: ಉಡುಪಿ ಜಿಲ್ಲೆಯು ಶೈಕ್ಷಣಿಕ, ಆರೋಗ್ಯ, ಆರ್ಥಿಕ, ಜೀವನ ಮಟ್ಟ ಉತ್ತಮವಾಗಿದೆ; ಶಿಶು ಮರಣ ಪ್ರಮಾಣ ದರ, ತಾಯಿ ಮರಣ ಪ್ರಮಾಣ ದರವೂ ಕಡಿಮೆ ಇದೆ. ಆದರೆ ತ್ಯಾಜ್ಯ ಸಮಸ್ಯೆ ಮಾತ್ರ ಸವಾಲಾಗಿದ್ದು, ಎಲ್ಲರೂ ಸಹಕರಿಸಿದರೆ ಅದು ಕೂಡ ವರ್ಷದೊಳಗೆ ಪರಿಹಾರವಾಗಲಿದೆ. ಆನಂತರ ಉಡುಪಿ ಜಿಲ್ಲೆ ಸಮಸ್ಯೆ ಮುಕ್ತ ಜಿಲ್ಲೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

ಅವರು ಸೋಮವಾರ ರಜತಾದ್ರಿಯ ಅಟಲ್‌ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳಿಗೆ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಅವರು ಜಿಲ್ಲೆಯ ಪ್ರತಿ ಮನೆಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ ಒಂದು ವರ್ಷದೊಳಗೆ ಜಿಲ್ಲೆಯನ್ನು ತ್ಯಾಜ್ಯ ಮುಕ್ತ ಜಿಲ್ಲೆಯನ್ನಾಗಿ ಮಾಡಲಾಗುತ್ತದೆ ಎಂದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್‌ ಮಾತನಾಡಿ, ಸಮರ್ಪಕ ಕಸ ವಿಲೇವಾರಿ ಮನೆಯಿಂದಲೇ
ಆರಂಭವಾಗಬೇಕು. ಜಿಲ್ಲೆಯ ಎಲ್ಲ ಸರಕಾರಿ ಕಚೇರಿಗಳು ಮತ್ತು ಸರಕಾರಿ ವಸತಿ ಗೃಹಗಳ ಆವರಣದಲ್ಲಿ ತ್ಯಾಜ್ಯ ಮರು ಬಳಕೆ ಕುರಿತು ಅಭಿಯಾನದ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಿದರೆ ಫ‌ಲಪ್ರದವಾಗಬಹುದು ಎಂದು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿ ವೆಲ್ಲೂರು ಶ್ರೀನಿವಾಸನ್‌, ಉಡುಪಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಎಸ್‌ಪಿ ಕೆ.ಟಿ. ಬಾಲಕೃಷ್ಣ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್‌, ಪೌರಾಯುಕ್ತ ಡಿ. ಮಂಜುನಾಥಯ್ಯ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅರುಣ ಪ್ರಭ, ಕಾಪು ಪುರಸಭೆ ಮುಖ್ಯಾಧಿಕಾರಿ ರಾಯಪ್ಪ ಉಪಸ್ಥಿತರಿದ್ದರು.

Advertisement

5,000 ಜನರಿಗೆ ಉದ್ಯೋಗ  !
ಕಸವನ್ನು ರಸವಾಗಿ, ಬಂಗಾರವಾಗಿ ಪರಿವರ್ತಿಸಬೇಕಾಗಿದೆ. ವೆಲ್ಲೂರು ಶ್ರೀನಿವಾಸನ್‌ ಅವರ ತರಬೇತಿಯ ಸದುಪಯೋಗ ಪಡೆದ ಎಲ್ಲ ಜನಪ್ರತಿನಿಧಿಗಳೂ ಸಹ ತ್ಯಾಜ್ಯಮುಕ್ತ ಜಿಲ್ಲೆಯಾಗಿಸಲು ಕೈ ಜೋಡಿಸಬೇಕಿದೆ. ಜಿಲ್ಲೆಯಲ್ಲಿ ಉತ್ಪತ್ತಿಯಾಗುತ್ತಿರುವ ಕಸವನ್ನು ಸಂಪನ್ಮೂಲವಾಗಿ ಪರಿವರ್ತಿಸಿದರೆ 5,000 ಮಂದಿಗೆ ಉದ್ಯೋಗ ನೀಡಲು ಸಾಧ್ಯವಿದೆ. ತ್ಯಾಜ್ಯ ನಿರ್ಮೂಲನೆ ಜಿಲ್ಲೆಯ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next