Advertisement

ಬರ ನಿಭಾಯಿಸಲು ಸೂಕ್ತ ಕ್ರಮಕ್ಕೆ ಸಚಿವ ರೈ ಸೂಚನೆ

12:43 PM Mar 15, 2017 | |

ಬಂಟ್ವಾಳ: ಬರ ಪರಿಸ್ಥಿತಿ ನಿಭಾಯಿಸಲು ತಾ| ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸೂಚಿಸಿದ್ದಾರೆ.

Advertisement

ಅವರು ಮಾ.13ರಂದು  ತಾ.ಪಂ. ಎಸ್‌.ಜಿ.ಎಸ್‌.ವೈ ಸಭಾಂಗಣದಲ್ಲಿ ನಡೆದ ಬಂಟ್ವಾಳ ತಾಲೂಕು ಕೆಡಿಪಿ ತ್ತೈಮಾಸಿಕ ಸಭೆಯಲ್ಲಿ ಮಾತನಾಡಿದರು.

94ಸಿ ಅಡಿಯಲ್ಲಿ 17,600 ಅರ್ಜಿಗಳು ಬಂದಿದ್ದು ಈ ಪೈಕಿ 9,841 ಅರ್ಜಿಗಳನ್ನು ಇತ್ಯರ್ಥಪಡಿಸಿ ಹಕ್ಕುಪತ್ರ ವಿತರಿಸಲಾಗಿದೆ. ಉಳಿದ ಅರ್ಜಿಗಳು ತಾಂತ್ರಿಕ ಸಮಸ್ಯೆಯಿಂದ ವಿಲೇವಾರಿಗೆ ಬಾಕಿಯಾಗಿವೆ ಎಂದು ತಹಶೀಲ್ದಾರ್‌ ಪುರಂದರ ಹೆಗ್ಡೆ ಮಾಹಿತಿ ನೀಡಿದರು. ಜಿ.ಪಂ. ಸದಸ್ಯ ಎಂ.ಎಸ್‌.ಮುಹಮ್ಮದ್‌ ಅವರು ಮಾತನಾಡಿ, ಕೆಲವು ಗ್ರಾಮ ಕರಣಿಕರ ಕಾರ್ಯವೈಖರಿಯಿಂದಾಗಿ ಈ ಸಮಸ್ಯೆ ಪರಿಹಾರಕ್ಕೆ ವಿಳಂಬವಾಗುತ್ತಿದೆ ಎಂದು ಆರೋಪಿಸಿದರು.

ನೀರು ಪೂರೈಕೆ ಆರಂಭ 
ಕರೋಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಪೂರ್ಣ ಹಂತಕ್ಕೆ ತಲುಪಿದ್ದು ಇದರಲ್ಲಿ ಪ್ರಾಯೋಗಿಕವಾಗಿ ನೀರು ಪೂರೈಕೆ ಆರಂಭಿಸಲಾಗಿದೆ. ಸಂಗಬೆಟ್ಟು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಕೂಡ ಸಂಪೂರ್ಣ ಹಂತಕ್ಕೆ ತಲುಪಿದೆ ಎಂದು ಜಿ. ಪಂ.  ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಮಾಹಿತಿ ನೀಡಿದರು.

ಬಂಟ್ವಾಳದ ಒಂದು ನೂರು ಬೆಡ್‌ ಸಮುದಾಯ ಆರೋಗ್ಯ ಕೇಂದ್ರದ ಕಾಮಗಾರಿ ಮುಂದಿನ ವಾರ ಸಂಪೂರ್ಣಗೊಳ್ಳಲಿದೆ ಎಂದು ತಾ|  ಆರೋಗ್ಯಾಧಿಕಾರಿ ಡಾ| ದೀಪಾ ಪ್ರಭು ವಿವರಣೆ ನೀಡಿದರು. ತಾಲೂಕಿನಲ್ಲಿ ದಢಾರ-ರುಬೆಲ್ಲಾ ಕಾರ್ಯಕ್ರಮ ಶೇ. 98ರಷ್ಟು ಯಶಸ್ವಿಯಾಗಿದೆ. ತಾಲೂಕಿನಲ್ಲಿ ವೈದ್ಯಾಧಿಕಾರಿಗಳ ಕೊರೆತೆಯಿಲ್ಲ. ಪ್ರತೀ ಆರೋಗ್ಯಕೇಂದ್ರಕ್ಕೂ ವೈದ್ಯಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.

Advertisement

ಬಂಟ್ವಾಳ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಕುರಿತು ಏನೇನು ಬೇಕು ಎಂಬ ಕುರಿತು ವರದಿ ಸಲ್ಲಿಸುವಂತೆ ಸಚಿವ ರೈ ಪುರಸಭೆ ಮುಖ್ಯಾಧಿಕಾರಿ ಸುಧಾಕರ್‌ ಅವರಿಗೆ ಸೂಚಿಸಿದರು. ದೇವರಾಜ ಅರಸು ಭವನ ನಿರ್ಮಾಣ, ಎ.ಆರ್‌.ಟಿ.ಒ.ಕಚೇರಿ, ಮೊರಾರ್ಜಿ ದೇಸಾಯಿ ಶಾಲೆ ನಿರ್ಮಾಣಕ್ಕೆ ಜಾಗ ಗುರುತಿಸುವಂತೆ ಇದೇ ಸಂದರ್ಭ ತಹಶೀಲ್ದಾರ್‌ಗೆ ಸೂಚಿಸಿದರು.

ಗೂಡಂಗಡಿಗಳಲ್ಲಿ ಮದ್ಯ ಮಾರಾಟ 
ಗೂಡಂಗಡಿಗಳಲ್ಲಿ ಹಾಗೂ ಮನೆಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದ್ದು, ಅಬಕಾರಿ ಇಲಾಖೆ ಇದನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಜಿ.ಪಂ. ಸದಸ್ಯ ಚಂದ್ರಪ್ರಕಾಶ ಶೆಟ್ಟಿ ದೂರಿದರು. ಈ ಸಂದರ್ಭ ಉತ್ತರಿಸಿದ ಅಧಿಕಾರಿ, ಸರಕಾರಿ ಸೌಲಭ್ಯಗಳ ಕೊರತೆ ಇದೆ ಎಂದು ಅಳಲು ತೋಡಿಕೊಂಡರು. ಬೆಂಜನಪದವು ಕಾಲೇಜು ಮುಂಭಾಗದಲ್ಲಿರುವ ಎಂಎಸ್‌ಐಎಲ್‌ ಮದ್ಯದಂಗಡಿಯಲ್ಲಿ ಚಿಲ್ಲರೆ ಮದ್ಯದ ಬಾಟಲಿಗಳು ವಿಕ್ರಯವಾಗುತ್ತಿದೆ. ಇದು ಶಾಲೆ, ಕಾಲೇಜು ಮಕ್ಕಳ ಕೈಗೆ ಸಿಗುತ್ತಿದೆ. ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಸಜಿಪನಡು ಗ್ರಾ.ಪಂ.ನಲ್ಲಿ ಮದ್ಯ ಮಾರಾಟ ವಿಚಾರಕ್ಕೆ ಸಂಬಂಧಿಸಿ ಗ್ರಾಮಸಭೆಯೇ ರದ್ದುಗೊಂಡ ವಿಚಾರವನ್ನು ಜಿ.ಪಂ.  ಸದಸ್ಯ ರವೀಂದ್ರ ಕಂಬಳಿ ಸಭೆಯಲ್ಲಿ  ಪ್ರಸ್ತಾಪಿಸಿದರು.

ಖಾಸಗಿ ಬಸ್‌ ನಿಲ್ದಾಣ
ಸಾರ್ವಜನಿಕರ ಅನುಕೂಲಕ್ಕಾಗಿ ಬಿ.ಸಿ. ರೋಡ್‌ನ‌ಲ್ಲಿ ಬಸ್‌ ನಿಲ್ದಾಣ ನಿರ್ಮಿಸುವ ಕುರಿತಂತೆ ಸಭೆಯ ಬಳಿಕ ತಾಲೂಕಿನ ವಿವಿಧ ಅಧಿಕಾರಿಗಳ ಸಭೆಯನ್ನು ನಡೆಸಿದ ಸಚಿವರು ಈಗಿರುವ ತಾ.ಪಂ. ಹಳೆ ಕಟ್ಟಡ ಹಾಗೂ ಅದರ ಮುಂಭಾಗದಲ್ಲಿರುವ 
ಉಪ ನೋಂದಾಣಿ ಕಚೇರಿಯನ್ನು ತೆರವುಗೊಳಿಸಿ ಅಲ್ಲಿ ಪಿಪಿ ಮಾದರಿಯಲ್ಲಿ ಖಾಸಗಿ ಬಸ್‌ ನಿಲ್ದಾಣವನ್ನು ನಿರ್ಮಿಸಲು ಯೋಜನೆ ರೂಪಿಸುವಂತೆ ಸೂಚಿಸಿದರು. ಬಸ್‌ ನಿಲ್ದಾಣ ಮಾತ್ರವಲ್ಲದೆ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ ಮತ್ತು ವಾಣಿಜ್ಯ ಸಂಕೀರ್ಣವನ್ನು ಕೂಡ ಯೋಜನೆಯಲ್ಲಿ ಸೇರಿಸುವಂತೆ ಸೂಚಿಸಿದರು. ಸರ್ವೇ ಕಾರ್ಯವನ್ನು ನಡೆಸಿ ಎರಡು ತಿಂಗಳೊಳಗಾಗಿ ವರದಿ ಸಲ್ಲಿಸುವಂತೆ ನಿರ್ದೇಶಿಸಿದರು. ಅಲ್ಲದೆ ಪೊಲೀಸ್‌ ಠಾಣೆ ಮತ್ತು ನ್ಯಾಯಾಲಯಕ್ಕೆ ತೆರಳುವ ರಸ್ತೆಯನ್ನು ಕೂಡ ನಿರ್ಮಿಸುವಂತೆ ಸೂಚಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next