ಬೆಂಗಳೂರು: “ವಿಧಾನ ಪರಿಷತ್ತಿನಲ್ಲಿ ಹುಲಿ, ಕರಡಿಗಳಿಲ್ಲ. ನಮ್ಮನ್ನು ಕೊಲ್ಲುವಂಥವರು ಯಾರೂ ಇಲ್ಲ. ಇನ್ನು ಯಾಕೆ ಹೆದರಬೇಕು? ಹೆಣ್ಣು ಅಗ್ನಿಪರೀಕ್ಷೆ ಎದುರಿಸುವುದು ಅನಿವಾರ್ಯ. ಆದರೆ, ಅದನ್ನು ಮೆಟ್ಟಿ ನಿಲ್ಲಲು ಆಕೆಗೆ ಗೊತ್ತಿದೆ’.
ತಮಗೆ ಸಚಿವ ಸ್ಥಾನ ನೀಡಿದ ಬಗೆಗಿನ ಆಕ್ಷೇಪ ಎತ್ತಿದವರಿಗೆ ಸಚಿವೆ ಡಾ.ಜಯಮಾಲಾ ಅವರು ನೀಡಿದ ಖಡಕ್ ಉತ್ತರವಿದು.
ವಿಧಾನಸೌಧದಲ್ಲಿ ತಮಗೆ ಹಂಚಿಕೆಯಾಗಿದ್ದ ಕೊಠಡಿ ವೀಕ್ಷಿಸಲು ಬಂದಿದ್ದ ಡಾ.ಜಯಮಾಲಾ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮೋಟಮ್ಮ, ನಾಗರತ್ನ ಅಂಥವರು ಪ್ರಮುಖ ಹುದ್ದೆಗಳನ್ನು ಪಡೆದು ಅದನ್ನು ಸಮರ್ಥವಾಗಿ ನಿಭಾಯಿಸಿರಲಿಲ್ಲವೇ? ಅವರು ಹೆಣ್ಣುಮಕ್ಕಳಲ್ಲವೇ ಎಂದು ಟೀಕಾಕಾರರಿಗೆ ಮರುಪ್ರಶ್ನೆ ಹಾಕಿದ್ದಾರೆ.
ಹೆಣ್ಣಿನ ನಿಯತ್ತು ಪ್ರಶ್ನಿಸಿದರೆ ಆಕೆ ಹೆಚ್ಚು ಸಮರ್ಥವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ನನಗೆ ಸಚಿವ ಸ್ಥಾನ ನೀಡಿರುವ ಬಗ್ಗೆ ಎಚ್.ಎಂ.ರೇವಣ್ಣ ಆಕ್ಷೇಪ ವ್ಯಕ್ತಪಡಿಸಿ ಬೇರೊಬ್ಬರಿಗೆ ಕೊಡಬೇಕೆಂದು ಹೇಳಿದ್ದು ಸರಿಯಲ್ಲ. ಅವರಿಗೆ ಸಚಿವರಾಗುವ ಆಸೆ ಇದ್ದರೆ ನಮಗೂ ಬೇಕು ಎಂದು ವರಿಷ್ಟರನ್ನು ಕೇಳಬಹುದಿತ್ತು ಎಂದು ಹೇಳಿದ ಜಯಮಾಲಾ, ನನಗೆ ಸಚಿವ ಸ್ಥಾನ ನೀಡಿದ ಬಗ್ಗೆ ಪುರುಷರು ಅಪಸ್ವರ ಎತ್ತಿದರೆ ಅದನ್ನು ಒಪ್ಪಿಕೊಳ್ಳುವುದಿಲ್ಲ. ಮಹಿಳೆಯರು ಅಪಸ್ವರ ಎತ್ತಿದರೆ ಅಂಥವರಿಗೆ ಒಳ್ಳೆಯ ಅಧಿಕಾರ ಕೊಡಿ ಎಂದು ಕೇಳುತ್ತೇನೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣದ ಜತೆಗೆ ಕನ್ನಡ ಮತ್ತು ಸಂಸ್ಕೃತಿ ಖಾತೆಯನ್ನೂ ನನಗೆ ನೀಡಿದ್ದಾರೆ. ಮಹಿಳೆ ಮತ್ತು ಮಕ್ಕಳು ಸಂಸ್ಕೃತಿಯ ಜತೆ ಬೆರೆತಿದ್ದಾರೆಂಬ ಕಾರಣಕ್ಕೆ ಎರಡೂ ಖಾತೆಗಳನ್ನು ನನಗೆ ವಹಿಸಿದ್ದಾರೆ. ಇದನ್ನು ಸಮರ್ಥವಾಗಿ ನಿಭಾಯಿಸುತ್ತೇನೆಂದು ಜಯಮಾಲಾ ಹೇಳಿದರು.
ಸೆಕ್ಸ್ ವರ್ಕರ್ ತಪ್ಪು ದಮನಿತ ಮಹಿಳೆ ಸರಿ
“ಸೆಕ್ಸ್ ವರ್ಕರ್ಸ್’ (ಲೈಂಗಿಕ ಕಾರ್ಯಕರ್ತರು) ಪದಕ್ಕೆ ಪರ್ಯಾಯವಾಗಿ ಇನ್ಮುಂದೆ ದಮನಿತ ಮಹಿಳೆಯರು’ ಎಂದು ಕರೆಯುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಅಧಿಕಾರಿಗಳಿಗೆ ಸೂಚಿಸಿದರು. ಇಲಾಖೆ ಅಧಿಕಾರಿಗಳ ಜತೆ ಪ್ರಥಮ ಸಭೆ ನಡೆಸಿ ಮಾತನಾಡಿದ ಅವರು, ಸೆಕ್ಸ್ ವರ್ಕರ್ಸ್ ಎಂಬ ಪದ ಬಳಕೆ ಒಂದು ರೀತಿಯಲ್ಲಿ ಅವಮಾನಕರ ಎಂಬಂತಿದೆ. ಹೀಗಾಗಿ, ದಮನಿತ ಮಹಿಳೆಯರು ಎಂದು ಬಳಕೆ ಮಾಡಿ ಎಂದು ನಿರ್ದೇಶನ ನೀಡಿದರು.