Advertisement

ಸಚಿವರ ಮನವಿ: ಮೈಸೂರು ಝೂಗೆ ಹರಿದು ಬಂತು 73.16 ಲಕ ನೆರವು

02:15 PM Apr 30, 2020 | mahesh |

ಮೈಸೂರು: ಮೈಸೂರು ಮೃಗಾಲಯಕ್ಕೆ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್‌.ಟಿ. ಸೋಮಶೇಖರ್‌ ಅವರು 73.16 ಲಕ್ಷ ರೂಪಾಯಿ ದೇಣಿಗೆ ಚೆಕ್‌ ಅನ್ನು
ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್‌.ಟಿ. ಸೋಮ ಶೇಖರ್‌ ಅವರು, 5 ಸಾವಿರದಿಂದ ಒಂದೂವರೆ ಲಕ್ಷ ರೂಪಾಯಿವರೆಗೆ ಯಾವುದೇ ಪ್ರಾಣಿಗಳನ್ನು ತಾವು ದತ್ತು ತೆಗೆದುಕೊಳ್ಳಬಹುದು. ಡಿಡಿ, ಚೆಕ್‌ ಸೇರಿದಂತೆ ಎಲ್ಲ ರೀತಿಯಲ್ಲಿ ತಲುಪಿಸಬಹುದು ಎಂದು ನಾನು ವಾಟ್ಸಪ್‌ ಗ್ರೂಪ್‌ ಮೂಲಕ ನನ್ನ ಕ್ಷೇತ್ರದ ಸಾರ್ವಜನಿಕರಲ್ಲಿ ಮನವಿ ಮಾಡಿದ್ದೆ. ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ ಸಹಾಯದ ಮಹಾಪೂರವೇ
ಹರಿದುಬಂದಿದೆ ಎಂದು ತಿಳಿಸಿದರು.

Advertisement

ಇನ್ನೂ 25 ಲಕ್ಷ ಸಂಗ್ರಹಿಸಿ ಕೊಡುವೆ: ಇನ್ನೂ 25 ಲಕ್ಷ ರೂಪಾಯಿ ದೇಣಿಗೆ ಸಂಗ್ರಹಿಸಿ ಮೈಸೂರು ಮೃಗಾಲಯಕ್ಕೆ ನೀಡಲಿದ್ದೇನೆ. ಇದಕ್ಕಾಗಿ ಶಾಸಕರು, ಸಂಸದರು, ವಿಧಾನಪರಿಷತ್‌ ಸದಸ್ಯರು ಹಾಗೂ ದಾನಿಗಳ ನೆರವನ್ನು ಮಾಧ್ಯಮಗಳ ಮುಖಾಂತರ ಕೋರುತ್ತಿದ್ದೇನೆ ಎಂದು ಸಚಿವರು ತಿಳಿಸಿದರು. ನನ್ನ ಮನವಿಗೆ ಅನೇಕರು ಸ್ಪಂದಿಸಿದ್ದು, ಲಕ್ಷಾಂತರ ರೂಪಾಯಿ ದೇಣಿಗೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಅವರನ್ನು ಇಲ್ಲಿಗೆ ಕರೆಸಿ ಸನ್ಮಾನಿಸಲಾಗುವುದು. ಸಂದಿಗ್ಧ ಪರಿಸ್ಥಿತಿಯಲ್ಲಿ ಸಾರ್ವಜನಿಕರೂ ಸಹಕಾರ ನೀಡ ಬೇಕೆಂದು ನಾನು ಕೋರುತ್ತಿದ್ದೇನೆ. ಇನ್ನು ಮೈಸೂರು ಜಿಲ್ಲೆಯಲ್ಲಿ ಸೋಂಕು ಪ್ರಕರಣ ಹತೋಟಿಗೆ ಬರುತ್ತಿದೆ. ಗಂಭೀರ ಪರಿಸ್ಥಿತಿ ಎದುರಿಸುತ್ತಿದ್ದ ಒಬ್ಬರು ಸೋಂಕಿತರನ್ನು ಗುಣಮಾಡಲಾಗಿದೆ. ಇದು ಪ್ರಶಂಸನೀಯ ವಿಚಾರ ಎಂದು ಸಚಿವರು ತಿಳಿಸಿದರು. ವೈದ್ಯರಿಗೆ ಹಾಗೂ ನರ್ಸ್‌ಗಳ ಕಾರ್ಯ ಅಭಿನಂದನೀಯ. ಈ ಕೋವಿಡ್ ಭೀತಿ ಮುಗಿದ ಮೇಲೆ ಅವರಿಗೆ ಸನ್ಮಾನಿಸುವ ಕಾರ್ಯಕ್ರಮದ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಬಳಿ ಚರ್ಚಿಸುವೆ ಎಂದು ಸಚಿವರು ತಿಳಿಸಿದರು.

ಮೈಸೂರು ಇತಿಹಾಸದಲ್ಲೇ ಮೊದಲು: ಒಂದೇ ಬಾರಿ 73.16 ಲಕ್ಷ ರೂಪಾಯಿ ನೀಡಿರುವುದು. ಮೈಸೂರಿನ ಇತಿಹಾಸದಲ್ಲೇ ದಾಖಲೆ. ಇದು ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯವೈಖರಿ ಹಾಗೂ ಕಾಳಜಿಯನ್ನು ತೋರಿಸುತ್ತದೆ ಎಂದು ಶಾಸಕರಾದ ಎಸ್‌.ಎ. ರಾಮದಾಸ್‌ ಹೇಳಿದರು. ಮಾನ್ಯ ಸಚಿವರು ಮೃಗಾಲಯಕ್ಕೆ ಭೇಟಿ ಕೊಟ್ಟಾಗ ಅವರೂ ಪ್ರಾಣಿಗಳ ದತ್ತು ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಇನ್ನಷ್ಟು ದೇಣಿಗೆ ಸಂಗ್ರಹಿಸಿ ಕೊಡುವುದಾಗಿ ತಿಳಿಸಿದ್ದರು. ಈಗ ಅದರಂತೆ ನಡೆದುಕೊಂಡಿದ್ದಾರೆ. ಕೋವಿಡ್ ಸ್ಥಿತಿಯಲ್ಲಿ ಆಪತ್ಭಾಂಧವರಂತೆ ಸಚಿವರು ಬಂದಿದ್ದಾರೆ. ಕರೆಗೆ ಯಶಸ್ಸು ಸಿಕ್ಕಿದೆ ಎಂದು ಶಾಸಕ ರಾಮದಾಸ್‌ ತಿಳಿಸಿದರು.

ಮೃಗಾಲಯಕ್ಕೆ ಹೊಸ ದಿಕ್ಕು
ಮೈಸೂರು:
ಒಬ್ಬ ಸಚಿವರಾದವರು ಮನಸ್ಸು ಮಾಡಿದರೆ ಏನನ್ನೂ ಸಾಧಿಸಬಹುದು ಎಂಬುದನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್‌.ಟಿ.ಸೋಮಶೇಖರ್‌ ತೋರಿಸಿಕೊಟ್ಟಿದ್ದಾರೆ. ಮೊದಲು ರಾಜಕೀಯ ಪಟುಗಳಿಗೆ ಇಚ್ಛಾಶಕ್ತಿ ಇರ ಬೇಕಷ್ಟೆ ಎಂಬುದು ಮುಖ್ಯವಾಗುತ್ತದೆ. ಈಗ ಆ ಇಚ್ಛಾಶಕ್ತಿಯ ಪರಿಣಾಮವೇ ಮೈಸೂರು ಮೃಗಾಲಯಕ್ಕೆ ಹೊಸ ದಿಕ್ಕನ್ನು ನೀಡಲು ಹೊರಟಿದೆ. ಇದೀಗ ಪ್ರಾಣಿ ಸಂಗ್ರಹಾಲಯಕ್ಕೆ 73.16 ಲಕ್ಷ ಆರ್ಥಿಕ ನೆರವು ಹರಿದು ಬಂದಿದೆ. ದೇಶವೇ ಲಾಕ್‌ ಡೌನ್‌ ಪರಿಸ್ಥಿತಿ ಎದುರಿಸುತ್ತಿದೆ. ಇದರ ಬಿಸಿ ಮೃಗಾಲಯಗಳಿಗೂ ತಟ್ಟಿದೆ. ಯಾರೂ ಎಲ್ಲಿಯೂ ಸಂಚರಿಸದಿರುವುದರಿಂದ ಪ್ರವಾಸಿಗರ ಆಗಮನ ಶೂನ್ಯಕ್ಕೆ ಇಳಿದಿದೆ. ಈ ವಿಷಯ ಏಪ್ರಿಲ್‌ 22 ರಂದು ಮೈಸೂರಿನ
ಪ್ರಾಣಿ ಸಂಗ್ರಹಾಲಯಕ್ಕೆ ಸಚಿವರು ಭೇಟಿ ಕೊಟ್ಟಾಗ ಗಮನಕ್ಕೆ ಬಂದಿತ್ತು. ಆಗಲೇ ಅಲ್ಲಿನ ಪರಿಸ್ಥಿತಿಯನ್ನು ಮನಗಂಡ ಸಚಿವರು ತಕ್ಷಣ 1.75 ಲಕ್ಷ ರೂಪಾಯಿ ಹಣವನ್ನು ವೈಯಕ್ತಿಕವಾಗಿ ನೆರವನ್ನು ನೀಡುವ ಮೂಲಕ 5 ವರ್ಷದ ಚಾಮುಂಡಿ ಎಂಬ ಹೆಣ್ಣಾನೆಯನ್ನು 1 ವರ್ಷದ ಅವಧಿಗೆ ದತ್ತು ಪಡೆದರು. ಅಲ್ಲದೆ, ಅಲ್ಲಿರುವ 16 ಹುಲಿಗಳ ಒಂದು ದಿನದ ಮಾಂಸದ ಊಟದ ಖರ್ಚಾದ 25 ಸಾವಿರ ರೂಪಾಯಿಯ ನೆರವನ್ನೂ ನೀಡಿ ಮಾನವೀಯತೆ ಮೆರೆದರು. ಇಷ್ಟಕ್ಕೇ ಸುಮ್ಮನಾಗದ ಸಚಿವರು ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಮೈಸೂರು ಮೃಗಾಲಯಕ್ಕೆ ದಾನಿಗಳಿಂದ ದೇಣಿಗೆ ನೀಡುವಂತೆ ವೈಯಕ್ತಿಕವಾಗಿ ಮಾಡಿಕೊಂಡ ಒಂದು ಮನವಿಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಯಿತು. ಈಗ 73 ಲಕ್ಷ 16 ಸಾವಿರ ರೂಪಾಯಿ
ಸಂಗ್ರಹವಾಗಿದ್ದು, ಅದನ್ನು ಮೃಗಾಲಯಕ್ಕೆ ಸ್ವತಃ ಸಚಿವರು ಹಸ್ತಾಂತರ ಮಾಡಿದರು. ಸರ್ಕಾರದ ಯೋಜನೆಗಳ ಜೊತೆಗೆ ಸಾರ್ವಜನಿಕರ ಸಹಕಾರ ವನ್ನು ಪಡೆದರೆ ಹೀಗೆಯೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದು ಎಂಬುದನ್ನು ಈ ಮೂಲಕ ಸಚಿವ ಸೋಮಶೇಖರ್‌ ತೋರಿಸಿಕೊಟ್ಟಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next