Advertisement

ಗ್ರಾಪಂ ನೌಕರರಿಗೆ ಕನಿಷ್ಠ ವೇತನ ಮರೀಚಿಕೆ

09:09 AM Jan 17, 2018 | |

ಬೆಂಗಳೂರು: ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಅನ್ನುವುದು “ಮರೀಚಿಕೆಯಾಗಿದೆ’. ಕಳೆದ ಆಗಸ್ಟ್‌ನಲ್ಲೇ ಆದೇಶ ಹೊರಬಿದ್ದಿದ್ದು, ಈಗ ಆರು ತಿಂಗಳಾಗುತ್ತಾ ಬಂದರೂ ಅದು ಜಾರಿಗೆ ಬಂದಿಲ್ಲ.  ಈ ರೀತಿ, ಸರ್ಕಾರದ ಖಜಾನೆಯಿಂದಲೇ ತಮಗೆ
ಕನಿಷ್ಠ ವೇತನ ಸಿಗುತ್ತದೆ ಎಂದು ಆಸೆ ಇಟ್ಟುಕೊಂಡಿದ್ದ ರಾಜ್ಯದ 6,022 ಗ್ರಾಮ ಪಂಚಾಯಿತಿಗಳ ಸುಮಾರು 50 ಸಾವಿರ ನೌಕರರಿಗೆ ಸರ್ಕಾರಿ ಆದೇಶದಲ್ಲಿ ಮಾತ್ರ ಸಿಕ್ಕಿದ ಕನಿಷ್ಠ ವೇತನ ಭಾಗ್ಯ ಕೈಗೆ ಬರುತ್ತಿಲ್ಲ. ಹೀಗಾಗಿ ಕಂಗಾಲಾಗಿರುವ ಪಂಚಾಯಿತಿ ನೌಕರರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಗ್ರಾಮೀಣ ಜನತೆಯ ಬದುಕು ಹಸನು ಮಾಡಲು ಮೈಮುರಿದು ದುಡಿಯುವ ಈ ನೌಕರರಿಗೆ ತಿಂಗಳಿಗೆ ಸಿಗುತ್ತಿರುವುದು ಕನಿಷ್ಠ 500 ರೂ.ಗಳಿಂದ ಗರಿಷ್ಠ 2,300 ರೂ. ಮಾತ್ರ. ಗ್ರಾಮ ಪಂಚಾಯಿತಿಗಳಲ್ಲಿ ಬಿಲ್‌ ಕಲೆಕ್ಟರ್‌, ಕ್ಲರ್ಕ್‌ ಕಂ ಡಾಟಾ ಎಂಟ್ರಿ ಆಪರೇಟರ್‌, ವಾಟರ್‌ವೆುನ್‌, ಪಂಪ್‌ ಆಪರೇಟರ್‌, ಪಂಪ್‌ ಮೆಕ್ಯಾನಿಕ್‌, ಅಟೆಂಡರ್‌ ಮತ್ತು ಸ್ವತ್ಛತೆಗಾರ ಸೇರಿ ಒಟ್ಟು 50 ಸಾವಿರ ನೌಕರರು ಕೆಲಸ ಮಾಡುತ್ತಿದ್ದಾರೆ. ಇವರಿಗೆ ಕನಿಷ್ಠ ವೇತನ ಕೊಡುವ ಬಗ್ಗೆ ಕಳೆದ ಆಗಸ್ಟ್‌ನಲ್ಲೇ ಅಧಿಕೃತ ಆದೇಶವಾಗಿದೆ. ಆದರೆ, ಈ ಆದೇಶದ ಕಡತ ಮುಖ್ಯಮಂತ್ರಿ ಕಚೇರಿ, ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ಹಣಕಾಸು ಇಲಾಖೆಯ ನಡುವೆ ಅಲೆದಾಡುತ್ತಿದ್ದು, ಇದುವರೆಗೆ ಅದಕ್ಕೆ ಮುಕ್ತಿ ಸಿಕ್ಕಿಲ್ಲ.

Advertisement

ಕನಿಷ್ಠ ವೇತನ ಕೊಡಿ ಎಂದು ಪಂಚಾಯಿತಿ ನೌಕರರು 30 ವರ್ಷಗಳಿಂದ ಹೋರಾಟ ನಡೆಸುತ್ತಲೇ ಬಂದಿದ್ದರು. ಈ ಸಂಬಂಧ ಕಳೆದ ಜುಲೈನಲ್ಲಿ ಗ್ರಾಮ ಪಂಚಾಯಿತಿ ನೌಕರರ ಸಂಘದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದ ಮುಖ್ಯಮಂತ್ರಿಯವರು ನಗರ ಸ್ಥಳೀಯ
ಸಂಸ್ಥೆಗಳ ಖಾಯಂ ನೌಕರರಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ರಾಜ್ಯ ಹಣಕಾಸು ಅನುದಾನದಲ್ಲಿ ವೇತನ ಭರಿಸಲಾಗುತ್ತಿದ್ದು, ಅದರಂತೆ ಗ್ರಾಪಂ ನೌಕರರಿಗೆ 3ನೇ ಹಣಕಾಸು ಆಯೋಗದ ಶಿಫಾರಸಿನಂತೆ ವೇತನ ಪಾವತಿಸಲು ಕ್ರಮ ವಹಿಸುವಂತೆ ಆರ್ಥಿಕ ಇಲಾಖೆಗೆ ನಿರ್ದೇಶನ ನೀಡಿದ್ದರು. ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಅನುಮೋದನೆ ಕೊಟ್ಟ ಬಳಿಕ ಆಗಸ್ಟ್‌ನಲ್ಲಿ ಆದೇಶ ಹೊರಡಿಸಲಾಗಿತ್ತು. 

ಹಣದ್ದೇ ಸಮಸ್ಯೆ: ಪಂಚಾಯಿತಿಗಳಿಗೆ ಸರ್ಕಾರದಿಂದ ಬಿಡುಗಡೆಯಾಗುವ ಶಾಸನಬದ್ಧ ಅನುದಾನದಲ್ಲಿ ಶೇ.40 ಹಾಗೂ ಪಂಚಾಯಿತಿಗಳು ಸಂಗ್ರಹಿಸುವ ತೆರಿಗೆಯಲ್ಲಿ ಸಿಬ್ಬಂದಿಗೆ ವೇತನ ನೀಡುವ ವ್ಯವಸ್ಥೆ ಇದೆ. ಎಲ್ಲ ನೌಕರರಿಗೆ ಪ್ರತಿ ತಿಂಗಳು ಕನಿಷ್ಠ ವೇತನ ನೀಡಲು ಇದರಲ್ಲಿ ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ, ನೌಕರರಿಗೆ ತಿಂಗಳುಗಟ್ಟಲೇ, ಕೆಲವೊಮ್ಮೆ ವರ್ಷಗಟ್ಟಲೇ ವೇತನವೇ
ಸಿಗುತ್ತಿರಲಿಲ್ಲ. ಆರ್ಥಿಕ ಇಲಾಖೆಯ ಅಧಿಸೂಚನೆ ಮತ್ತು 3ನೇ ಹಣಕಾಸು ಆಯೋಗದ ಶಿಫಾರಸಿನಂತೆ 50 ಸಾವಿರ ಸಿಬ್ಬಂದಿಗೆ ಕನಿಷ್ಠ ವೇತನ ನೀಡಬೇಕಾ ದರೆ ವರ್ಷಕ್ಕೆ 802 ಕೋಟಿ ರೂ. ಬೇಕು. ಈಗ ವೇತನಕ್ಕೆಂದು ಸರ್ಕಾರ ನೀಡುತ್ತಿರುವುದು 255 ಕೋಟಿ
ರೂ. ಮಾತ್ರ. ಆದೇಶ ಜಾರಿಗೆ ಬಂದರೆ 574 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ. ಹಾಗಾಗಿ ಹಣದ ಸಮಸ್ಯೆಯಿಂದಾಗಿಯೇ ಆದೇಶ ಜಾರಿ ನನೆಗುದಿಗೆ ಬಿದ್ದಿದೆ ಎಂದು ಮೂಲಗಳು ತಿಳಿಸಿವೆ.

ಗ್ರಾಮ ಪಂಚಾಯಿತಿ ನೌಕರರಿಗೆ ಸರ್ಕಾರದ ಖಜಾನೆಯಿಂದಲೇ ಪ್ರತಿ ತಿಂಗಳು ನಿಯಮಿತವಾಗಿ ಕನಿಷ್ಠ ವೇತನ ನೀಡಬೇಕು
ಎಂದು ಸರ್ಕಾರಿ ಆದೇಶ ಹೊರಡಿಸಿದ್ದು ಬಿಟ್ಟರೆ, ಹಣ ಬಿಡುಗಡೆ ಆಗಿಲ್ಲ, ವೇತನ ಸಿಗುತ್ತಿಲ್ಲ. ಸಿಬ್ಬಂದಿಗೆ ಕಷ್ಟ ತಪ್ಪಿಲ್ಲ. ಶೀಘ್ರ ಸಭೆ ಕರೆಯುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಮುಂದೇನು ಎಂದು ಸಭೆ ಬಳಿಕ ತೀರ್ಮಾನಿಸಲಾಗುವುದು.
 ●ಮಾರುತಿ ಮಾನ್ಪಡೆ, ಗ್ರಾಪಂ ನೌಕರರ ಸಂಘದ ಅಧ್ಯಕ್ಷ

●ರಫಿಕ್‌ ಅಹ್ಮದ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next