ನವದೆಹಲಿ: ಭಾರತೀಯ ಹೆಣ್ಣು ಮಕ್ಕಳ ವಿವಾಹ ವಯಸ್ಸಿನ ಮಿತಿಯನ್ನು 18 ವರ್ಷದಿಂದ 21 ವರ್ಷಕ್ಕೆ ಏರಿಕೆ ಮಾಡುವ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ (ಡಿಸೆಂಬರ್ 15) ಅಂಕಿತ ಹಾಕಿರುವುದಾಗಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ತುಮರಿ : ಸೂಕ್ತ ಸಮಯಕ್ಕೆ ಅಂಬುಲೆನ್ಸ್ ಸಿಗದೇ ನವಜಾತ ಶಿಶು ಸಾವು
ಹೆಣ್ಣು ಮಕ್ಕಳ ವಿವಾಹದ ವಯೋ ಮಿತಿಯನ್ನು ಹೆಚ್ಚಳ ಮಾಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಂದರ್ಭದ ಭಾಷಣದಲ್ಲಿ ಪ್ರಸ್ತಾಪಿಸಿದ್ದರು.
ಹೆಣ್ಣುಮಕ್ಕಳು, ಸಹೋದರಿಯರ ಆರೋಗ್ಯದ ಬಗ್ಗೆ ಸರ್ಕಾರ ನಿರಂತರವಾಗಿ ಕಾಳಜಿ ವಹಿಸುತ್ತಿದೆ. ಅಪೌಷ್ಠಿಕತೆಯಿಂದ ಹೆಣ್ಣುಮಕ್ಕಳನ್ನು ರಕ್ಷಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳು ಸಮರ್ಪಕವಾದ ವಯಸ್ಸಿಗೆ ಮದುವೆಯಾಗಬೇಕಾದ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಪ್ರಸ್ತುತ ದೇಶದಲ್ಲಿ ವಿವಾಹವಾಗುವ ಕನಿಷ್ಠ ವಯಸ್ಸು ಗಂಡಿಗೆ 21 ವರ್ಷ, ಹೆಣ್ಣಿಗೆ 18 ವರ್ಷ ಎಂದು ನಿಗದಿಯಾಗಿತ್ತು. ಆದರೆ ಬಾಲ್ಯ ವಿವಾಹ ನಿಗ್ರಹಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಣ್ಣುಮಕ್ಕಳ ವಿವಾಹ ವಯೋ ಮಿತಿಯನ್ನು 18ರಿಂದ 21ಕ್ಕೆ ಏರಿಕೆ ಮಾಡಿದೆ.
ನೀತಿ ಆಯೋಗದ ಟಾಸ್ಕ್ ಪೋರ್ಸ್ ನ ಅಧ್ಯಕ್ಷೆ ಜಯಾ ಜೇಟ್ಲಿ ಹಾಗೂ ವಿಕೆ ಪೌಲ್ ಈ ಪ್ರಸ್ತಾಪವನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಅಲ್ಲದೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಉನ್ನತ ಶಿಕ್ಷಣ, ಕಾನೂನು ಸಚಿವಾಲಯ ಕೂಡಾ ಕೇಂದ್ರಕ್ಕೆ ಶಿಫಾರಸು ಮಾಡಿರುವುದಾಗಿ ವರದಿ ತಿಳಿಸಿದೆ.