ಕಮಲನಗರ: ಶ್ರದ್ಧೆ ಹಾಗೂ ಭಕ್ತಿ ಭಾವದಿಂದ ಪ್ರಭುವಿನ ಧ್ಯಾನ ಮಾಡಿದರೆ ಮನಸ್ಸಿಗೆ ಶಾಂತಿ ಹಾಗೂ ನೆಮ್ಮದಿ ಭಿಸುತ್ತದೆ ಎಂದು ಡೋಣಗಾಂವ(ಎಂ), ರಂಡ್ಯಾಳ, ಉದಗೀರನ ಹಾವಗೀಸ್ವಾಮಿ ಮಠದ ಪೀಠಾಧಿಪತಿ ಡಾ| ಶಂಭುಲಿಂಗ ಶಿವಾಚಾರ್ಯರು ಹೇಳಿದರು.
ತಾಲೂಕಿನ ಡೋಣಗಾಂವ(ಎಂ) ಗ್ರಾಮದಲ್ಲಿ ನಡೆದ ಹಾವಗೀಸ್ವಾಮಿ ಜಾತ್ರಾ ನಿಮಿತ್ತಅಗ್ನಿಕುಂಡಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಪ್ರತಿಯೊಬ್ಬರಿಗೂ ದೇವರಲ್ಲಿ ಭಕ್ತಿ, ನಂಬಿಕೆ, ನಿಷ್ಠೆ ಇರಬೇಕು. ಧರ್ಮ ಹಾಗೂ ಸಂಸ್ಕೃತಿ ಉಳಿಸಿ, ಬೆಳೆಸಬೇಕು. ಇದರಿಂದ ಸದೃಢ ಭಾರತ ನಿರ್ಮಾಣ ಸಾಧ್ಯ ಎಂದರು.
ಮಠದ ಉಮಾಕಾಂತ ದೇಶಿಕೇಂದ್ರ ಶ್ರೀಗಳು ಮಾತನಾಡಿ, ಇಂದಿನ ದಿನಗಳಲ್ಲಿ ಸಂಸ್ಕಾರಯುತ ಬದುಕುಕ್ಷೀಣವಾಗುತ್ತಿದೆ. ಇದರಿಂದಾಗಿ ಬದುಕಿನಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಬದುಕಿನಲ್ಲಿ ಸುಖ, ನೆಮ್ಮದಿ ಬೇಕಾದರೆ ದೇವರ ಆರಾಧನೆ, ಸತ್ಸಂಗಗಳಲ್ಲಿ ಪಾಲ್ಗೊಳ್ಳುವುದು ಅತ್ಯವಶ್ಯಕವಾಗಿದೆ ಎಂದರು.
ಅಗ್ನಿ ಕುಂಡಕ್ಕೆ ಪೂಜೆ: ಹಾವಗೀಸ್ವಾಮಿ ಮಠದ ಪೀಠಾಧಿಪತಿ ಡಾ| ಶಂಭುಲಿಂಗ ಶಿವಾಚಾರ್ಯರು ಅಗ್ನಿ ಕುಂಡಕ್ಕೆ ಪೂಜೆ ಸಲ್ಲಿಸಿದರು. ಹಾವಗೀಸ್ವಾಮಿ ಮಠದಿಂದ ಶುಕ್ರವಾರ ಬೆಳಗ್ಗೆ 6:30ಗಂಟೆಗೆ ಹಾವಗೀಸ್ವಾಮಿ ಅಪ್ಪನವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇಟ್ಟುಕೊಂಡು ಗ್ರಾಮದ ವಿವಿಧ ಓಣಿಗಳಲ್ಲಿ ಸಂಚರಿಸಲಾಯಿತು. ಭಕ್ತರು ದೇವರ ಮೇಲೆ ಜಲಾಭಿಷೇಕ ನೆರವೇರಿಸಿ ಇಷ್ಟಾರ್ಥ ಈಡೇರಿಸಿದರು.
ಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷ ಅಪ್ಪಾಸಾಬ ದೇಶಮುಖ, ಶೈಲೇಶ ಪೇನೆ, ಶೈಲೇಶ ದೇಶಮುಖ, ವಿಶಾಲ ದೇಶಮುಖ, ಬಾಲಾಜಿ ದೇಶಮುಖ, ಮಹಾಳಪ್ಪಾ ದೇಶಮುಖ, ಗಣೇಶ ಕಾರೇಗಾವೆ, ರವಿ ಚಿಂಚನಸೂರೆ, ಪ್ರದೀಪ ಚಿಂಚನಸೂರೆ, ಬಸವರಾಜ ಗಂದಗೆ, ರಾಜೇಂದ್ರ ಪೇನೆ, ಅಶೋಕ ದೇವರ್ಸೆ, ಅವಿನಾಶ ದೇಸಾಯಿ, ಶಿವು ದೇಸಾಯಿ, ಮನೋಜ ಪಾಂಚಾಳ, ಭಜನಾ ಮಂಡಳಿ ಸದಸ್ಯರಾದ ಮಾಣಿಕರಾವ ಹೊಂಡಾಳೆ, ರಮೇಶ ದೇಸಾಯಿ, ಮಾಧವರಾವ ನಳಗೀರೆ, ಬಾಬುರಾವ ಪಾಂಚಾಳ, ಸರೋಜನಾ, ಸುರೇಶ ಇದ್ದರು.