ಬಂಗಾರಪೇಟೆ: ಇತ್ತೀಚೆಗೆ ಹಾಲು ಉತ್ಪಾದಕರ ಸಂಖ್ಯೆ ಇಳಿಮುಖವಾಗುತ್ತಿದ್ದು, ಹಾಲು ಉತ್ಪಾದನೆ ಸಹ ಕುಂಠಿತಗೊಳ್ಳುತ್ತಿದೆ. ಈಗಾಗಲೇ ಸುಮಾರು 2000 ಸಂಘಗಳ ಮೂಲಕ ಹಾಲಿನ ದರವನ್ನು ಹೆಚ್ಚಿಸುವಂತೆ ಮನವಿ ಮಾಡಿದ್ದು, ಸರ್ಕಾರ ಕನಿಷ್ಠ 5 ರೂ.ಗಳನ್ನು ಏರಿಕೆ ಮಾಡಿದರೆ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಕೋಚಿಮುಲ್ ನಿರ್ದೇಶಕ ಜಯಸಿಂಹ ಕೃಷ್ಣಪ್ಪ (ಗೋಪಿ) ಸರ್ಕಾರಕ್ಕೆ ಒತ್ತಾಯ ಮಾಡಿದರು.
ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ಬೂದಿಕೋಟೆ ಹಾಲು ಉತ್ಪಾದಕರ ಸಹಕಾರ ಸಂಘದ 2021-22ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಒಕ್ಕೂಟದಿಂದ ಈ ಹಿಂದೆ ನಿತ್ಯ 12 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದ್ದು, ಈಗ 10 ಲಕ್ಷಕ್ಕೆ ಇಳಿದಿದ್ದು, ಹಾಲಿನ ಪೌಡರ್ ಉತ್ಪಾದನೆಗೂ ಕಷ್ಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಹಾಲಿನ ಸಮಸ್ಯೆ ಎದುರಾಗಬಾರದು ಎಂದರೆ, ಸರ್ಕಾರ ಎಚ್ಚೆತ್ತುಕೊಂಡು ಹಾಲಿನ ದರವನ್ನು ಏರಿಕೆ ಮಾಡಬೇಕು. ಈಗಾಗಲೇ ಒಕ್ಕೂಟದಿಂದ 3 ರೂ ಹೆಚ್ಚಿಗೆ ನೀಡುತ್ತಿರುವುದರಿಂದ ಒಕ್ಕೂಟಕ್ಕೆ ತಿಂಗಳಿಗೆ 9 ಕೋಟಿ ನಷ್ಟ ಉಂಟಾಗುತ್ತಿದೆ ಎಂದು ಹೇಳಿದರು.
ಹೈನುಗಾರಿಕೆಗೆ ಉತ್ತೇಜನ ನೀಡಲು ಬ್ಯಾಂಕ್ ನವರು ನೀಡಿದ ಸಾಲವನ್ನು ರೈತರು ಸಕಾಲಕ್ಕೆ ಮರುಪಾವತಿ ಮಾಡಿದರೆ ಇನ್ನಷ್ಟು ರೈತರು ಸಾಲ ಪಡೆದು ಹೈನುಗಾರಿಕೆ ಆರಂಭಿಸಲು ಸಾಧ್ಯವಾಗುತ್ತದೆ. ಚರ್ಮಗಂಟು ರೋಗದಿಂದ ಬಳಲುತ್ತಿರುವ ರಾಸುಗಳಿಗೆ ಒಕ್ಕೂಟದಿಂದ ವೈದ್ಯರನ್ನು ಕಳುಹಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಡೇರಿಯವರು ಹಾಲು ಹಾಕುವಂತೆ ರೈತರಿಗೆ ಒತ್ತಡವನ್ನು ಹೇರುತ್ತಿದ್ದಾರೆ. ಇದಕ್ಕೆ ಯಾರೂ ಆಸ್ಪದ ಕೊಡದೆ ಗುಣಮಟ್ಟದ ಹಾಲು ಪೂರೈಕೆ ಮಾಡಿ ಡೇರಿಗಳು ಬೆಳೆಯಲು ಒತ್ತು ಕೊಡಬೇಕು. ಕೋಚಿಮುಲ್ ಡೇರಿಗಳಿಗೆ ಹೆಚ್ಚು ಲಾಭಾಂಶ ಬಂದರೆ ಲಾಭದ ಹಣ ಪುನಃ ಉತ್ಪಾದಕರಿಗೆ ವಿತರಣೆ ಮಾಡಲಾಗುತ್ತದೆ. ಆದರೆ ಖಾಸಗಿ ಡೇರಿಗೆ ಲಾಭ ಬಂದರೆ ಕಾರ್ಪೊರೇಟ್ ಕಂಪನಿಗಳಿಗಾಗುತ್ತಿದೆ ಎಂದರು.
ಬೂದಿಕೋಟೆ ಸಹಕಾರ ಸಂಘದ ಅಧ್ಯಕ್ಷ ವಿ.ಮಾರ್ಕಂಡೇಗೌಡ ಮಾತನಾಡಿ, ಉತ್ಪಾದಕರು ಗುಣಮಟ್ಟದ ಹಾಲನ್ನು ಡೇರಿಗೆ ಪೂರೈಕೆ ಮಾಡಿದ್ದ ರಿಂದ ಸಂಘಕ್ಕೆ 14.84 ಲಕ್ಷ ಲಾಭ ಬಂದಿದೆ. ಈ ಹಣದಲ್ಲಿ 6 ಲಕ್ಷ ರೂ.ಗಳನ್ನು ರೈತರಿಗೆ ಬೋನಸ್ ರೂಪದಲ್ಲಿ ಹಂಚಿಕೆ ಮಾಡಲಾಗುತ್ತದೆ. ರೈತರು ಪ್ರತಿ ಲೀಟರ್ ಹಾಲಿಗೆ 400 ಗ್ರಾಂ ನಷ್ಟು ಪೀಡ್ಸ್‌ನ್ನು ನೀರಲ್ಲಿ ಬೆರಸಿ ದ್ರವ ರೂಪದಲ್ಲಿ ನೀಡದೇ ನೇರವಾಗಿ ನೀಡಿದರೆ ಗುಣಮಟ್ಟದ ಹಾಲು ಸಿಗುತ್ತದೆ ಎಂದರು.
ಕೋಚಿಮುಲ್ ಬಂಗಾರಪೇಟೆ ಶಿಬಿರದ ಉಪ ವ್ಯವಸ್ಥಾಪಕ ಡಾ.ವೆಂಕಟರಮಣ, ವಿಸ್ತರಣಾಧಿಕಾರಿ ಅಮರೇಶ್, ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಆರ್.ವಿಜಯಕುಮಾರ್, ಗ್ರಾಪಂ ಸದಸ್ಯ ಬಿ.ಕೃಷ್ಣಪ್ಪ ಶೆಟ್ಟಿ, ರಾಜಗೋಪಾಲ್, ಡೇರಿ ಸಂಘದ ಉಪಾಧ್ಯಕ್ಷ ಬಿ.ಚಂದ್ರಶೇಖರ್, ಮುಖ್ಯ ಕಾರ್ಯನಿರ್ವಾಹಕ ಜಿ.ಮುನಿರಾಜು, ನಿರ್ದೇಶಕರಾದ ಮಂಜುನಾಥ, ಗೋವಿಂದಪ್ಪ, ಚಂದ್ರಪ್ಪ, ವಿನೋದ್ ಕುಮಾರ್, ನಾರಾಯಣ, ಜೆ.ಆರ್.ನರೇಶ್, ಹಾಲು ಪರೀಕ್ಷಕ ಹರೀಶ್ ಕುಮಾರ್, ಪ್ರಮೋದ್ ಇತರರಿದ್ದರು.