Advertisement

ಮೈಸೂರಿಗೆ ಆಗಮಿಸಿದ ಮಿಲಿಂದ್‌ ಸೋಮನ್‌

01:41 PM Dec 27, 2022 | Team Udayavani |

ಮೈಸೂರು: ಮಿಲಿಂದ್‌ ಸೋಮನ್‌ ಸೈಕಲ್‌ ಮತ್ತು ಎಲೆಕ್ಟ್ರಿಕ್‌ ಸ್ಕೂಟರ್‌ಗಳಲ್ಲಿ ಎಂಟು ದಿನಗಳ ಸುಸ್ಥಿರ ಪ್ರಯಾಣ ಕೈಗೊಂಡಿದ್ದಾರೆ. ಪರಿಸರ ಸ್ನೇಹಿ ಸಾರಿಗೆ, ಸುಸ್ಥಿರ ಜೀವನ ಶೈಲಿ ಮತ್ತು ಆರೋಗ್ಯ ಮತ್ತು ಫಿಟ್ನೆಸ್‌ ಮಹತ್ವವನ್ನು ಸಾರುವ 1,400 ಕಿ.ಮೀ. ದೂರದ ಗ್ರೀನ್‌ ರೈಡ್‌ ಅಭಿಯಾನದಡಿ ಮಿಲಿಂದ್‌ ಸೋಮನ್‌ ಮುಂಬೈಯಿಂದ ಪ್ರಯಾಣ ಆರಂಭಿಸಿದ್ದಾರೆ.

Advertisement

ಗ್ರೀನ್‌ ರೈಡ್‌ಗೆ ಮುಂಬೈಯಲ್ಲಿ ಡಿ.19ರಂದು ಚಾಲನೆ ನೀಡಲಾಗಿತ್ತು. ಅಭಿಯಾನದ ಭಾಗವಾಗಿ ಮೈಸೂರಿಗೆ ಆಗಮಿಸಿದ ಮಿಲಿಂದ್‌ ಸೋಮನ್‌, ಬ್ಯಾಂಕಿನ ಮೈಸೂರಿನ ಪ್ರಾದೇಶಿಕ ಕಚೇರಿಗೆ ಆಗಮಿಸಿ ಸಿಬ್ಬಂದಿ, ಗ್ರಾಹಕರು ಮತ್ತು ಅಭಿಮಾನಿಗಳೊಂದಿಗೆ ಮಾತುಕತೆ ನಡೆಸಿದರು.

ಸ್ವತ್ಛ ಪರಿಸರದ ಮಹತ್ವವನ್ನು ಒತ್ತಿ ಹೇಳಿದ ಅವರು ಸುಸ್ಥಿರ ಮತ್ತು ಪರಿಸರ ಸ್ನೇಹಿ ಸಾರಿಗೆ ಮಾದರಿಗಳನ್ನು ಅನುಸರಿಸಲು ಕೋರಿದರು. ದೈನಂದಿನ ಜೀವನದಲ್ಲಿ ಫಿಟ್ನೆಸ್‌ ಎಷ್ಟು ಅಗತ್ಯ ಎಂಬುದನ್ನು ತಿಳಿಸಿದರು.

ಇದೇ ಸಂದರ್ಭದಲ್ಲಿ ಬ್ಯಾಂಕ್‌ ಅಧಿಕಾರಿಗಳೊಂದಿಗೆ ಕಚೇರಿಯ ಆವರಣದಲ್ಲಿ ಗಿಡಗಳನ್ನು ನೆಟ್ಟರು.

ಗ್ರೀನ್‌ ರೈಡ್‌ 2.0 ಉಪಕ್ರಮದ ಕುರಿತು ಮಾತನಾಡಿದ ಬ್ಯಾಂಕ್‌ ಆಫ್ ಬರೋಡದ ವಲಯ ಮುಖ್ಯಸ್ಥ ಮತ್ತು ಜನರಲ್‌ ಮ್ಯಾನೇಜರ್‌ ಸುಧಾಕರ ಡಿ. ನಾಯಕ್‌ ಅವರು, ಪರಿಸರ ಸಂರಕ್ಷಣೆ ದೇಶದ ಪ್ರತಿಯೊಬ್ಬ ಪ್ರಜೆಯೂ ದೇಶಕ್ಕಾಗಿ ಮಾಡಬೇಕಾದ ಕರ್ತವ್ಯ. ಈ ನಿಟ್ಟಿನಲ್ಲಿ ಇಡುವ ಪ್ರತಿಯೊಂದು ಸಣ್ಣ ಹೆಜ್ಜೆಯೂ ಸುಸ್ಥಿರ ಜೀವನ ಶೈಲಿಯತ್ತ ಕೊಂಡೊಯ್ದು, ಪರಿಸರ ಸಂರಕ್ಷಣೆಗೆ ದೊಡ್ಡ ಕೊಡುಗೆ ನೀಡಬಲ್ಲದು. ಈ ಕುರಿತು ಅರಿವು ಮೂಡಿಸಲು ಹಮ್ಮಿಕೊಂಡಿರುವ ಗ್ರೀನ್‌ ರೈಡ್‌ ಉಪಕ್ರಮದೊಂದಿಗೆ ಗುರುತಿಸಿಕೊಳ್ಳಲು ಬ್ಯಾಂಕ್‌ ಆಫ್ ಬರೋಡ ಹೆಮ್ಮೆ ಪಡುತ್ತದೆ. ಎಲ್ಲ ಭಾರತೀಯರೂ ಈ ನಿಟ್ಟಿನಲ್ಲಿ ಸಂಘಟಿತ ಕ್ರಮಗಳನ್ನು ಕೈಗೊಳ್ಳಬೇಕೆಂದು ಬ್ಯಾಂಕ್‌ ಆಶಿಸುತ್ತದೆ ಎಂದರು.

Advertisement

ಮಿಲಿಂದ್‌ ಸೋಮನ್‌ ಮಾತನಾಡಿ, ಒಂದು ಆಹ್ಲಾದಕರ ಮತ್ತು ಮಾಲಿನ್ಯ ಮುಕ್ತ ನಗರವಾಗಿ ಮೈಸೂರು ನನಗೆ ನೆನಪಿದೆ. ಆದರೆ ವರ್ಷದಿಂದ ವರ್ಷಕ್ಕೆ ಮಾಲಿನ್ಯ ಹೆಚ್ಚುತ್ತಿದೆ. ಮೈಸೂರಿನ ಜನರಿಗೆ ನನ್ನ ಸಂದೇಶವೇನೆಂದರೆ, ಉಸಿರಾಡಲು ಸ್ವತ್ಛ ವಾಯು ದೊರೆಯದಿದ್ದರೆ ನಗರ ಸಾಧಿಸುವ ಯಾವುದೇ ಅಭಿವೃದ್ಧಿ, ಬೆಳವಣಿಗೆಯೂ ನಿರರ್ಥಕ. ನಮ್ಮ ದೈನಂದಿನ ಜೀವನದಲ್ಲಿ ಒಂದು ಸಣ್ಣ ಬದಲಾವಣೆ ತಂದರೂ, ಉದಾಹರಣೆಗೆ ಸಣ್ಣ ದೂರದ ಪ್ರಯಾಣಕ್ಕೆ ಡ್ರೈವ್‌ ಮಾಡದೇ ನಡೆದುಕೊಂಡು ಹೋಗಿಯೋ ಅಥವಾ ಸೈಕ್ಲಿಂಗ್‌ ಮಾಡಿಯೋ, ಅಥವಾ ಎಲೆಕ್ಟ್ರಿಕ್‌ ವಾಹನಗಳನ್ನು ಬಳಸಿದರೆ, ಪರಿಸರದಲ್ಲಿ ದೊಡ್ಡ ಬದಲಾವಣೆಗಳನ್ನು ನಾವು ತರಬಹುದು. ಹಳೆಯ ಮೈಸೂರಿನ ವಾತಾವರಣವನ್ನು ಖುಷಿಯಿಂದ ಅನುಭವಿಸಬಹುದು ಎಂದರು.

ಬ್ಯಾಂಕ್‌ ಆಫ್ ಬರೋಡದ ಉಪ ಪ್ರಾದೇಶಿಕ ವ್ಯವಸ್ಥಾಪಕ ಲೋಕೇಶ್‌, ಬ್ಯಾಂಕ್‌ ಆಫ್ ಬರೋಡದ ಪ್ರಾದೇಶಿಕ ವ್ಯವಸ್ಥಾಪಕ ಅನುಜ್‌ ಅವಸ್ಥಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next