ಅಹಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯ ಇಂದು ನಡೆಯಲಿದೆ. ಭಾರತವಿಂದು ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ನಲ್ಲಿ ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಡಲಿದೆ. ಗುಜರಾತ್ ನ ಅಹಮದಾಬಾದ್ ನಲ್ಲಿರುವ ಮೊಟೆರಾ ಕ್ರೀಡಾಂಗಣದ ವಿಶೇಷತೆಗಳು ಕ್ರೀಡಾ ರಸಿಕರ ಗಮನ ಸೆಳೆಯುತ್ತಿದೆ.
ಮೊಟೆರಾ ಕ್ರೀಡಾಂಗಣವು ಈ ಹಿಂದಿನಿಂದಲೂ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಹಲವು ಐತಿಹಾಸಿಕ ಪಂದ್ಯಗಳು ಈ ಮೈದಾನದಲ್ಲಿ ನಡೆದಿದೆ.
ಗಾವಸ್ಕರ್ 10 ಸಾವಿರ ರನ್
ಲಿಟಲ್ ಮಾಸ್ಟರ್, ಭಾರತದ ಬ್ಯಾಟಿಂಗ್ ದಿಗ್ಗಜ ಇದೇ ಮೈದಾನದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಗಳಿಸಿದ ಸಾಧನೆ ಮಾಡಿದ್ದರು. 1987ರ ಮಾರ್ಚ್ 7ರಂದು ಪಾಕಿಸ್ಥಾನ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಗಾವಸ್ಕರ್ ಈ ದಾಖಲೆ ಮಾಡಿದ್ದರು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 10 ಸಾವಿರ ರನ್ ಗಳಿಸಿದ ಮೊತ್ತ ಮೊದಲ ಆಟಗಾರ ಇವರು.
ಇದನ್ನೂ ಓದಿ:ಮೊಟೆರಾ ನೈಟ್ಸ್ : ಕ್ರಿಕೆಟ್ ‘ರಾಜಾಂಗಣ’ದಲ್ಲಿಂದು ಪಿಂಕ್ ಬಾಲ್ ಟೆಸ್ಟ್
ಕಪಿಲ್ ದೇವ್ 432ನೇ ಟೆಸ್ಟ್ ವಿಕೆಟ್
ಭಾರತದ ಮಾಜಿ ನಾಯಕ, ಲೆಜೆಂಡರಿ ಆಲ್ ರೌಂಡರ್ ಕಪಿಲ್ ದೇವ್ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ವಿಕೆಟ್ ಕಿತ್ತ ಸಾಧನೆ ಮಾಡಿದ್ದು ಇದೇ ಮೊಟೆರಾ ಅಂಗಳದಲ್ಲಿ. 1994ರ ಶ್ರೀಲಂಕಾ ಎದುರಿನ ಪಂದ್ಯದಲ್ಲಿ ರಿಚರ್ಡ್ ಹ್ಯಾಡ್ಲಿ ಅವರ ಸರ್ವಾಧಿಕ 431 ವಿಕೆಟ್‌ಗಳ ವಿಶ್ವದಾಖಲೆಯನ್ನು ಕಪಿಲ್ ದೇವ್ ತಮ್ಮದಾಗಿಸಿಕೊಂಡದ್ದರು. ಇದಕ್ಕೂ ಮುನ್ನ 1983ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕಪಿಲ್ ಇದೇ ಅಂಗಳದಲ್ಲಿ ಜೀವನಶ್ರೇಷ್ಠ ಬೌಲಿಂಗ್ ಸಾಧನೆಗೈದಿದ್ದರು (83ಕ್ಕೆ 9 ವಿಕೆಟ್).
ಸಚಿನ್ ಮೊದಲ ಟೆಸ್ಟ್ ದ್ವಿಶತಕ
ಶತಕಗಳ ಸರದಾರ, ಮಾಸ್ಟರ್ ಬ್ಲಾಸ್ಟರ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ದ್ವಿಶತಕ ಬಾರಿಸಿದ್ದು ಇದೇ ಅಂಗಳದಲ್ಲಿ. 1999ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಸಚಿನ್ ಈ ದಾಖಲೆ ಮಾಡಿದ್ದರು. ಅಂದಿನ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ 217 ರನ್ ಗಳಿಸಿದ್ದರು.