ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಕ್ಯಾಂಪ್ ನಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಟಿ20 ಲೀಗ್ ಗಳ ಯಶಸ್ವಿ ಕೋಚ್ ಆ್ಯಂಡಿ ಫ್ಲವರ್ ಅವರನ್ನು ತಂಡದ ಮುಖ್ಯ ಕೋಚ್ ಆಗಿ ನೇಮಿಸಿದೆ. ಈ ಮೂಲಕ ಈ ಹಿಂದೆ ನಿರ್ದೇಶಕರಾಗಿದ್ದ ಮೈಕ್ ಹೆಸನ್ ಮತ್ತು ಮುಖ್ಯ ಕೋಚ್ ಆಗಿದ್ದ ಸಂಜಯ್ ಬಂಗಾರ್ ಅವರನ್ನು ಕೈ ಬಿಟ್ಟಿದೆ.
ಮೈಕ್ ಹೆಸನ್ ಅವರು ನಾಲ್ಕು ವರ್ಷಗಳ ಕಾಲ ಆರ್ ಸಿಬಿ ಕ್ಯಾಂಪ್ ನಲ್ಲಿದ್ದರು. ಈ ಸಮಯದಲ್ಲಿ ಮೊದಲ ಮೂರು ವರ್ಷ ಆರ್ ಸಿಬಿ ಪ್ಲೇ ಆಫ್ ಗೇರಲು ಸಫಲವಾಗಿತ್ತು. ಕಳೆದ ಸೀಸನ್ ನಲ್ಲಿ ಪ್ಲೇ ಆಫ್ ಗೇರಲು ವಿಫಲವಾಗಿತ್ತು.
ಆರ್ ಸಿಬಿ ಜೊತೆಗಿನ ಪಯಣ ಮುಗಿಸಿದ ಮೈಕ್ ಹೆಸನ್ ತನ್ನ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಭಾವುಕವಾಗಿ ಬರೆದುಕೊಂಡಿದ್ದಾರೆ. ತಂಡವನ್ನು ಪ್ರಶಸ್ತಿಯತ್ತ ಮುನ್ನಡೆಸಲು ವಿಫಲವಾಗಿದ್ದಕ್ಕೆ ಬೇಸರವಾಗಿದೆ ಎಂದು ಹೇಳಿಕೊಂಡಿದ್ದಾರೆ.
“ಕಳೆದ 4 ಸೀಸನ್ ಗಳಲ್ಲಿ ನಾವು 3 ಪ್ಲೇಆಫ್ ಪ್ರವೇಶ ಮಾಡುವಲ್ಲಿ ಸಾಧ್ಯವಾಗಿದ್ದರೂ ಟ್ರೋಫಿಯನ್ನು ಗೆಲ್ಲಲು ನಮಗೆ ಸಾಧ್ಯವಾಗಲಿಲ್ಲ. ಆರ್ ಸಿಬಿ ತೊರೆಯಲು ಬೇಸರವಾಗುತ್ತಿದ್ದರೂ ಉತ್ತಮ ವ್ಯಕ್ತಿಗಳೊಂದಿಗೆ ಕೆಲಸ ಮಾಡಿದ ಕೆಲವು ಅಚ್ಚುಮೆಚ್ಚಿನ ನೆನಪುಗಳನ್ನು ಹೊಂದಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
“ಆರ್ ಸಿಬಿ ಮ್ಯಾನೇಜ್ ಮೆಂಟ್ ಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಅದರೊಂದಿಗೆ ಹೊಸ ಕೋಚಿಂಗ್ ತಂಡಕ್ಕೆ ಆಲ್ ದಿ ಬೆಸ್ಟ್. ಆರ್‌ಸಿಬಿ ಅಭಿಮಾನಿಗಳೇ, ತಂಡಕ್ಕೆ ನಿಮ್ಮ ಬೆಂಬಲ ಅಚಲವಾಗಿದೆ ಅದಕ್ಕಾಗಿ ನಾನು ನಿಮಗೆ ಧನ್ಯವಾದ ಹೇಳುತ್ತೇನೆ” ಎಂದು ಅವರು ಹೇಳಿದರು.