ಬೆಂಗಳೂರು: ನಗರ ಜಿಲ್ಲಾಡಳಿತ ಪ್ರದೇಶ ವ್ಯಾಪ್ತಿಯ ಗಾರ್ಮೆಂಟ್ ಸೇರಿದಂತೆ ಇನ್ನಿತರ ಕಾರ್ಖಾನೆಗಳಲ್ಲಿ ತಮಿಳುನಾಡು ಭಾಗದ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಆ ಹಿನ್ನೆಲೆಯಲ್ಲಿಯೇ ಅನೇಕಲ್ ತಾಲೂಕಿನ ಮರಸೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರು 18 ವಿವಿಧ ಗಾರ್ಮೆಂಟ್ ಮತ್ತು ಇತರೆ ಕಂಪನಿಗಳ ಮಾಲೀಕರ ಮತ್ತು ಮಾನಸಂಪನ್ಮೂಲ ಅಧಿಕಾರಿಗಳ ಸಭೆ ನಡೆ ಚರ್ಚೆ ನಡೆಸಿದರು.
ತಮಿಳುನಾಡಿನಲ್ಲಿ ಕೊರೊನಾ ಸೋಂಕಿನ ಪ್ರಮಾಣ ಅಧಿಕವಾಗಿದೆ. ಆದರೆ ಯಾವುದೇ ಆರೋಗ್ಯ ತಪಾಸಣೆ ಇಲ್ಲದೇ ತಮಿಳುನಾಡು ಭಾಗದಿಂದ ಕಾರ್ಮಿಕರು ಮರಸೂರು ಗ್ರಾಪಂ ವ್ಯಾಪ್ತಿಯ ಹಲವು ಗಾರ್ಮೆಂಟ್ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಆ ಹಿನ್ನೆಲೆಯಲ್ಲಿಯೇ ಗ್ರಾಪಂ ಅಧ್ಯಕ್ಷರು ಸ್ಥಳೀಯ ಗಾರ್ಮೆಂಟ್ ಸೇರಿದಂತೆ ಇನ್ನಿತರ ಕಾರ್ಖಾನೆಯ ಮಾಲೀಕರ ಸಭೆ ನಡೆಸಿ ಸಮಾಲೋಚನೆ ನಡೆಸಿದರು.
ಈಗಾಗಲೇ ಸರ್ಕಾರ ಕೆಲವು ಷರತ್ತು ವಿಧಿಸಿ ಗಾರ್ಮೆಂಟ್ ಮೊದಲಾದ ಕಾರ್ಖಾನೆಗಳ ಕಾರ್ಯಕ್ಕೆ ಅನುಮತಿ ನೀಡಿದೆ. ಆದರೆ ಯಾವುದೇ ಕಾರಣಕ್ಕೂ ಆರೋಗ್ಯ ಪರೀಕ್ಷೆ ನಡೆಸದೇ ಹೊರ ರಾಜ್ಯದವರಿಗೆ ಕೆಲಸ ನೀಡುವುದು ಬೇಡ ಎಂದು ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಪ್ರಭಾಕರ ರೆಡ್ಡಿ ಮನವಿ ಮಾಡಿದರು. ಒಂದು ವೇಳೆ ಅಗತ್ಯವಿದ್ದರೆ. ಆರೋಗ್ಯ ತಪಾಸಣೆ ನಡೆಸಿ ಕೆಲಸಕ್ಕೆ ಅವರನ್ನು ತೆಗೆದುಕೊಳ್ಳಿ.ಇಲ್ಲವೇ ಸ್ಥಳೀಯರನ್ನೇ ಕೆಲಸಕ್ಕೆ ತೆಗೆದುಕೊಳ್ಳಿ ಎಂದು ಅಧ್ಯಕ್ಷರು ಹೇಳಿದರು. ತಮಿಳುನಾಡಿನಿಂದ ಬರುತ್ತಿರುವ ಕಾರ್ಮಿಕರಲ್ಲಿ ಸೋಂಕು ಕಂಡು ಬಂದರೆ ಅದಕ್ಕೆ ನೀವೇ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹೋಮ್ ಕ್ವಾರಂಟೈನ್‌ಗೆ ಸಮ್ಮತಿ: ಹೊರ ರಾಜ್ಯಗಳಿಂದ ಬರುತ್ತಿರುವ ಕಾರ್ಮಿಕರಿಗೆ 14 ದಿನಗಳ ಹೋಮ್ ಕ್ವಾರಂಟೈನ್ ಮಾಡಲು ಮರಸೂರು ಗ್ರಾಪಂ ನಿರ್ಧರಿಸಿತ್ತು. ಇದಕ್ಕೆ ಗಾರ್ಮೆಂಟ್ ಮತ್ತು ಇತರೆ ಕಾರ್ಖಾನೆಗಳ ಮಾಲೀಕರೂ ಒಪ್ಪಿಗೆ ಸೂಚಿಸಿದರು. ಆರೋಗ್ಯ ತಪಾಸಣೆಯ ಪತ್ರವಿಲ್ಲದೇ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಗಾರ್ಮೆಂಟ್ ಮಾಲೀಕರು ಅಭಯ ನೀಡಿದರು. 14 ದಿನಗಳ ಹೋಮ್ ಕ್ವಾರಂಟೈನ್ ಮುಗಿಸಿದ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುವುದಾಗಿ ಹೇಳಿದರು. ಕೊರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯನಿರ್ವಹಿಸುವುದಾಗಿ ಕೆಲವು ಕಂಪನಿಯ ಮಾನವಸಂಪನ್ಮೂಲ ಅಧಿಕಾರಿ ಗಳು ಸಭೆಗೆ ತಿಳಿಸಿದರು.
ತಮಿಳುನಾಡಿನಿಂದ ಬರುತ್ತಿರುವ ಕಾರ್ಮಿಕರಿಗೆ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಆ ಹಿನ್ನೆಲೆಯಲ್ಲಿ ಸಂಬಂಧ ಪಟ್ಟ ಗಾರ್ಮೆಂಟ್ ಮತ್ತು ಇತರೆ ಕಾರ್ಖಾನೆಗಳ ಮಾಲೀಕರ ಸಭೆ ನಡೆಸಲಾಗಿದ್ದು, ಹೊರ ರಾಜ್ಯದ ಕಾರ್ಮಿಕರನ್ನು 14 ದಿನಗಳ ಹೋಮ್ ಕ್ವಾರಂಟೈನ್ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
-ಶಶಿಕಿರಣ್, ಪಿಡಿಒ ಮರಸೂರು ಗ್ರಾಪಂ