Advertisement

ಜಮ್ಮು-ಕಾಶ್ಮೀರ: ಜೂ.6ರೊಳಗೆ ಪಂಡಿತರು ಸುರಕ್ಷಿತ ಸ್ಥಳಕ್ಕೆ

08:06 AM Jun 02, 2022 | Team Udayavani |

ಶ್ರೀನಗರ/ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಧಾನಮಂತ್ರಿಗಳ ವಿಶೇಷ ಯೋಜನೆಯಡಿ ಉದ್ಯೋಗದಲ್ಲಿರುವ ಕಾಶ್ಮೀರಿ ಉದ್ಯೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಲು ನಿರ್ಧರಿಸಿದೆ.

Advertisement

ಜೂ.6ರ ಒಳಗಾಗಿ ಈ ಪ್ರಕ್ರಿಯೆ ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರಾಡಳಿತ ಪ್ರದೇಶದ ಹಿರಿಯ ಅಧಿಕಾರಿ ಬುಧವಾರ ಜಮ್ಮುವಿನಲ್ಲಿ ತಿಳಿಸಿದ್ದಾರೆ.

ಪ್ರಧಾನಮಂತ್ರಿಗಳ ವಿಶೇಷ ಯೋಜನೆಯಡಿ ಕೆಲಸ ಮಾಡುತ್ತಿರುವ ಕಾಶ್ಮೀರ ಪಂಡಿತ ಸಮುದಾಯದವರನ್ನು ಉಗ್ರರು ಪತ್ತೆ ಹಚ್ಚಿ ಕೊಲ್ಲುತ್ತಿದ್ದಾರೆ. ಹೀಗಾಗಿ, ಯೋಜನೆಯ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಅಲ್ಪಸಂಖ್ಯಾತ ಕಾಶ್ಮೀರ ಪಂಡಿತ ಸಮುದಾಯದವರನ್ನು ಮತ್ತು ಇತರ ಉದ್ಯೋಗಿಗಳನ್ನು ಕೇಂದ್ರಾಡಳಿತ ಪ್ರದೇಶದ ಇತರ ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಲಾಗುತ್ತದೆ. ದುರ್ಗಮ ಮತ್ತು ಸಂಪರ್ಕಕ್ಕೆ ಸಿಗದ ಪ್ರದೇಶಗಳಲ್ಲಿ ಉದ್ಯೋಗಿಗಳು ಕೆಲಸ ಮಾಡದಂತೆಯೂ ನಿರ್ಧರಿಸಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ನೇತೃತ್ವದಲ್ಲಿ ಶಿಕ್ಷಕಿ ಹತ್ಯೆ ಬಳಿಕ ಉಂಟಾಗಿರುವ ಆಕ್ರೋಶದ ಹಿನ್ನೆಲೆಯಲ್ಲಿ ಸರಣಿ ಸಭೆಗಳನ್ನು ನಡೆಸಲಾಗಿದೆ. ಅಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ವಿಶೇಷ ಆದ್ಯತೆ:
ಪ್ರಧಾನಮಂತ್ರಿಗಳ ವಿಶೇಷ ಯೋಜನೆ ಅಡಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಸಮಸ್ಯೆ ನಿವಾರಿಸಲೋಸುಗ ಲೆಫ್ಟಿನೆಂಟ್‌ ಗವರ್ನರ್‌ ಕಚೇರಿಯ ವ್ಯಾಪ್ತಿಯಲ್ಲಿರುವ ಸಾಮಾನ್ಯ ಆಡಳಿತ ವಿಭಾಗ ವಿಶೇಷ ಇ-ಮೇಲ್‌ ಅನ್ನು ಸೃಷ್ಟಿಸಿದೆ. ಅದಕ್ಕೆ ಬರುವ ದೂರು, ಕುಂದು-ಕೊರತೆಗಳನ್ನು ಆದ್ಯತೆಯಲ್ಲಿ ಪರಿಹರಿಸಬೇಕು. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಕೂಡ ಉದ್ಯೋಗಿಗಳು ಹೊಂದಿರುವ ಸಮಸ್ಯೆ, ಕೊರತೆಗಳನ್ನು ಪರಿಹರಿಸಲು ಮುತುವರ್ಜಿ ವಹಿಸಬೇಕು ಎಂದೂ ಸಭೆಯಲ್ಲಿ ನಿರ್ಧರಿಸಲಾಗಿದೆ. ಜತೆಗೆ ಕಾಶ್ಮೀರಿ ಪಂಡಿತ ಸಮುದಾಯದ ಉದ್ಯೋಗಿಗಳು ಮತ್ತು ಯೋಜನೆಯ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಇತರರಲ್ಲಿ ಸುರಕ್ಷತೆಯ ಭಾವನೆಯನ್ನು ಮೂಡಿಸುವಂತೆಯೂ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಗಿದೆ.

Advertisement

ಬಿಗಿ ಭದ್ರತೆ:
ಶಿಕ್ಷಕಿ ರಜನಿ ಬಾಲಾ ಹತ್ಯೆ ಖಂಡಿಸಿ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಿಂದ ಸಾಮೂಹಿಕವಾಗಿ ವಲಸೆ ಹೋಗುವ ಬೆದರಿಕೆಯನ್ನು ಕಾಶ್ಮೀರಿ ಪಂಡಿತರು ಈಗಾಗಲೇ ಒಡ್ಡಿದ್ದಾರೆ. ಅದಕ್ಕೆ ಪೂರಕವಾಗಿ ಶ್ರೀನಗರದ ವೆಸು ಪಂಡಿತ್‌ ಎಂಬಲ್ಲಿರುವ ಕಾಶ್ಮೀರಿ ಪಂಡಿತರ ಕಾಲೋನಿಗೆ ಬಿಗಿ ಭದ್ರತೆಯನ್ನು ಒದಗಿಸಲು ಸ್ಥಳೀಯ ಆಡಳಿತ ನಿರ್ಧರಿಸಿದೆ. ಪ್ರಧಾನಮಂತ್ರಿಗಳ ವಿಶೇಷ ಪ್ಯಾಕೇಜ್‌ ಅಡಿ 4 ಸಾವಿರ ಮಂದಿ ಕಾಶ್ಮೀರಿ ಪಂಡಿತರು ಉದ್ಯೋಗದಲ್ಲಿ ಇದ್ದಾರೆ. ಅವರೆಲ್ಲರೂ, ತಮ್ಮನ್ನು ಜಮ್ಮುವಿಗೆ ಸ್ಥಳಾಂತರಿಸಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ.

ಪ್ರತಿಭಟನೆ:
ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂವ್‌ನಲ್ಲಿ ಕಾಶ್ಮೀರಿ ಪಂಡಿತ ಸಮುದಾಯದ ಶಿಕ್ಷಕಿ ರಜನಿ ಬಾಲಾ ಹತ್ಯೆ ಖಂಡಿಸಿ ಬುಧವಾರ ಅಲ್ಲಲ್ಲಿ ಪ್ರತಿಭಟನೆಗಳು ನಡೆದಿವೆ. ಜಮ್ಮು, ಸಂಬಾ ಮತ್ತು ಕತುವಾ ಜಿಲ್ಲೆಗಳಲ್ಲಿ ಕಾಶ್ಮೀರ ಪಂಡಿತ ಸಮುದಾಯದವರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ. ಸಂಬಾದಲ್ಲಿ ಪ್ರತಿಭಟನಾಕಾರರು ಜಮ್ಮು- ಪಠಾಣ್‌ಕೋಟ್‌ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು. ಶಿಕ್ಷಕಿ ರಜನಿ ಬಾಲಾ (36) ಅವರ ಹತ್ಯೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ರಜನಿ ಬಾಲಾ ವರ್ಗಾವಣೆಗೊಳ್ಳಬೇಕು ಎಂದು ಹಲವು ತಿಂಗಳಿಂದ ಪ್ರಯತ್ನ ಮಾಡುತ್ತಿದ್ದರೂ, ಜಿಲ್ಲಾ ಪಂಚಾಯಿತಿ ಸಿಇಒ ಅದಕ್ಕೆ ಲಕ್ಷ್ಯ ವಹಿಸಲಿಲ್ಲ ಎಂದು ದೂರಿದ್ದಾರೆ. ಕೊನೇ ಹಂತವಾಗಿ ಸೋಮವಾರ ಅವರಿಗೆ ವರ್ಗಾವಣೆ ಆದೇಶ ಲಭಿಸಿತ್ತು. ಜಮ್ಮು ನಗರದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ರಜನಿ ಅವರ ತವರು ಜಿಲ್ಲೆ ಸಾಂಬಾದಲ್ಲಿ ಘಟನೆ ಖಂಡಿಸಿ ಸ್ವಯಂ ಪ್ರೇರಿತವಾಗಿ ಬಂದ್‌ ನಡೆಸಲಾಯಿತು. ಈ ನಡುವೆ, ಹತ್ಯೆಗೀಡಾದ ರಜನಿ ಅವರ ಅಂತ್ಯಕ್ರಿಯೆ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆಯಿತು.

ಭಯೋತ್ಪಾದನೆಯ ವಿರುದ್ಧ ಹೋರಾಟ ಎನ್ನುವುದು ದಿನದಲ್ಲಿ ಮುಕ್ತಾಯವಾಗದು. ಹಲವು ವರ್ಷಗಳಿಂದ ನಡೆಯುತ್ತಿರುವ ಹೋರಾಟದಲ್ಲಿ ಕೇಂದ್ರ ಸರ್ಕಾರ ಗೆಲ್ಲಲಿದೆ. ಹಿಂದಿನ ಸರ್ಕಾರಗಳಂತೆ ಈಗಿನ ಸರ್ಕಾರ ಬೆದರಿ ಕುಳಿತುಕೊಳ್ಳುವುದಿಲ್ಲ ಎಂಬ ವಿಚಾರವೂ ಉಗ್ರರಿಗೆ ಗೊತ್ತಿದೆ.
 - ಎಸ್‌.ಜೈಶಂಕರ್‌, ವಿದೇಶಾಂಗ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next