ಬೆಂಗಳೂರು:ಸಮ್ಮಿಶ್ರ ಸರಕಾರದ ಅಸ್ತಿತ್ವವನ್ನೇ ಅಲುಗಾಡಿಸುತ್ತಿದ್ದ ಜಾರಕಿಹೊಳಿ ಸಹೋದರರು ಮಾಜಿ ಸಿಎಂ ಸಿದ್ದರಾಮಯ್ಯನವರು ಮಾತುಕತೆ ನಡೆಸಿದರೂ ಪ್ರಯೋಜನವಾಗಿಲ್ಲವಾಗಿತ್ತು. ಏತನ್ಮಧ್ಯೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ನಡೆಸಿದ ಸಂಧಾನ ಬಹುತೇಕ ಯಶಸ್ವಿಯಾಗಿದ್ದು, ಭಿನ್ನಮತಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದೆ.
ಅತೃಪ್ತ ಜಾರಕಿಹೊಳಿ ಸಹೋದರರ ಜೊತೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದರು. ಆದರೆ ಜಾರಕಿಹೊಳಿ ಸಹೋದರರು ಒಮ್ಮತದ ಅಭಿಪ್ರಾಯಕ್ಕೆ ಬಂದಿಲ್ಲ ಎನ್ನಲಾಗಿದೆ.
ಈ ಎಲ್ಲಾ ಬೆಳವಣಿಗೆ ನಡುವೆಯೇ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಜಾರಕಿಹೊಳಿ ಸಹೋದರರ ಜೊತೆ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಜಾರಕಿಹೊಳಿ ಸಹೋದರರು ಕೆಲವು ಬೇಡಿಕೆಗಳನ್ನು ಇರಿಸಿದ್ದು, ಅವುಗಳನ್ನು ಈಡೇರಿಸುವ ಭರವಸೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.
ಸತೀಶ್ ಜಾರಕಿಹೊಳಿ ಮನವೊಲಿಕೆ:
ಸದ್ಯಕ್ಕೆ ಡಿಸಿಎಂ ಹುದ್ದೆ ಕೇಳುವುದು ಬೇಡ ಎಂದು ಸತೀಶ್ ಜಾರಕಿಹೊಳಿ ಅವರು ಸಹೋದರ ರಮೇಶ್ ಜಾರಕಿಹೊಳಿ ಅವರ ಮನವೊಲಿಸಿ ಸಿಎಂ ಕುಮಾರಸ್ವಾಮಿ ಅವರ ಜೊತೆ ಸಂಧಾನ ನಡೆಸಿರುವುದಾಗಿ ಮಾಧ್ಯಮದ ವರದಿಗಳು ತಿಳಿಸಿವೆ.
ಈಗಾಗಲೇ ಡಿಸಿಎಂ ಆಗಿ ಪರಮೇಶ್ವರ್ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಡಿಸಿಎಂ ಹುದ್ದೆಯನ್ನು ಜಾರಕಿಹೊಳಿ ಬ್ರದರ್ಸ್ ಕೈಬಿಟ್ಟಿದ್ದಾರೆನ್ನಲಾಗಿದೆ. ಈ ನಿಟ್ಟಿನಲ್ಲಿ ಉಳಿದೆಲ್ಲಾ ಬೇಡಿಕೆಯನ್ನು ಈಡೇರಿಸಬೇಕೆಂಬ ಷರತ್ತನ್ನು ಸಿಎಂ ಮುಂದಿಟ್ಟಿದ್ದು, ಅದನ್ನು ಬಹುತೇಕ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಇದರಿಂದಾಗಿ ಜಾರಕಿಹೊಳಿ ಹಾಗೂ ಅತೃಪ್ತ ಶಾಸಕರು ತಣ್ಣಾಗುವ ಮೂಲಕ ಮೈತ್ರಿ ಸರ್ಕಾರ ಹಗ್ಗಜಗ್ಗಾಟದಿಂದ ಪಾರಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ರಮೇಶ್ ಜಾರಕಿಹೊಳಿ ಬೇಡಿಕೆಗಳು?
- ಬಳ್ಳಾರಿ ಜಿಲ್ಲೆಯ ಒಬ್ಬರನ್ನು ಸಚಿವರನ್ನಾಗಿ ಮಾಡಬೇಕು
- ನಾವು ಹೇಳಿದ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು
- ಸಚಿವ ಡಿಕೆ ಶಿವಕುಮಾರ್ ಅವರನ್ನು ನಿಯಂತ್ರಿಸಬೇಕು
ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಸುಭದ್ರ: ಸಿದ್ದರಾಮಯ್ಯ
ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಭದ್ರವಾಗಿದೆ. ಬಿಜೆಪಿಯವರು ಮಾನ ಮರ್ಯಾದೆ ಬಿಟ್ಟು ಕಾಂಗ್ರೆಸ್ ನ ಕೆಲವು ಶಾಸಕರಿಗೆ ಗಾಳ ಹಾಕಿದ್ದು ನಿಜ. ಆದರೆ ಅವರ ಯಾವ ಕುತಂತ್ರವೂ ನಡೆಯಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.