Advertisement
ಇಸ್ರೇಲ್ ಸೇನೆ ನಡೆಸುತ್ತಿರುವ ಸತತ ದಾಳಿಗೆ ಹಮಾಸ್ ಉಗ್ರರ ತಲೆ ಉರುಳುತ್ತಲೇ ಸಾಗಿದೆ. ಯುದ್ಧಪೀಡಿತ ಪ್ರದೇಶಗಳಲ್ಲಿ ಭಾರೀ ಸಂಖ್ಯೆಯಲ್ಲಿ ಯೋಧರು, ನಾಗರಿಕರು ಸಾವನ್ನಪ್ಪಿದ್ದಾರೆ. ಹಮಾಸ್ ಉಗ್ರರ ಅತಿರೇಕಕ್ಕೆ ಉಭಯ ದೇಶಗಳ ಅಮಾಯಕ ನಾಗರಿಕರು, ಯೋಧರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಗಗನಚುಂಬಿ ಕಟ್ಟಡಗಳು ಧರಾಶಾಯಿಯಾಗಿವೆ. ನಿರಂತರವಾಗಿ ನಡೆಯು ತ್ತಿರುವ ರಾಕೆಟ್, ಕ್ಷಿಪಣಿ ದಾಳಿಗಳಿಂದಾಗಿ ಯುದ್ಧ ಸಂತ್ರಸ್ತ ಪ್ರದೇಶಗಳ ಜನರು ಪ್ರತೀಕ್ಷಣವನ್ನೂ ಜೀವಭಯ ದಿಂದ ಕಳೆಯುತ್ತಿದ್ದಾರೆ. ಇಸ್ರೇಲ್ ಸರಕಾರ ಕಳೆದ ಹಲವಾರು ದಶಕಗಳಿಂದ ಪ್ಯಾಲೆಸ್ತೀನಿಯರ ಮೇಲೆ ನಡೆಸುತ್ತ ಬಂದಿರುವ ದೌರ್ಜನ್ಯಕ್ಕೆ ಪ್ರತೀಕಾರವಾಗಿ ಈ ದಾಳಿಯನ್ನು ನಡೆಸಿರುವುದಾಗಿ ಹಮಾಸ್ ಉಗ್ರಗಾಮಿ ಸಂಘಟನೆಯ ನಾಯಕರು ಇಸ್ರೇಲ್ ಮೇಲಣ ದಾಳಿಯನ್ನು ಸಮರ್ಥಿಸಿ ಕೊಂಡಿದ್ದಾರೆ. ಆದರೆ ಇಸ್ರೇಲ್ ಅಧ್ಯಕ್ಷರು ಈ ಬಾರಿ ಹಮಾಸ್ ಉಗ್ರರನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿಯೇ ಯುದ್ಧಕ್ಕೆ ಅಂತ್ಯ ಹಾಡುವುದಾಗಿ ಘೋಷಿಸಿದ್ದಾರೆ.
Related Articles
Advertisement
ಕಳೆದ ಒಂದು ವಾರದ ಅವಧಿಯಲ್ಲಿ ಜಾಗತಿಕ ಮಾರುಕಟ್ಟೆಯ ಮೇಲೆ ಈ ಸಮರ ಪರೋಕ್ಷ ಪರಿಣಾಮ ಬೀರಿದೆ. ಕಚ್ಚಾತೈಲದ ಬೆಲೆ ಶೇ. 6-8ರಷ್ಟು ಏರಿಕೆಯನ್ನು ಕಂಡಿದೆ. ಯುದ್ಧದ ಆರಂಭಕ್ಕೂ ಮುನ್ನ ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್‌ಗೆ 82 ಡಾಲರ್‌ಗಳ ಆಸುಪಾಸಿನಲ್ಲಿದ್ದರೆ ಈಗ 90 ಡಾಲರ್‌ಗಳ ಗಡಿ ದಾಟಿದೆ. ಷೇರು ಮಾರುಕಟ್ಟೆ, ಆಹಾರಧಾನ್ಯಗಳು, ಕೈಗಾರಿಕ ಉತ್ಪಾದನೆ, ಚಿನಿವಾರ ಮಾರುಕಟ್ಟೆ… ಹೀಗೆ ಎಲ್ಲೆಡೆಯೂ ಒಂದು ತೆರನಾದ ಅನಿಶ್ಚತತೆಯ ವಾತಾವರಣ ನೆಲೆಸಿದೆ. ಜಾಗತಿಕ ಆರ್ಥಿಕ ಬೆಳವಣಿಗೆ ದರ ತುಸು ಹಿನ್ನಡೆಯನ್ನು ಕಂಡಿದೆ. ಯುದ್ಧದಂತಹ ವಿದ್ಯಮಾನಗಳು ಸಂಭವಿಸಿದಾಗ ಇಂತಹ ಸಣ್ಣ ಪ್ರಮಾಣದ ಕಂಪನಗಳು ಸಹಜ. ಆದರೆ ಇಸ್ರೇಲ್‌ನ ಮುಂದಿನ ನಡೆ ಏನು? ಎಂಬುದರ ಮೇಲೆ ನಿಂತಿದೆ ಇಡೀ ಜಾಗತಿಕ ಆರ್ಥಿಕತೆಯ ಭವಿಷ್ಯ.
ಇಸ್ರೇಲ್ ಈ ಯುದ್ಧವನ್ನು ಉಗ್ರರ ದಮನಕ್ಕೆ ಮಾತ್ರವೇ ಸೀಮಿತಗೊಳಿಸಲಿದೆಯೇ ಅಥವಾ ಹಮಾಸ್ ಉಗ್ರರಿಗೆ ನೆರವು ನೀಡುತ್ತಿರುವ ಇರಾನ್, ಲೆಬನಾನ್, ಸಿರಿಯಾ ವಿರುದ್ಧವೂ ದಾಳಿಯನ್ನು ನಡೆಸಲು ಮುಂದಾಗಲಿದೆಯೇ- ಇದು ಸದ್ಯ ವಿಶ್ವ ರಾಷ್ಟ್ರಗಳನ್ನು ಕಾಡುತ್ತಿರುವ ಏಕೈಕ ಪ್ರಶ್ನೆ. ಕಾರಣ ಕಚ್ಚಾ ತೈಲ ಉತ್ಪಾದಕ ರಾಷ್ಟ್ರಗಳಲ್ಲಿ ಇರಾನ್ ಮುಂಚೂಣಿ ಯಲ್ಲಿದ್ದು ಇದು ಜಾಗತಿಕ ಸಮುದಾಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾತೈಲ ಪೂರೈಸುತ್ತಿದೆ. ಒಂದು ವೇಳೆ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ನಡೆಯುತ್ತಿರುವ ಈ ಯುದ್ಧದಲ್ಲಿ ಸಿರಿಯಾ, ಇರಾನ್, ಲೆಬನಾನ್ ನೇರವಾಗಿ ಪಾಲ್ಗೊಂಡಲ್ಲಿ ಅಥವಾ ಇಸ್ರೇಲ್ ಈ ರಾಷ್ಟ್ರಗಳ ವಿರುದ್ಧವೂ ಸಮರ ಸಾರಿದಲ್ಲಿ ಜಾಗತಿಕ ಮಟ್ಟದಲ್ಲಿ ತೈಲಬೆಲೆ ಭಾರೀ ಏರಿಕೆಯನ್ನು ಕಾಣಲಿದ್ದು ತೈಲ ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲದ ಪರಿಸ್ಥಿತಿ ನಿರ್ಮಾಣವಾಗಲಿದೆ. ಅಷ್ಟು ಮಾತ್ರವಲ್ಲದೆ ಕಚ್ಚಾತೈಲ, ಆಹಾರ ಧಾನ್ಯಗಳ ಸಹಿತ ಸರಕು ಸಾಗಣೆಗಳ ಪ್ರಮುಖ ಜಲಮಾರ್ಗಗಳ ಮೇಲೂ ಪರಿಣಾಮ ಬೀರಲಿದ್ದು ಒಟ್ಟಾರೆ ಪೂರೈಕೆ ಜಾಲವೇ ಅತಂತ್ರವಾಗಲಿದೆ. ಹೀಗಾದಲ್ಲಿ ಪಾಶ್ಚಾತ್ಯ ರಾಷ್ಟ್ರಗಳ ಆರ್ಥಿಕತೆ ಗಂಭೀರ ಪರಿಣಾಮ ಎದುರಿಸಲಿದೆ. ಈ ಹಿಂದಿನ ನಿದರ್ಶನಗಳಲ್ಲಿ ಇಂತಹ ಕಠಿನತಮ ಸ್ಥಿತಿಗೆ ವಿಶ್ವರಾಷ್ಟ್ರಗಳು ಸಾಕ್ಷಿಯಾಗಿದ್ದನ್ನು ಮರೆಯುವಂತಿಲ್ಲ.
ಹೀಗಾಗಿಯೇ ಜಾಗತಿಕ ರಾಷ್ಟ್ರಗಳು ಈ ಯುದ್ಧ ಆದಷ್ಟು ಬೇಗ ಅಂತ್ಯ ಕಾಣಲಿ ಎಂದು ಆಶಿಸುತ್ತಿವೆ. ಇವೆಲ್ಲವೂ ವಾಣಿಜ್ಯ-ವ್ಯವಹಾರ-ಆರ್ಥಿಕತೆಯ ಕಥೆಗಳಾದರೆ ಮನಕುಲದ ನಾಶಕ್ಕೆ ಕಾರಣ ವಾಗು ತ್ತಿರುವ ಈ ಯುದ್ಧವೆಂಬ ಮಹಾಮಾರಿಗೆ ಮದ್ದು ಅರೆಯುವವರಾರು ಎಂದು ನಾಗರಿಕ ಸಮಾಜ ತಲೆಕೆಡಿಸಿಕೊಳ್ಳುತ್ತಿದೆ.
ಹರೀಶ್ ಕೆ.