ನವ ದೆಹಲಿ: ಕೊರೊನಾ ಸಮಯದಲ್ಲೇ ನೌಕರ ಸ್ನೇಹಿ ಹೆಜ್ಜೆಯಿಟ್ಟಿರುವ ಟೆಕ್ ದಿಗ್ಗಜ ಸಂಸ್ಥೆ ಮೈಕ್ರೋಸಾಫ್ಟ್, ತನ್ನ ಉದ್ಯೋಗಿಗಳಿಗೆ ಬರೋಬ್ಬರಿ 1 ಲಕ್ಷ ರೂ.ಗಳ (1,500 ಡಾಲರ್) ನಗದನ್ನು ಬೋನಸ್ ರೂಪದಲ್ಲಿ ನೀಡಲು ಮುಂದಾಗಿದೆ.
ಕೊರೊನಾ, ಲಾಕ್ ಡೌನ್ ನಿಂದ ಅನೇಕರು ಆರ್ಥಿಕ ಸಂಕಷ್ಟಕ್ಕೀಡಾಗಿದ್ದು, ತನ್ನ ಉದ್ಯೋಗಿಗಳು ವರ್ಕ್ ಫ್ರಂ ಹೋಂ ಜೀವನ ಶೈಲಿಗೆ ಹೊಂದಿಕೊಂಡೇ, ಕಾರ್ಯಕ್ಷಮತೆಯನ್ನು ಕಾಯ್ದುಕೊಳ್ಳಲಿ ಎಂಬ ಉದ್ದೇಶದಿಂದ ಈ ಬೋನಸ್ ನೀಡಲು ಕಂಪನಿ ಚಿಂತನೆ ನಡೆಸಿದೆ.
ಈ ಬೋನಸ್ ನೀಡಲು ಕಂಪನಿಗೆ ಸುಮಾರು 1,493 ಕೋಟಿ ರೂ. (200 ದಶಲಕ್ಷ ಡಾಲರ್ )ಗಳನ್ನು ವೆಚ್ಚವಾಗಲಿದೆ. ಜಗತ್ತಿನಾದ್ಯಂತ ಇರುವ ಕಂಪನಿಯ ಉದ್ಯೋಗಿಗಳಿಗೆ ಜುಲೈ ಮತ್ತು ಆಗಸ್ಟ್ ತಿಂಗಳ ವೇಳೆಗೆ ಇದನ್ನು ಪಾವತಿಸಲಾಗುತ್ತದೆ ಎಂದು ಮೈಕ್ರೋಸಾಫ್ಟ್ನ ಚೀಫ್ ಪೀಪಲ್ ಆಫೀಸರ್ (ಸಿಪಿಒ) ಕ್ಯಾಥಲೀನ್ ಹೋಗನ್ ಹೇಳಿದ್ದಾರೆ.
ಇದನ್ನೂ ಓದಿ : ಅಫ್ಘಾನಿಸ್ತಾನದ ಶೇ.85ರಷ್ಟು ಪ್ರದೇಶ ನಮ್ಮ ನಿಯಂತ್ರಣದಲ್ಲಿದೆ: ತಾಲಿಬಾನ್ ಹೇಳಿಕೆ
ಕಾರ್ಪೊರೇಟ್ ಉಪಾಧ್ಯಕ್ಷ ಮಟ್ಟದ ಹುದ್ದೆಯಲ್ಲಿರುವವರು, ಮೈಕ್ರೋಸಾಫ್ಟ್ನ ಗಿಟ್ ಹಬ್, ಲಿಂಕ್ಡ್ ಇನ್ ಮತ್ತು ಝೆನಿ ಮ್ಯಾಕ್ಸ್ ಅಂಗ ಸಂಸ್ಥೆಗಳ ಉದ್ಯೋಗಿಗಳು ಈ ಬೋನಸ್ ನಿಂದ ಹೊರತಾಗಿರುತ್ತಾರೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಜಗತ್ತಿನಾದ್ಯಂತ ಮೈಕ್ರೋಸಾಫ್ಟ್ 1.75 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.