Advertisement
ಕೀಟನಾಶಕಗಳಲ್ಲಿ ಬಳಸಲಾಗುವ ಪೈರೆಥಾಯ್ಡ್ ಎಂಬ ರಾಸಾಯನಿಕ ಮೃತ ಹುಲಿಗಳ ದೇಹಗಳಲ್ಲಿ ಪತ್ತೆಯಾಗಿದೆ. ಅತೀ ಹೆಚ್ಚು ಕೊಳೆತ ಹುಲಿಯ ಮೃತದೇಹದ ಮಾದರಿಗಳಲ್ಲಿ ಅತ್ಯಾಧುನಿಕ ಎಲಿಸಾ ಕಿಟ್ ಬಳಸಿ ಪ್ರಪ್ರಥಮ ಬಾರಿಗೆ ಇದನ್ನು ಕಂಡುಹಿಡಿಯುವಲ್ಲಿ ಬೆಂಗಳೂರಿನ ವಿಷ ವೈದ್ಯ ಶಾಸ್ತ್ರ ಮತ್ತು ವಿಧಿವಿಜ್ಞಾನ ತಂಡ ಯಶಸ್ವಿಯಾಗಿದೆ. ಒಂದು ಮೃತ ಹುಲಿಯ ಮೇದೋಜೀರಕ ಗ್ರಂಥಿಯಲ್ಲಿ ಈ ವಿಷ ಅಂಶ ಪತ್ತೆಯಾಗಿದ್ದು, ಇದು ಕೂಡ ಇದೇ ಮೊದಲು ಎಂದು ವಿಶ್ಲೇಷಿಸಲಾಗುತ್ತಿದೆ.
ಮೃತ ಹುಲಿಗಳು ಭಕ್ಷಿಸಿದ್ದ ಎಮ್ಮೆಯನ್ನು ಸಮಾಧಿ ಮಾಡಲಾದ ಸ್ಥಳದ ಮಣ್ಣಿನ ಮಾದರಿಯನ್ನು ಬೆಂಗಳೂರಿನ ರಾಷ್ಟ್ರೀಯ ತೋಟಗಾರಿಕೆ ಸಂಶೋಧನ ಕೇಂದ್ರ (ಐಐಎಚ್‌ಆರ್)ದಲ್ಲಿ ಪರೀಕ್ಷಿಸಲಾಗಿದ್ದು, ಆ ಮಣ್ಣಿನಲ್ಲೂ ಕೀಟನಾಶಕದ ಅಂಶ ದೃಢಪಟ್ಟಿದೆ. ಇದೆಲ್ಲದರಿಂದ ಹುಲಿಯನ್ನು ವಿಷಪ್ರಾಶನ ಮಾಡಿಸಿ ಕೊಲೆಗೈದಿರುವುದು ಸಾಬೀತಾಗುತ್ತದೆ ಎಂದು ಮಹಾದಾಯಿ ವನ್ಯಜೀವಿ ಅಭಯಾರಣ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಪ್ರಕರಣದ ತನಿಖಾಧಿಕಾರಿ ನಂದನ್ ಪರಬ್ “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.
Related Articles
ಈ ಹಿಂದೆಯೂ ಹುಲಿಗಳಿಗೆ ವಿಷ ಹಾಕಿ ಕೊಂದ ಪ್ರಕರಣಗಳು ವರದಿಯಾಗಿವೆ. ಆದರೆ ಅದನ್ನು ಸಾಬೀತುಪಡಿಸುವುದು ಸವಾಲು. ಹುಲಿಯ ಶವ ಕೊಳೆತ ಸ್ಥಿತಿಯಲ್ಲಿದ್ದರೆ ವಿಷ ಅಂಶ ಪತ್ತೆ ಕಷ್ಟ. ಪರಿಣಾಮವಾಗಿ ಅಪರಾಧಿ ಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಾರೆ. ಈಗ ಅತ್ಯಾಧುನಿಕ ತಂತ್ರಜ್ಞಾನದಿಂದ ಅತೀ ಹೆಚ್ಚು ಕೊಳೆತ ಸ್ಥಿತಿಯಲ್ಲಿದ್ದ ಶವದ ಮಾದರಿಯಲ್ಲಿ ವಿಷಾಂಶ ಪತ್ತೆ ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಈ ವರದಿ ದಿಕ್ಸೂಚಿ ಆಗಿದೆ.
Advertisement
-ವಿಜಯಕುಮಾರ್ ಚಂದರಗಿ