ಉಡುಪಿ: ಕಲೆ, ಸಾಹಿತ್ಯದ ಜತೆ ವನ್ಯಜೀವಿ ಮತ್ತು ಪರಿಸರದ ಬಗ್ಗೆ ಅಪರಿಮಿತ ಕಾಳಜಿಯನ್ನು ಡಾ| ಶಿವರಾಮ ಕಾರಂತರು ಹೊಂದಿದ್ದು, ವನ್ಯಜೀವಿ ಕ್ಷೇತ್ರದಲ್ಲಿ ಕೆಲಸ ಮಾಡಲು ಅವರೇ ಮೊದಲ ಪ್ರೇರಣೆ ಎಂದು ವನ್ಯಜೀವಿ ಸಂರಕ್ಷಣೆ ವಿಜ್ಞಾನಿ ಡಾ| ಉಲ್ಲಾಸ್ ಕಾರಂತ್ ಅಭಿಪ್ರಾಯಪಟ್ಟರು.
ಕುಂಜಿಬೆಟ್ಟು ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಮಾಹೆ, ಯಕ್ಷಗಾನ ಕೇಂದ್ರ ಇಂದ್ರಾಳಿ ವತಿಯಿಂದ ಗುರುವಾರ ಜರಗಿದ ಡಾ| ಕೆ. ಶಿವರಾಮ ಕಾರಂತರ 122ನೇ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಎಂಜಿನಿಯರಿಂಗ್ ಶಿಕ್ಷಣ ಪಡೆದಿದ್ದರೂ ತಂದೆಯ ಪ್ರೇರಣೆ ಮತ್ತು ಪರಿಸರದ ಜತೆಗಿನ ಒಡನಾಟವು ಪ್ರವಾಸ ನಿಸರ್ಗ ಪ್ರೇಮವನ್ನು ಬೆಳೆಸಿತು ಎಂದು ಹೇಳಿದರು.
ಮಾಹೆ ಸಹ ಕುಲಪತಿ ಡಾ| ಎಚ್ ಎಸ್. ಬಲ್ಲಾಳ್ ಮಾತನಾಡಿ, ಶಿವರಾಮ ಕಾರಂತರು ಯಕ್ಷಗಾನವನ್ನು ಬಹಳಷ್ಟು ಬೆಳೆಸಲು ಕಾರಣೀಭೂತರಾಗಿದ್ದವರು. ಅವರ ವ್ಯಕ್ತಿತ್ವ,ಜೀವಶೈಲಿ ಎಲ್ಲರಿಗೂ ಮಾದರಿ ಎಂದರು.
ಸಾಹಿತಿ ಎ.ಎಸ್.ಎನ್. ಹೆಬ್ಟಾರ್ ಮಾತನಾಡಿ, ಶಿವರಾಮ ಕಾರಂತರ, ಜ್ಞಾನ ವೃಕ್ಷದ ಕೆಳಗೆ ಹಲವರು ಶಿಕ್ಷಣ ಪಡೆದಿದ್ದಾರೆ. ಜನರಿಂದ ಸಾರ್ವತ್ರಿಕ ಗೌರವ ಪಡೆದ ವ್ಯಕ್ತಿತ್ವ, ನಡೆದಾಡುವ ದಂತಕಥೆಯಾಗಿದ್ದರು ಎಂದರು.
ಮಾಹೆ ಕುಲಪತಿ ಲೆ| ಜ| ಡಾ| ಎಂ. ಡಿ. ವೆಂಕಟೇಶ್ ಮಾತನಾಡಿ, ಸಾಹಿತ್ಯ ಲೋಕಕ್ಕೆ ಕಾರಂತರು ನೀಡಿದ ಕಾಣಿಕೆ ಅಮೂಲ್ಯ ಎಂದರು. ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ ಉಪಸ್ಥಿತರಿದ್ದರು.
ಕೇಂದ್ರದ ವತಿಯಿಂದ ಉಲ್ಲಾಸ್ ಕಾರಂತರನ್ನು ಸಮ್ಮಾನಿಸಲಾಯಿತು. ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ| ಜಗದೀಶ್ ಶೆಟ್ಟಿ ವಂದಿಸಿ, ಪ್ರಾಧ್ಯಾಪಕ ರಾಘವೇಂದ್ರ ತುಂಗ ನಿರೂಪಿಸಿದರು.