Advertisement

Tiger Dance: ಹುಲಿ ಕುಣಿತದ ಅಬ್ಬರ

03:17 PM Oct 30, 2024 | Team Udayavani |

ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಆಚರಣೆಗಳಲ್ಲಿ ಹುಲಿವೇಷ ಕುಣಿತವು ಒಂದು. ಈ ಹುಲಿವೇಷ ಕುಣಿತವನ್ನು ವಿಶೇಷವಾಗಿ ದಸರಾ ಹಬ್ಬದ ಸಂದರ್ಭದಲ್ಲಿ ಆಚರಣೆ ಮಾಡಿದರೂ ಇದು ಇಲ್ಲಿನ ಸಾಂಸ್ಕೃತಿಕ ಪರಂಪರೆಯ ಭಾಗವಾಗಿ, ಜನ-ಜೀವನದ ಒಂದು ಅವಿಭಾಜ್ಯ ಅಂಗವಾಗಿ ಅಚ್ಚಳಿಯದೇ ಉಳಿದುಕೊಂಡಿದೆ ಎಂದರೆ ತಪ್ಪಿಲ್ಲ.

Advertisement

ಹಿನ್ನೆಲೆ

ಹುಲಿ ಕುಣಿತವು ದಕ್ಷಿಣ ಕನ್ನಡದಲ್ಲಿ ಹೇಗೆ ಹುಟ್ಟಿಕೊಂಡಿತು ಎಂದು ಹೇಳಲು ಇಲ್ಲಿ ಹಲವಾರು ನಿದರ್ಶನಗಳು ಲಭ್ಯವಾಗುತ್ತದೆ. ಹಿಂದೂಗಳ ಧಾರ್ಮಿಕ ನಂಬಿಕೆಯ ಪ್ರಕಾರ ಹುಲಿಯು (ವ್ಯಾಘ್ರ) ದುರ್ಗಾ ದೇವಿಯ ವಾಹನ. ಅಂದರೆ ದುರ್ಗಾದೇವಿಯನ್ನು ಹೇಗೆ ವ್ಯಾಘ್ರವು ಹೊತ್ತುಕೊಂಡು ನಡೆಯುತ್ತದೆಯೋ ಅದೇ ರೀತಿ ಹುಲಿವೇಷ ಹಾಕಿ ಕುಣಿದರೆ ದೇವಿಯನ್ನೇ ಹೊತ್ತಂತೆ ಮತ್ತು ದೇವಿಯು ನಮ್ಮನ್ನು ದುಷ್ಟ ಶಕ್ತಿಗಳಿಂದ ಕಾಪಾಡುತ್ತಾಳೆ ಎಂಬ ನಂಬಿಕೆಯಿದೆ.ಇನ್ನೊಂದು ಕಥೆಯ ಪ್ರಕಾರ ಹಿಂದೊಮ್ಮೆ ಈ ಜಿಲ್ಲೆಯಲ್ಲಿನ ಒಂದು ಬಡ ಸಂಸಾರದ ಮಗುವೊಂದು ಅನಾರೋಗ್ಯಕ್ಕೆ ಒಳಗಾಗಿ ನಡೆಯಲು ಆಗುತ್ತಿರಲಿಲ್ಲ. ಆಗ ಮಗುವಿನ ತಾಯಿಯು ಮಂಗಳೂರಿನ ಶ್ರೀ ಮಂಗಳಾದೇವಿ ದೇವಸ್ಥಾನಕ್ಕೆ ಬಂದು ನನ್ನ ಮಗುವಿನ ಕಾಯಿಲೆ ವಾಸಿಯಾದರೆ, ನಿನ್ನ ಮುಂದೆ ಹುಲಿಯ ವೇಷ ಹಾಕಿಸಿ ನೃತ್ಯ ಮಾಡಿಸುತ್ತೇನೆ ಎಂದು ಹರಕೆ ಕಟ್ಟಿಕೊಳ್ಳುತ್ತಾಳೆ. ಇದಾದ ಸ್ವಲ್ಪ ಸಮಯಕ್ಕೆ ಮಗು ಗುಣಮುಖವಾಗಿ ನಡೆಯಲು ಆರಂಭಿಸುತ್ತದೆ. ಹರಕೆ ಫ‌ಲಿಸಿದಂತೆ ಈ ತಾಯಿ ಮಗುವಿಗೆ ಹುಲಿವೇಷ ಹಾಕಿಸಿ ಕುಣಿಸುತ್ತಾಳೆ. ಈ ರೀತಿಯಾಗಿ ಇಲ್ಲಿ ಹುಲಿವೇಷ ಕುಣಿತವು ಹುಟ್ಟಿಕೊಂಡಿತು ಎಂದು ಪೂರ್ವಜರು ಹೇಳುತ್ತಾರೆ.

ಹುಲಿವೇಷ ಕುಣಿತದ ವರಸೆ

ಹುಲಿವೇಷ ಕುಣಿತದ ಕಸರತ್ತುಗಳನ್ನು ನೋಡುವುದೇ ಒಂದು ವಿಶೇಷ. ಪ್ರತಿ ಕುಣಿತವು ಪ್ರಾರ್ಥನೆ, ಶಕ್ತಿ, ಮತ್ತು ಧೈರ್ಯವನ್ನು ಸಂಕೇತಿಸುತ್ತಿತ್ತು. ಕುಣಿತಗಾರರು ತಮ್ಮ ದೇಹವನ್ನು ಸಂಪೂರ್ಣವಾಗಿ ನಾರದ ಹಳದಿ ಬಣ್ಣದ ಹುಲಿ ಗುರುತುಗಳುಳ್ಳಂತೆ ಬಣ್ಣಿಸಿ, ಹುಲಿಯ ಮುಖವಾಡ ಬಳಸಿ ಕುಣಿಯುತ್ತಾರೆ. ಕುಣಿತದಲ್ಲಿ ಭಾಗವಹಿಸುವವರು ತಮ್ಮದೇ ಆದ ಪರಿಕರಗಳನ್ನು ಬಳಸುತ್ತಿದ್ದರು. ವೇಷಧಾರಿ ಹುಲಿಗಳ ಕುಣಿತಕ್ಕೆ ತಾಳ ಹಾಕಲು ಮತ್ತು ಉತ್ಸಾಹ ನೀಡಲು ಹಿಮ್ಮೇಳವಾಗಿ ತಾಸೆ, ಡೋಲು, ಮತ್ತು ಚಂಡೆ ನಾದಗಳನ್ನು ಬಳಸಲಾಗುತ್ತದೆ. ಈ ತಾಸೆ, ಡೋಲಿನ ಲಯಕ್ಕೆ ಪ್ರದರ್ಶಿಸುವ ಆಟಗಳ ವರಸೆಗಳು ಒಂದಕ್ಕಿಂತ ಒಂದು ಆಕರ್ಷಕ. ಉದಾಹರಣೆಗೆ ತಾಯಿ ಹುಲಿಯು ತನ್ನ ಮರಿಗಳಿಗೆ ಹಾಲುಣಿಸುವುದು, ಬೇಟೆ ಕಲಿಸುವುದು, ಮರಿ ಹುಲಿಗಳ ಆಟ ಮತ್ತು ವಯಸ್ಸಿಗೆ ಬಂದ ಹುಲಿಗಳ ಕಾದಾಟವನ್ನು ಕುಣಿತದಲ್ಲಿ ಪ್ರದರ್ಶಿಸುತ್ತಾರೆ.

Advertisement

ಹುಲಿವೇಷ ಕುಣಿತವನ್ನೂ ಹೆಜ್ಜೆ ಆಧರಿಸಿ ಒಂದು ಪೌಲ, ಎರಡು ಪೌಲ ಮತ್ತು ಎಂಟು ಪೌಲ ಕುಣಿತ ಎಂದು ವಿಂಗಡಿಸಲಾಗುತ್ತದೆ. ಕುಳಿತೇ ಕುಣಿಯುವ ಹಾಗೂ ನಿಂತು ಕುಣಿಯುವ ಆಟಗಳಲ್ಲಿ 20ಕ್ಕೂ ಅಧಿಕ ವರಸೆಗಳಿವೆ.

ಹಿಂದಿನ ಆಚರಣೆ

ಹಿಂದಿನ ಕಾಲದಲ್ಲಿ ಹುಲಿ ಕುಣಿತವು ಹೆಚ್ಚಿನ ಸರಳತೆಯೊಂದಿಗೆ, ಸ್ಥಳೀಯ ವಾದ್ಯಗಳ ಸಹಾಯದಿಂದ ಬಹುತೇಕವಾಗಿ ದೇವಾಲಯಗಳ ಸುತ್ತಮುತ್ತ, ನಿಗದಿತ ಸ್ಥಳಗಳಲ್ಲಿ ಮಾತ್ರ ನಡೆಯುತ್ತಿತ್ತು. ಪ್ರತಿ ಕುಣಿತದ ಹಿಂದೆಯೂ ಒಂದು ಧಾರ್ಮಿಕ ನಂಬಿಕೆ, ಇಚ್ಛೆ ಅಥವಾ ಇತರ ಐತಿಹಾಸಿಕ ಕತೆಗಳು ಪ್ರೇರಣೆಯಾಗಿದ್ದುದು ಕಂಡುಬರುತ್ತಿತ್ತು. ಈ ಆಚರಣೆ ಸಾಮೂಹಿಕತೆಯ ಸಂಕೇತವಾಗಿ ಪರಿಗಣಿಸಲ್ಪಟ್ಟಿದೆ ಮತ್ತು ಪ್ರತಿ ಸಮುದಾಯದವರು ಅದರಲ್ಲಿ ಭಾಗವಹಿಸುತ್ತಿದ್ದರು.

ಇಂದಿನ ಆಚರಣೆ

ಇಂದಿನ ಕುಣಿತಗಾರರು ಕುಣಿತವನ್ನು ಹೆಚ್ಚು ವೃತ್ತಿಪರವಾಗಿ ಸಮರ್ಪಣೆ ಮಾಡುತ್ತಿದ್ದಾರೆ. ಬಣ್ಣದ ಬಳಕೆ, ವೇಷಭೂಷಣ ಮತ್ತು ಸಂಗೀತದ ಗುಣಮಟ್ಟದಲ್ಲಿ ಹೆಚ್ಚು ಮೆಲುಕು ಹಾಕಲಾಗುತ್ತದೆ. ಹಾಗೆಯೇ ಇಂದಿನ ಆಚರಣೆಯಲ್ಲಿ ಆರ್ಥಿಕ ಅಂಶವೂ ಮಿಶ್ರಿತವಾಗಿದ್ದು, ಜಾಥಾಗಳು, ತಂಡಗಳು ಮತ್ತು ಪ್ರಮುಖ ಸಂಸ್ಥೆಗಳು ಈ ಕುಣಿತಕ್ಕೆ ಹಣಕಾಸಿನ ಬೆಂಬಲ ನೀಡುತ್ತವೆ. ಇದರಿಂದಾಗಿ ಕುಣಿತವು ದೊಡ್ಡ ಮಟ್ಟದಲ್ಲಿ ನಡೆಯುತ್ತದೆ. ಈ ಕಾಲದಲ್ಲಿ ಈ ಕುಣಿತವು ಸಾಮಾಜಿಕ ವಿಷಯಗಳ ಬಗ್ಗೆ ಪ್ರತಿಬಿಂಬಿಸುವುದಕ್ಕೂ ಬಳಸಲಾಗುತ್ತಿದೆ. ಉದಾಹರಣೆಗೆ ಪರಿಸರ ಸಂರಕ್ಷಣೆ, ಶೈಕ್ಷಣಿಕ ಜಾಗೃತಿ, ವೈದ್ಯಕೀಯ ನೆರವು ಹಾಗೂ ಇನ್ನಿತರ ಸಾಮಾಜಿಕ ಕಾರಣಗಳನ್ನು ಬೆಂಬಲಿಸುವಂತಹ ಪ್ರಕ್ರಿಯೆಗಳು ಈ ಕುಣಿತದ ಸಮಯದಲ್ಲಿ ವ್ಯಕ್ತವಾಗುತ್ತಿವೆ. ವಿಶೇಷವಾಗಿ ದಸರಾ ಹಬ್ಬದ ಸಂದರ್ಭದಲ್ಲಿ ನಡೆಯುತ್ತಿದ್ದ ಈ ಹುಲಿವೇಷ ಕುಣಿತವು ಪ್ರಸ್ತುತದಲ್ಲಿ ಹೆಚ್ಚು ವೈಭವೀಕರಣಗೊಂಡು ನಗರಾದ್ಯಂತ ಪ್ರದರ್ಶನಕ್ಕೆ ಒಳಪಟ್ಟಿದೆ. ಈ ಕುಣಿತದ ಬೆಳವಣಿಗೆಗೆ ಮತ್ತು ಜನಪ್ರಿಯತೆಗೆ ಸಾಮಾಜಿಕ ಮಾಧ್ಯಮ ಮತ್ತು ಇತರ ಮಾಧ್ಯಮಗಳು ದೊಡ್ಡಮಟ್ಟದಲ್ಲಿ ಪ್ರಭಾವ ಬೀರಿವೆ. ಹಾಗಾಗಿ ಧಾರ್ಮಿಕ ನಂಬಿಕೆಯ ಪ್ರತೀಕವಾಗಿದ್ದ ಈ ಕುಣಿತವು ಮೆರವಣಿಗೆ, ಪ್ರತಿಭಟನೆ, ಹಾಗೂ ಇತರ ಸಾಮೂಹಿಕ ಕಾರ್ಯಕ್ರಗಳಲ್ಲಿ ಇಂದು ಪ್ರದರ್ಶನ ಕಾಣುತ್ತಿದೆ. ಹುಲಿ ಕುಣಿತದ ಹಳೆಯ ಹಾಗೂ ಇಂದಿನ ಆಚರಣೆಯು ಕಾಲದ ಹಿನ್ನೆಲೆಯಲ್ಲಿ ಬದಲಾಗಿದೆ, ಆದರೆ ಇದು ಅದರ ಮೂಲತಣ್ತೀ, ಉತ್ಸಾಹ, ಮತ್ತು ಜನರ ನಂಬಿಕೆ, ಆರಾಧನೆಯನ್ನು ಇಂದಿಗೂ ಉಳಿಸಿಕೊಂಡಿದೆ. ಆದರೆ ಇತ್ತೀಚಿನ ಬೆಳವಣಿಗೆ ನಂಬಿಕೆ, ಆಚರಣೆಗೆ ವಿರುಧœವಾಗಿ ಚಲಿಸುತ್ತಿರುವುದರಿಂದ ನಮ್ಮ ಸಂಸ್ಕೃತಿಯ ಉಳಿವಿಗೆ ನಮ್ಮ ಕೊಡುಗೆ ನೀಡಬೇಕಿದೆ.

-ವಿಜಿತ ಅಮೀನ್‌

ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next