ವಯನಾಡ್: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯು ಕೋವಿಡ್ ಕಾಲದಲ್ಲಿ ಲಕ್ಷಾಂತರ ಭಾರತೀಯರಿಗೆ ಆಶ್ರಯ ನೀಡಿತು. ಯುಪಿಎ ಸರ್ಕಾರವು ದೇಶದ ಅಸಹಾಯಕರಿಗೆ ನೆರವಾಗಲೆಂದು, ಅವರಿಗೆ ಭದ್ರತಾ ಒದಗಿಸಲೆಂದು ಈ ಯೋಜನೆ ಜಾರಿ ಮಾಡಿತ್ತು. ಆದರೆ, ಅದನ್ನು ಒಪ್ಪಿಕೊಳ್ಳಲು ಪ್ರಧಾನಿ ಮೋದಿಯವರು ಸಿದ್ಧರಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ತಮ್ಮ ಕ್ಷೇತ್ರ ವಯನಾಡ್‌ನ ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ
ನೆನ್ಮೇನಿ ಎಂಬ ಗ್ರಾಮ ಪಂಚಾಯತ್‌ನಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿಯ ಫಲಾನುಭವಿಗಳನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ.
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಮೋದಿ ಅವರು “ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವೈಫಲ್ಯದ ಸಜೀವ ಸ್ಮಾರಕ’ ಎಂದು ಟೀಕಿಸಿದ್ದರು. ಆದರೆ, ಈ ಸಾಮೂಹಿಕ ಉದ್ಯೋಗ ಯೋಜನೆಯ ಆಳವನ್ನು ಅವರು ಅರಿತುಕೊಂಡಿಲ್ಲ. ಈ ಯೋಜನೆಯು ದೇಶದ ಕಾರ್ಮಿಕ ಮಾರುಕಟ್ಟೆಯಲ್ಲಿ ಹೇಗೆ ದೊಡ್ಡಮಟ್ಟದ ಬದಲಾವಣೆಯನ್ನು ತಂದಿತು ಮತ್ತು ಲಕ್ಷಾಂತರ ಮಂದಿಗೆ ಬದುಕು ಕಟ್ಟಿಕೊಳ್ಳಲು ಹೇಗೆ ನೆರವಾಯಿತು ಎಂಬುದು ಅವರಿಗೆ ಗೊತ್ತಿಲ್ಲ.
ಮೋದಿ ಸರ್ಕಾರ ಮಾಡಿದ ನೋಟು ಅಮಾನ್ಯ ಮತ್ತು ಜಿಎಸ್‌ಟಿಯ ಅಸಮರ್ಪಕ ಅನುಷ್ಠಾನದಿಂದಾಗಿ ದೇಶದ ಆರ್ಥಿಕತೆ ಪತನದಂಚಿಗೆ ಹೋದಾಗ, ಬಡ ದುಡಿಯುವ ವರ್ಗದ ಜೀವನೋಪಾಯವನ್ನು ರಕ್ಷಿಸಿದ್ದೇ ಉದ್ಯೋಗ ಖಾತ್ರಿ ಯೋಜನೆ ಎಂದೂ ರಾಹುಲ್ ಹೇಳಿದ್ದಾರೆ.