Advertisement
ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿ ಮಾರ್ಗದಲ್ಲಿ ಸುರಂಗದಲ್ಲಿರುವ ಮೆಟ್ರೋ ನಿಲ್ದಾಣಗಳ ಆಸುಪಾಸು ಅಂತರ್ಜಲಮಟ್ಟ ನೆಲದಿಂದ ಕೇವಲ 4-5 ಮೀಟರ್ ಆಳದಲ್ಲಿದೆ. ಆದರೆ, ಮೆಟ್ರೋ ನಿಲ್ದಾಣಗಳಿರುವುದು ನೆಲದಿಂದ 15-16 ಮೀ. ಕೆಳಗಡೆ. ಹೀಗಾಗಿ ಈ ಭಾಗದ ನಿಲ್ದಾಣಗಳಲ್ಲಿ ಅಂತರ್ಜಲ ಒಸರುತ್ತಿದೆ. ಗೋಡೆಗಳನ್ನು ನಿರ್ಮಿಸಿ, ಸಾಕಷ್ಟು ಭದ್ರವಾಗಿ ಸೀಲ್ ಮಾಡಿದ್ದರೂ, ಹತ್ತಾರು ಕಡೆಗಳಲ್ಲಿ ನೀರು ಬರುತ್ತಲೇ ಇದೆ. ಇದು ಮೆಟ್ರೋ ಅಕಾರಿಗಳ ನಿದ್ದೆಗೆಡಿಸಿದೆ.
Related Articles
Advertisement
ಕಬ್ಬನ್ ಪಾರ್ಕ್ ನಿರ್ವಹಣೆಗಾಗಿಯೇ ನಿತ್ಯ ಒಂದು ಲಕ್ಷ ಲೀ. ನೀರು ಬಳಸಲಾಗುತ್ತಿದೆ. ಅಲ್ಲದೆ, ಉದ್ಯಾನದಲ್ಲಿ ಬೃಹತ್ ನೀರು ಸಂಸ್ಕರಣಾ ಘಟಕವೂ ಇದೆ. ಅದೇ ರೀತಿ, ವಿಧಾನಸೌಧದಲ್ಲೂ ಉದ್ಯಾನ ನಿರ್ವಹಣೆಗಾಗಿ ಸಾವಿರಾರು ಲೀಟರ್ ನೀರು ಪೂರೈಕೆಯಾಗುತ್ತದೆ. ಈ ಕಾರಣಗಳಿಂದ ನಗರದ ಬೇರೆಲ್ಲ ಪ್ರದೇಶಗಳಿಗಿಂತಲೂ ಇಲ್ಲಿ ಅಂತರ್ಜಲ ಮಟ್ಟ ಉತ್ತಮವಾಗಿದೆ.
ಇದಕ್ಕೆ ಹತ್ತಿರದಲ್ಲೇ ಇರುವ ಸರ್ ಎಂ. ವಿಶ್ವೇಶ್ವರಯ್ಯ ನಿಲ್ದಾಣ ಸೆಂಟ್ರಲ್ ಕಾಲೇಜು ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಹಾಗಾಗಿ, ನೀರಿನ ಒತ್ತಡ ಇಲ್ಲಿ ಹೆಚ್ಚಿದೆ ಎನ್ನಲಾಗಿದೆ. ಇನ್ನು ಮೆಜೆಸ್ಟಿಕ್ ಈ ಮೊದಲು ಕೆಂಪಾಂಬು ಕೆರೆ ಆಗಿತ್ತು. ಅಲ್ಲಿ ಅತಿ ದೊಡ್ಡ ಮೆಟ್ರೋ ಇಂಟರ್‌ಚೇಂಜ್ ನಿರ್ಮಿಸಲಾಗಿದೆ. ಆದರೆ, ಸದ್ಯಕ್ಕೆ ಅಲ್ಲಿ ಇನ್ನೂ ಅಂತಹ ಸಮಸ್ಯೆ ಉದ್ಭವಿಸಿಲ್ಲ.
ನೆರೆ ಬಂದರೂ ಸಮಸ್ಯೆ ಆಗದುನೀರು ಹೊರಹೋಗಲು ಪ್ರತಿ ನಿಲ್ದಾಣಗಳಲ್ಲಿ ತಲಾ 5 ಸಾವಿರ ಲೀ. ಸಾಮರ್ಥ್ಯದ ಎರಡು ಟ್ಯಾಂಕರ್‌ಗಳನ್ನು ನಿರ್ಮಿಸಲಾಗಿದೆ. ನಿಲ್ದಾಣದಲ್ಲಿ ಯಾವುದೇ ಮೂಲೆಯಿಂದ ನೀರು ಬಿದ್ದರೂ ಅದು ಈ ಟ್ಯಾಂಕರ್‌ಗಳಿಗೆ ಹೋಗುತ್ತದೆ. ಹಾಗಾಗಿ, ನೆರೆ ಬಂದರೂ ಇಲ್ಲಿ ಸಮಸ್ಯೆ ಆಗದು. ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ ಸುರಂಗ ನಿಲ್ದಾಣಗಳಿರುವಲ್ಲೆಲ್ಲಾ ಅಂತರ್ಜಲ ಮಟ್ಟ 15 ಮೀಟರ್‌ಗಿಂತ ಕೆಳಗಿದೆ. ಸಾಮಾನ್ಯವಾಗಿ ಮೆಟ್ರೋ ನಿಲ್ದಾಣಗಳನ್ನು ನೆಲದಿಂದ 15 ಮೀ. ಆಳದಲ್ಲಿ ನಿರ್ಮಿಸಲಾಗಿರುತ್ತದೆ. ಆದ್ದರಿಂದ ಅಲ್ಲಿ ಸಮಸ್ಯೆ ಉದ್ಭವಿಸಿಲ್ಲ ಎನ್ನುತ್ತಾರೆ ತಜ್ಞರು. ಸೀಲ್ ಮಾಡುವುದು ಹೀಗೆ
ನಿಲ್ದಾಣಗಳಲ್ಲಿ ನೀರು ಸೋರಿಕೆ ಕಂಡುಬಂದಾಗ, ಆ ಜಾಗದಲ್ಲಿ 5 ಮಿ.ಮೀ. ಸುತ್ತಳತೆಯ ರಂಧ್ರ ಕೊರೆಯಲಾಗುತ್ತದೆ. ಆ ಜಾಗದಲ್ಲಿ ಫೆವಿಕಾಲ್ ಮಾದರಿಯ ಎರಡು ರಾಸಾಯನಿಕ ಅಂಶಗಳನ್ನು ಪಂಪ್ ಮಾಡಲಾಗುತ್ತದೆ. ಅದು ನೀರು ಬರುವ ಮಾರ್ಗದಲ್ಲಿ ಹೋಗಿ ಕೂಡಿಕೊಂಡು, ನೀರು ಅದನ್ನು ಸೇರುತ್ತಿದ್ದಂತೆ ಉಬ್ಬುತ್ತದೆ. ಆಗ ಅಲ್ಲಿಂದ ನೀರು ಸೋರಿಕೆ ಸ್ಥಗಿತಗೊಳ್ಳುತ್ತದೆ. ಸುರಂಗ ನಿಲ್ದಾಣಗಳಲ್ಲಿ ಸೋರಿಕೆಯಾಗುತ್ತಿರುವ ನೀರುಗಾರೆಗಳನ್ನು ಮುಚ್ಚಲು “ಪಿಯು ಗ್ರೌಟಿಂಗ್’ ಬಳಸಲಾಗುತ್ತಿದೆ. ಸೋರಿಕೆ ಇರುವ ಜಾಗದಲ್ಲಿ 5ರಿಂದ 6 ಕೆಜಿ ಒತ್ತಡದಲ್ಲಿ ಗ್ರೌಟಿಂಗ್ ಮಾಡುವುದರಿಂದ 60 ಮೀಟರ್ ನೀರನ್ನು ತಡೆಯಬಹುದು. ಉದಾಹರಣೆಗೆ 60 ಮೀಟರ್ ಎತ್ತರದ ಡ್ಯಾಂ ಇದೆ ಎಂದುಕೊಳ್ಳೋಣ. ಆ ಡ್ಯಾಂ ಕೆಳಗಡೆ ರಂಧ್ರಕೊರೆದಾಗ ಎಷ್ಟು ಒತ್ತಡದಲ್ಲಿ ನೀರು ಹೊರಬರುತ್ತದೆಯೋ ಅಷ್ಟು ಒತ್ತಡವನ್ನು ತಡೆಯಲು 5ರಿಂದ 6 ಕೆಜಿ ಒತ್ತಡದಲ್ಲಿ ಕೆಮಿಕಲ್ ಹಾಕಿ ಬಂದ್ ಮಾಡಲಾಗುತ್ತದೆ. ಸಿಂಗಪುರ ಸುರಂಗದಲ್ಲೂ ಸೋರಿಕೆ ಪ್ರಾಬ್ಲಿಂ
ನಗರದಲ್ಲಿ ಮೆಟ್ರೋ ಕೋಚುಗಳ ನಿಲುಗಡೆ, ನಿರ್ವಹಣೆ, ನಿಯಂತ್ರಣ ಕೊಠಡಿ ಸೇರಿದಂತೆ ಮತ್ತಿತರ ಚಟುವಟಿಕೆಗಳಿಗೆ ಪೀಣ್ಯ, ಬೈಯಪ್ಪನಹಳ್ಳಿಯಲ್ಲಿ ಡಿಪೋಗಳನ್ನು ನಿರ್ಮಿಸಲಾಗಿದೆ. ಇವುಗಳ ವಿಸ್ತೀರ್ಣ ಕ್ರಮವಾಗಿ 100 ಮತ್ತು 30 ಎಕರೆ ಇದೆ. ನಿಲ್ದಾಣಗಳ ವಿಸ್ತೀರ್ಣ 270×70 ಮೀಟರ್ ಇರುತ್ತದೆ. ಸಿಂಗಪುರದಲ್ಲಿ ಡಿಪೋವನ್ನು ಸುರಂಗದಲ್ಲಿ ಕಟ್ಟಲಾಗಿದೆ. ಅಲ್ಲಿಯೂ ಈ ರೀತಿ ನೀರು ಸೋರಿಕೆ ಆಗುತ್ತಲೇ ಇರುತ್ತದೆ. ಮೊದಲ ಎರಡು ವರ್ಷಗಳು ಈ ಸಮಸ್ಯೆ ಇರುತ್ತದೆ. ನಂತರದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಉತ್ತರ-ದಕ್ಷಿಣದಲ್ಲೂ ಸಮಸ್ಯೆ?
ಉತ್ತರ-ದಕ್ಷಿಣ ಕಾರಿಡಾರ್‌ನಲ್ಲೂ ಮೆಟ್ರೋ ಸುರಂಗ ನಿಲ್ದಾಣಗಳು ಬರುತ್ತವೆ. ಚಿಕ್ಕಪೇಟೆ ಮತ್ತು ಕೆ.ಆರ್. ಮಾರುಕಟ್ಟೆ ಸುತ್ತಲೂ ಅಂತರ್ಜಲಮಟ್ಟ ಮೇಲೆಯೇ ಇದೆ. ಆದರೆ, ಇದುವರೆಗೆ ಅಲ್ಲಿ ಕಾಮಗಾರಿ ನಡೆಯುತ್ತಿತ್ತು. ಹಾಗಾಗಿ, ಆ ಸಮಸ್ಯೆ ಕಂಡುಬಂದಿಲ್ಲ. ಕಾಮಗಾರಿ ಪೂರ್ಣಗೊಂಡು, ಮಳೆಗಾಲ ಬಂದ ನಂತರ ಇಲ್ಲಿನ ಸ್ಪಷ್ಟ ಚಿತ್ರಣ ಗೊತ್ತಾಗುತ್ತದೆ ಎನ್ನುತ್ತಾರೆ ಬಿಎಂಆರ್‌ಸಿ ಎಂಜಿನಿಯರ್‌ಗಳು. ಚೆನ್ನೈನಲ್ಲಿ ಮೆಟ್ರೋ ಭೂಕುಸಿತ; ಆತಂಕ
ಚೆನ್ನೈನಲ್ಲಿ ಮೆಟ್ರೋ ಕಾಮಗಾರಿಯಿಂದಾಗಿ ಭೂಕುಸಿತ ಉಂಟಾದ ಬೆನ್ನಲ್ಲೇ ರಾಜಧಾನಿಯ “ನಮ್ಮ ಮೆಟ್ರೋ’ ಆಸುಪಾಸು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಎದ್ದಿದೆ. ಏಕೆಂದರೆ, ಈ ಹಿಂದೆ ನಗರದಲ್ಲೂ ಸಣ್ಣ ಭೂಕುಸಿತ ಉಂಟಾಗಿತ್ತು. 2016ರ ಆಗಸ್ಟ್ 2ರಂದು ಸಿಟಿ ರೈಲು ನಿಲ್ದಾಣ-ಕಬ್ಬನ್ ಉದ್ಯಾನದ ನಡುವಿನ ಮೆಟ್ರೋ ಸುರಂಗ ಮಾರ್ಗದ ಅಣತಿ ದೂರದಲ್ಲೇ 10 ಅಡಿಗಳಷ್ಟು ಭೂಕುಸಿತ ಉಂಟಾಗಿತ್ತು. 2015ರ ಅಕ್ಟೋಬರ್‌ನಲ್ಲಿ ಕೂಡ ಇದೇ ಮಾರ್ಗದ ಸೆಂಟ್ರಲ್ ಕಾಲೇಜು ಬಳಿ ಭೂಕುಸಿತ ಸಂಭವಿಸಿತ್ತು. ಕೆಂಪೇಗೌಡ ರಸ್ತೆ (ಕೆ.ಜಿ.ರಸ್ತೆ)ಯಲ್ಲಿರುವ ಅಡಿಗಾಸ್ ಹೋಟೆಲ್ ಎದುರಿನ ಡಾಂಬರು ರಸ್ತೆಯಲ್ಲಿ ಸುಮಾರು 10 ಅಡಿ ಉದ್ದ ಹಾಗೂ 3- 4 ಅಡಿ ಅಗಲದ “ಸಿಂಕ್ ಹೋಲ್’ನಿಂದ ಭೂಕುಸಿತ ಉಂಟಾಗಿತ್ತು. ಈ ಭೂಕುಸಿತದ ಜಾಗದಿಂದ ಮೆಟ್ರೋ ಸುರಂಗ ಮಾರ್ಗ ಕೇವಲ 10ರಿಂದ 15 ಮೀಟರ್ ದೂರದಲ್ಲಿತ್ತು. ಸೆಂಟ್ರಲ್ ಕಾಲೇಜು ಬಳಿ 2015ರ ಅಕ್ಟೋಬರ್‌ನಲ್ಲಿ ಭೂಮಿ ಕುಸಿದಿತ್ತು. ಆದರೆ, ಚೆನ್ನೈನಲ್ಲಿ ಆದಷ್ಟು ದೊಡ್ಡ ಪ್ರಮಾಣದಲ್ಲಿ ಹಳ್ಳವಾಗಿರಲಿಲ್ಲ. ಹೀಗಾಗಿ ನಮ್ಮ ಮೆಟ್ರೋ ಬಗ್ಗೆಯೂ ಪ್ರಶ್ನೆ ಉದ್ಭವವಾಗುವಂತಾಗಿದೆ. “ನಮ್ಮ ಮೆಟ್ರೋ’ ಸುರಂಗ ನಿಲ್ದಾಣಗಳು ನೂರು ವರ್ಷ ಏನೂ ಆಗುವುದಿಲ್ಲ. ನೂರು ವರ್ಷಗಳ ಜನದಟ್ಟಣೆ ಗುರಿ ಇಟ್ಟುಕೊಂಡು ನಿರ್ಮಿಸಲಾಗಿದೆ. ಆದರೆ, ಕೆಲವು ನಿಲ್ದಾಣಗಳಲ್ಲಿ ಅಂತರ್ಜಲಮಟ್ಟ ತುಂಬಾ ಮೇಲೆ ಇದೆ. ಇದರಿಂದ ನೀರಿನ ಸೋರಿಕೆ ಅಲ್ಲಲ್ಲಿ ಕಂಡುಬರುತ್ತಿದೆ. ಇದರಿಂದ ಯಾವುದೇ ಸಮಸ್ಯೆ ಇಲ್ಲ. ಆದರೆ, ಸಂಪೂರ್ಣವಾಗಿ ಸೋರಿಕೆ ನಿಲ್ಲಿಸಬೇಕೆಂಬುದು ನಮ್ಮ ಉದ್ದೇಶ.
-ಪ್ರದೀಪ್‌ಸಿಂಗ್ ಖರೋಲಾ, ಬಿಎಂಆರ್‌ಸಿಎಲ್‌ನ ಮುಖ್ಯಸ್ಥ * ವಿಜಯಕುಮಾರ್ ಚಂದರಗಿ