Advertisement

ರದ್ದಾಗುವುದೇ ಮೆಟ್ರೋ ಟೆಂಡರ್‌?

12:43 PM Oct 15, 2018 | |

ಬೆಂಗಳೂರು: ಆರ್ಥಿಕ ಸಂಕಷ್ಟದಲ್ಲಿರುವ  ಇನ್‌ಫ್ರಾಸ್ಟ್ರಕ್ಚರ್‌ ಲೀಸಿಂಗ್‌ ಆಂಡ್‌ ಫೈನಾನ್ಷಿಯಲ್‌ ಸರ್ವಿಸಸ್‌ ಲಿ., (ಐಎಲ್‌ ಆಂಡ್‌ ಎಫ್ಎಸ್‌) ಭಾಗವಹಿಸಿರುವ ಹೊರವರ್ತುಲ ರಸ್ತೆ ನಡುವಿನ ಮೆಟ್ರೋ ಮಾರ್ಗದ ಟೆಂಡರ್‌ ಪ್ರಕ್ರಿಯೆಯನ್ನು ಮರುಪರಿಶೀಲಿಸಲು ಮುಂದಾಗಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌), ಅಗತ್ಯಬಿದ್ದರೆ ಟೆಂಡರನ್ನೇ ರದ್ದುಗೊಳಿಸಲು ಚಿಂತನೆ ನಡೆಸಿದೆ.

Advertisement

ಸಿಲ್ಕ್ ಬೋರ್ಡ್‌-ಕೆ.ಆರ್‌.ಪುರ ನಡುವೆ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಟೆಂಡರ್‌ ಕರೆಯಲಾಗಿತ್ತು. ಅದರಲ್ಲಿ ಈಗ ಸಾಲದ ಸುಳಿಗೆ ಸಿಲುಕಿರುವ ಐಎಲ್‌ ಆಂಡ್‌ ಎಫ್ಎಸ್‌ ಕೂಡ ಭಾಗಿಯಾಗಿತ್ತು. ಅಷ್ಟೇ ಅಲ್ಲ, ಆ ಮಾರ್ಗದ ಮೂರು ಪ್ಯಾಕೇಜ್‌ಗಳ ಪೈಕಿ ಒಂದರಲ್ಲಿ ಕಂಪನಿಯು ಕನಿಷ್ಠ ದರ ನಮೂದಿಸಿದೆ. ಅನಿವಾರ್ಯವಾಗಿ ಈಗ ಟೆಂಡರ್‌ ಆ ಕಂಪನಿಯ ಪಾಲಾಗಲಿದೆ. ಈ ಹಿನ್ನೆಲೆಯಲ್ಲಿ ಟೆಂಡರ್‌ ಪ್ರಕ್ರಿಯೆಯನ್ನು ಮರು ಪರಿಶೀಲನೆ ನಡೆಸಲು ನಿಗಮ ನಿರ್ಧರಿಸಿದೆ.

ಕಾಮಗಾರಿ ಮೇಲೆ ಪರಿಣಾಮ: ಹಾಗೊಂದು ವೇಳೆ ಟೆಂಡರ್‌ ಮರುಪರಿಶೀಲನೆ ಅಥವಾ ರದ್ದುಗೊಳಿಸಿದರೆ, ಇದು ಕಾಮಗಾರಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಫೆಬ್ರವರಿಯಲ್ಲಿ ಕರೆದಿದ್ದ ಟೆಂಡರ್‌ ಇನ್ನೂ ಅಂತಿಮಗೊಂಡಿಲ್ಲ. ಹೀಗಿರುವಾಗ, ಈ ಹೊಸ ಬೆಳವಣಿಗೆಯಿಂದ ಮತ್ತೆ ಮೊದಲಿನಿಂದ ಕಸರತ್ತು ನಡೆಸಬೇಕಾಗುತ್ತದೆ. ಆಗ, ಕಾಮಗಾರಿ ವಿಳಂಬವಾಗಲಿರುವ ಅಂಶ ನಿಗಮದ ನಿದ್ದೆಗೆಡಿಸಿದೆ. 

ಹೊರ ವರ್ತುಲ ಭಾಗದಲ್ಲಿ ಹಾದುಹೋಗುವ 17 ಕಿ.ಮೀ ಉದ್ದದ ಈ ಮಾರ್ಗವು “ನಮ್ಮ ಮೆಟ್ರೋ’ 2ಎನಲ್ಲಿ ಬರುತ್ತದೆ. ಇದಕ್ಕಾಗಿ 4,202 ಕೋಟಿ ರೂ. ಅಂದಾಜು ವೆಚ್ಚ ಮಾಡಲಾಗಿದ್ದು,  ಸಿಲ್ಕ… ಬೋರ್ಡ್‌-ಬೆಳ್ಳಂದೂರು ಹಾಗೂ ಬೆಳ್ಳಂದೂರು-ದೊಡ್ಡನೆಕ್ಕುಂದಿ ಮತ್ತು ದೊಡ್ಡನೆಕ್ಕುಂದಿ- ಕೆ.ಆರ್‌.ಪುರ ಸೇರಿದಂತೆ ಮೂರು ಪ್ಯಾಕೇಜ್‌ಗಳಲ್ಲಿ ಟೆಂಡರ್‌ ಕರೆಯಲಾಗಿತ್ತು.

ಈ ಮೂರರಲ್ಲೂ ಐಎಲ್‌ ಆಂಡ್‌ ಎಫ್ಎಸ್‌ ಕಂಪನಿ ಭಾಗವಹಿಸಿದ್ದು, ಮೊದಲ ಪ್ಯಾಕೇಜ್‌ನ ತಾಂತ್ರಿಕ ಬಿಡ್‌ನ‌ಲ್ಲಿ ಪಾಸಾಗಿ, ಹಣಕಾಸು ಬಿಡ್‌ನ‌ಲ್ಲೂ ಕನಿಷ್ಠ ದರ ನಮೂದಿಸಿದೆ. ಹೀಗೆ ಒಂದರಲ್ಲಿ ಪಾಸಾದ ಕಂಪನಿಯು ಉಳಿದೆರಡರಲ್ಲೂ ತಾಂತ್ರಿಕ ಬಿಡ್‌ನ‌ಲ್ಲಿ ಫೇಲ್‌ ಆಗುವ ಪ್ರಶ್ನೆ ಬರುವುದಿಲ್ಲ. ಅಂತಹ ಸಾಧ್ಯತೆಗಳು ತುಂಬಾ ಕಡಿಮೆ.

Advertisement

ನಿಯಮದ ಪ್ರಕಾರ ಈ ಕಂಪನಿಯನ್ನು ತಿರಸ್ಕರಿಸಿ, ಮತ್ತೂಂದು ಕಂಪನಿಗೆ ಟೆಂಡರ್‌ ನೀಡಲು ಬರುವುದಿಲ್ಲ. ಕಾರಣ, ನಿಗಮದ ಮುಂದಿರುವ ಏಕೈಕ ಆಯ್ಕೆ ಎಂದರೆ ಇಡೀ ಟೆಂಡರ್‌ ಪ್ರಕ್ರಿಯೆಯನ್ನೇ ರದ್ದುಗೊಳಿಸುವುದು. ಈ ಬಗ್ಗೆ ಚಿಂತನೆ ನಡೆದಿದೆ ಎಂದು ಹೆಸರು ಹೇಳಲಿಚ್ಛಿಸದ ಬಿಎಂಆರ್‌ಸಿ ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು.

ಕೆಂಗೇರಿ ಮಾರ್ಗದ ಟೆಂಡರ್‌ನಲ್ಲೂ ಭಾಗಿ: “ಸಾಲದ ಸುಳಿಯಲ್ಲಿ ಸಿಲುಕಿರುವ ಐಎಲ್‌ ಆಂಡ್‌ ಎಫ್ಎಸ್‌ ಕಂಪನಿಯು ಕೆಂಗೇರಿ ಮಾರ್ಗದ ಮೆಟ್ರೋ ಯೋಜನೆಯ ಕಾಮಗಾರಿಯನ್ನೂ ನಡೆಸುತ್ತಿದೆ. ಇದೀಗ ಹೊರವರ್ತುಲ ರಸ್ತೆಯ ಒಂದು ಪ್ಯಾಕೇಜ್‌ನಲ್ಲಿ ಕನಿಷ್ಠ ದರ ನಮೂದಿಸಿ ಎಲ್‌-1 ಕೂಡ ಆಗಿದೆ. ಆದ್ದರಿಂದ ಈ ಟೆಂಡರ್‌ ಪ್ರಕ್ರಿಯೆಯನ್ನು ಮರುಪರಿಶೀಲನೆ ಮಾಡಲು ಉದ್ದೇಶಿಸಲಾಗಿದೆ.

ಆದರೆ, ಮೆಟ್ರೋ ಎರಡನೇ ಹಂತದ ವಿಸ್ತರಿಸಿದ ಮಾರ್ಗ ಮೈಸೂರು ರಸ್ತೆ-ಕೆಂಗೇರಿ ನಡುವಿನ ಕಾಮಗಾರಿಯನ್ನು ಆ ಕಂಪನಿಯೇ ಮುಂದುವರಿಸಲಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇs… “ಉದಯವಾಣಿ’ಗೆ ಸ್ಪಷ್ಟಪಡಿಸಿದರು.

ಒಟ್ಟಾರೆ ಹೊರವರ್ತುಲ ಮಾರ್ಗದ ಮೂರು ಪ್ಯಾಕೇಜ್‌ಗಳ ಕಾಮಗಾರಿ ವೆಚ್ಚ ಅಂದಾಜು ಎರಡು ಸಾವಿರ ಕೋಟಿ ರೂ. ಇದರಲ್ಲಿ ಮೊದಲ ಪ್ಯಾಕೇಜ್‌ (ಸಿಲ್ಕ್ಬೋರ್ಡ್‌-ಬೆಳ್ಳಂದೂರು) ಸುಮಾರು 500-600 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಐಎಲ್‌ ಆಂಡ್‌ ಎಫ್ಎಸ್‌ ಶೇ. -1ರಷ್ಟು ದರವನ್ನು ನಮೂದಿಸಿತ್ತು. ಇದಲ್ಲದೆ, ಇನ್ನೂ ಐದು ಕಂಪೆನಿಗಳು ಟೆಂಡರ್‌ನಲ್ಲಿ ಭಾಗಿಯಾಗಿವೆ. 

ಮೈಸೂರು ರಸ್ತೆ ಕಾಮಗಾರಿ ವಿಳಂಬವಾಗಿತ್ತು: ಮೆಟ್ರೋ ಮೈಸೂರು ರಸ್ತೆ-ಕೆಂಗೇರಿ ವಿಸ್ತರಿಸಿದ ಮಾರ್ಗದ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆ ಪಡೆದ ಮತ್ತೂಂದು ಕಂಪನಿ ಕೂಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಇದು ಈಗಾಗಲೇ ಕಾಮಗಾರಿ ವಿಳಂಬಕ್ಕೆ ಕಾರಣವಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

6.46 ಕಿ.ಮೀ ಹಳಿ ಮತ್ತು ಡಿಪೋ ನಿರ್ಮಾಣ ಸೇರಿದಂತೆ ಒಟ್ಟಾರೆ ಸುಮಾರು 8.8 ಕಿ.ಮೀ ಉದ್ದದ ಮೈಸೂರು ರಸ್ತೆ- ಕೆಂಗೇರಿ ಮಾರ್ಗದಲ್ಲಿ ಆರು ನಿಲ್ದಾಣಗಳು ಬರುತ್ತವೆ. ಈ ಪೈಕಿ ಪಟ್ಟಣಗೆರೆಯಿಂದ ಚಲ್ಲಘಟ್ಟ ಡಿಪೋದವರೆಗೆ ಮೆಟ್ರೋ ಎತ್ತರಿಸಿದ ರಚನೆಗಳ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆ ಪಡೆದ ಕಂಪನಿಯೊಂದು ಆರ್ಥಿಕ ಸಂಕಷ್ಟದಲ್ಲಿದೆ.

ಇದು ಪರೋಕ್ಷವಾಗಿ ಯೋಜನೆ ಮೇಲೆ ಪರಿಣಾಮ ಬೀರುತ್ತಿದ್ದು, 332 ಕೋಟಿ ರೂ. ವೆಚ್ಚದ ಈ ಯೋಜನೆಗೆ ಸಂಬಂಧಿಸಿದ ಕಾಮಗಾರಿ, ಅದಕ್ಕೆ ಬೇಕಾದ ವಸ್ತುಗಳ ಖರೀದಿ, ಕಾರ್ಮಿಕರ ವೇತನ ಪಾವತಿ ಸೇರಿದಂತೆ ಹತ್ತಾರು ರೀತಿಯಲ್ಲಿ ಇದು ಸಮಸ್ಯೆ ಆಗುತ್ತಿದೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next