Advertisement

ಮೆಟ್ರೋ: ನಗರದತ್ತ ಟಿಬಿಎಂ

12:28 AM Feb 12, 2020 | Lakshmi GovindaRaj |

ಬೆಂಗಳೂರು: “ನಮ್ಮ ಮೆಟ್ರೋ’ ಎರಡನೇ ಹಂತದ ಸುರಂಗ ಕೊರೆಯಲು ಟನಲ್‌ ಬೋರಿಂಗ್‌ ಯಂತ್ರಗಳ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದು, ಈ ಪೈಕಿ ಕೆಲವು ಬಿಡಿಭಾಗಗಳು ಈಗಾಗಲೇ ನಗರದ ರಕ್ಷಣಾ ಇಲಾಖೆಯ ಬಿಆರ್‌ವಿ ಮೈದಾನದಲ್ಲಿ ಬಂದಿಳಿಯುತ್ತಿವೆ.

Advertisement

ಒಮ್ಮೆಲೆ ಈ ದೈತ್ಯ ಯಂತ್ರಗಳನ್ನು ಅನಾಮತ್ತಾಗಿ ಸಾಗಿಸಲು ಸಾಧ್ಯವಿಲ್ಲ. ಹಾಗಾಗಿ, ಬಿಡಿಯಾಗಿ ಟ್ರೈಲರ್‌ನಲ್ಲಿ ಸ್ಥಳಾಂತರಿಸಬೇಕಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಮೂಲಕ ನಗರ ಪ್ರವೇಶಿಸುತ್ತಿದ್ದು, ಯಂತ್ರಗಳು ಸಾಗಿಬರುವ ಮಾರ್ಗದಲ್ಲಿ ಐದಾರು ಮರಗಳ ರೆಂಬೆ-ಕೊಂಬೆಗಳು, ವಿದ್ಯುತ್‌ ಕಂಬಗಳನ್ನೂ ತೆರವುಗೊಳಿಸಬೇಕಾಗುತ್ತದೆ. ಇದಕ್ಕೂ ಈಗಾಗಲೇ ಅನುಮತಿ ದೊರೆತಿದ್ದು, ಬುಧವಾರದಿಂದ ತೆರವು ಕಾರ್ಯ ಕೂಡ ನಡೆಯಲಿದೆ.

ತಲಾ ಸುಮಾರು ನೂರು ಟನ್‌ ತೂಗುವ ಈ ಟನಲ್‌ ಬೋರಿಂಗ್‌ ಮಷಿನ್‌ (ಟಿಬಿಎಂ)ಗಳಲ್ಲಿ ನೂರಾರು ಬಿಡಿ ಭಾಗಗಳಿರುತ್ತವೆ. ಆ ಪೈಕಿ “ಸ್ಲರಿ’ (ಮಣ್ಣು ಮಿಶ್ರಿತ ನೀರು ಹೊರಹಾಕುವ) ಪೈಪ್‌ ಮತ್ತಿತರ ಉಪಕರಣಗಳು ಸೋಮವಾರ ಮತ್ತು ಮಂಗಳವಾರ ಬಂದಿಳಿದಿವೆ. ಉಳಿದವುಗಳನ್ನು ಹಂತ-ಹಂತವಾಗಿ ಸುಮಾರು 60 ಟ್ರೈಲರ್‌ಗಳಲ್ಲಿ ತಿಂಗಳ ಅಂತ್ಯದವರೆಗೂ ನಿರಂತರವಾಗಿ ಸಾಗಿಸುವ ಕೆಲಸ ನಡೆಯಲಿದೆ. ಮಾರ್ಚ್‌ ಮೊದಲ ವಾರದಿಂದ ಬಿಡಿ ಭಾಗಗಳ ಜೋಡಣೆ ಕೆಲಸ ಶುರುವಾಗಲಿದೆ ಎಂದು ಬಿಎಂಆರ್‌ಸಿಲ್‌ನ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.

ಫೆ. 15ಕ್ಕೆ ಎಲ್ಲವೂ ಬಂದಿಳಿಯಬೇಕಾಗಿತ್ತು. ತಾಂತ್ರಿಕ ಕಾರಣಗಳಿಂದ ಒಂದೆರಡು ವಾರ ಮುಂದೂಡಿಕೆಯಾಗಿದೆ. ಯಂತ್ರಗಳೊಂದಿಗೆ ಅದನ್ನು ಜೋಡಿಸುವ 5-6 ಜನರ ತಜ್ಞರ ತಂಡ ಕೂಡ ಬರುತ್ತಿದೆ. ಒಂದು ಟಿಬಿಎಂ ಜೋಡಣೆಗೆ ಸುಮಾರು ಎಂಟು ಜನ ಬೇಕಾಗುತ್ತಾರೆ. ಇನ್ನೂ 8-10 ಜನ ತಜ್ಞರಿಗೆ ವಿಸಾ ನೀಡುವಂತೆ ಪತ್ರ ಬರೆಯಲಾಗಿದೆ.

ಆದರೆ, ಚೀನಾದಲ್ಲಿ ಡಿಸೆಂಬರ್‌ನಿಂದಲೇ ಕೊರೋನಾ ವೈರಸ್‌ ಭೀತಿ ಶುರುವಾಗಿ ದ್ದರಿಂದ ಅವರ ಆಗಮನ ತಡವಾಗಿದೆ. ಹಾಗಂತ, ಯಂತ್ರದ ಜೋಡಣೆಯಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ಯಾಕೆಂದರೆ, ಮೊದಲ ಹಂತದ ಪೂರ್ವ-ಪಶ್ಚಿಮ ಮತ್ತು ಉತ್ತರ ದಕ್ಷಿಣ ಎರಡೂ ಮಾರ್ಗಗಳ ಸುರಂಗ ಕೊರೆದಿದ್ದು ಇದೇ ಯಂತ್ರಗಳಾಗಿದ್ದು, ಆಗ ಸ್ಥಳೀಯ ಎಂಜಿನಿ ಯರ್‌ಗಳಿಗೆ ತರಬೇತಿ ನೀಡಲಾಗಿದೆ. ಸಮಸ್ಯೆ ಆಗದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

Advertisement

ಬಿಆರ್‌ವಿ ಮೈದಾನವೇ ಯಾಕೆ?: ಈ ಎರಡು ಯಂತ್ರಗಳ ಪೈಕಿ ಒಂದು ಶಿವಾಜಿನಗರದಿಂದ ಎಂ.ಜಿ. ರಸ್ತೆ ಕಡೆಗೆ ಮತ್ತೂಂದು ಕಂಟೋನ್ಮೆಂಟ್‌ನಿಂದ ಶಿವಾಜಿನಗರದ ಕಡೆಗೆ ಸುರಂಗ ಕೊರೆಯುವ ಕಾರ್ಯ ಆರಂಭಿಸಲಿವೆ. ಆದರೆ ಎರಡೂ ಜಾಗದಲ್ಲಿ ಸ್ಥಳಾವಕಾಶದ ಕೊರತೆ ಇದ್ದು, ಒಮ್ಮೆಲೆ ತಂದಿಳಿಸುವುದು ಸಮಸ್ಯೆ ಆಗಬಹುದು. ಈ ಹಿನ್ನೆಲೆಯಲ್ಲಿ ಬಿಆರ್‌ವಿ ಮೈದಾನದಲ್ಲಿ ಮೊದಲು ಇಳಿಸಲಾಗುತ್ತದೆ.

ಅಲ್ಲಿಂದ ಒಂದೊಂದಾಗಿ ನಿರ್ದಿಷ್ಟ ಜಾಗಗಳಿಗೆ ಕೊಂಡೊಯ್ಯಲಾಗುವುದು. ಅಂದಹಾಗೆ ಉದ್ದೇಶಿತ ಯಂತ್ರದಲ್ಲಿ ಕಟರ್‌ ಶೀಲ್ಡ್‌ ಅತಿಹೆಚ್ಚು ಮೂರು ಟನ್‌ ತೂಗುತ್ತದೆ. ವಿಸ್ತರಿಸಿದ ಸೇರಿದಂತೆ ಮೆಟ್ರೋ ಎರಡನೇ ಹಂತದಲ್ಲಿ ಚೀನಾ ರೈಲ್ವೆ ಕನ್‌ಸ್ಟ್ರಕ್ಷನ್‌ ಹೆವಿ ಇಂಡಸ್ಟ್ರಿ ಕಾರ್ಪೊರೇಷನ್‌ ಲಿ., ಒಟ್ಟು ನಾಲ್ಕು ಟಿಬಿಎಂಗಳನ್ನು ಪೂರೈಸಲಿದೆ. ಈ ಪೈಕಿ ಎರಡು ಯಂತ್ರಗಳು ಇನ್ಮುಂದೆ ಬರಬೇಕಿದೆ.

ಅಧಿಕ ಸಾಮರ್ಥ್ಯದ ಯಂತ್ರಗಳು: ಮೊದಲ ಹಂತದಲ್ಲಿ ಬಳಸಿದ ಟಿಬಿಎಂಗಳು 75-80 ಟನ್‌ಗಳಿದ್ದವು. ಅವುಗಳಿಗೆ ಹೋಲಿಸಿ ದರೆ, ಈಗ ಬರುತ್ತಿರುವ ಯಂತ್ರಗಳ ಸಾಮರ್ಥ್ಯ ತೂಕ ಮತ್ತು ಕಾರ್ಯಾಚರಣೆ ಎರಡರಲ್ಲೂ ಹೆಚ್ಚು.ಹಿಂದಿನ ಯಂತ್ರಗಳು 2,500 ಹಾರ್ಸ್‌ ಪವರ್‌ ಹೊಂದಿದ್ದರೆ, ಹೊಸ ಯಂತ್ರಗಳು 3,000 ಹಾರ್ಸ್‌ಪವರ್‌ ಹೊಂದಿವೆ. ಅಂದರೆ, ಉದಾಹರಣೆಗೆ ಒಂದು ನಟ್ಟುಬೋಲ್ಟ್ ಅನ್ನು 1 ನಂಬರ್‌ ಸ್ಪ್ಯಾನರ್‌ನಿಂದ ತಿರುವಿ ಬಿಗಿಗೊಳಿಸುವುದಕ್ಕಿಂತ 2ನೇ ನಂಬರ್‌ ಸ್ಪ್ಯಾನರ್‌ನಿಂದ ತಿರುವಿದಾಗ ಹೆಚ್ಚು ಬಿಗಿಗೊಳಿಸಬಹುದು.

ಈ ಸಾಮರ್ಥ್ಯದಿಂದಾಗಿ ಅಧಿಕ ಒತ್ತಡದೊಂದಿಗೆ ಕೊರೆಯುವುದು ಹಾಗೂ ಶೇ. 46 ಮೆದು ಮಣ್ಣು ಕೂಡ ಹೊಂದಿರುವುದರಿಂದ ಅನು ಕೂಲ ಆಗಬಹುದು ಎಂಬುದು ತಜ್ಞರ ಲೆಕ್ಕಾಚಾರ. ಇನ್ನು ಈ ಹಿಂದೆ ಬಳಸಿದಂತೆಯೇ ಈ ಟಿಬಿಎಂಗಳೂ 4 ಆರ್‌ಪಿಎಂ (ಪ್ರತಿ ನಿಮಿಷಕ್ಕೆ “ಟಾರ್ಕ್‌’ ತಿರುಗುವ ಪ್ರಮಾಣ) ಇದೆ. ಉದಾಹರಣೆಗೆ ಮನೆಯಲ್ಲಿನ ಮಿಕ್ಸರ್‌ ಗ್ಲೈಂಡರ್‌ನಲ್ಲಿರುವ ಬ್ಲೇಡ್‌ ಪ್ರತಿ ನಿಮಿಷಕ್ಕೆ 16-18 ಸಾವಿರ ಸುತ್ತು ತಿರುಗುತ್ತದೆ. ಅದೇ ರೀತಿ, ಟಿಬಿಎಂ ಟಾರ್ಕ್‌ ನಿಮಿಷಕ್ಕೆ ಗರಿಷ್ಠ 4 ಸುತ್ತು ತಿರುಗುತ್ತದೆ.

ನಾಲ್ಕು ಟಿಬಿಎಂಗಳಿಗೆ ಸಂಸ್ಕೃತದ ಹೆಸರುಗಳು: ನಗರಕ್ಕೆ ಆಗಮಿಸಲಿರುವ ನಾಲ್ಕು ಟಿಬಿಎಂಗಳಿಗೆ ಅವನಿ (DZ669), ಊರ್ಜಾ (RT-03), ವಿಂಧ್ಯಾ (RT-03) ಮತ್ತು ಲವಿ (RT-02) ಎಂದು ನಾಮಕರಣ ಮಾಡಲಾಗಿದೆ. ಆ ಪೈಕಿ ಮೊದಲೆರಡು ಯಂತ್ರಗಳು ಈಗ ಆಗಮಿಸುತ್ತಿವೆ. ಈ ನಾಲ್ಕೂ ಸಂಸ್ಕೃತ ಹೆಸರುಗಳಾಗಿದ್ದು, ಅವನಿ ಅಂದರೆ ಭೂಮಿ, ಊರ್ಜಾ ಅಂದರೆ ಶಕ್ತಿ, ವಿಂಧ್ಯಾಗೆ ಪರ್ವತ ಹಾಗೂ ಲವಿಗೆ ಹರಿತವಾದ ಆಯುಧ ಎಂಬರ್ಥಗಳಿವೆ. ಮೊದಲ ಹಂತದಲ್ಲಿನ ಟಿಬಿಎಂಗಳಿಗೂ ಕಾವೇರಿ, ಕೃಷ್ಣ, ಗೋದಾವರಿ, ಹೆಲನ್‌, ರಾಬಿನ್ಸ್‌, ಮಾರ್ಗರೇಟ್‌ ಎಂದು ಹೆಸರಿಡಲಾಗಿತ್ತು.

* ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next