ಬೆಂಗಳೂರು: ನಗರದಲ್ಲಿ ಕೋವಿಡ್ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಕಳೆದ ಹಲವು ತಿಂಗಳುಗಳಿಂದ ನಿಲ್ಲಿಸಿರುವ ಮೆಟ್ರೋ ಸೇವೆಯನ್ನು ಶೀಘ್ರ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.
ನಗರದ ಆನಂದರಾವ್ ವೃತ್ತದ ಮೇಲ್ಸೇತುವೆಗೆ ಗುರುವಾರ “ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಮೇಲ್ಸೇತುವೆ ಎಂದು ನಾಮಕಾರಣ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕೋವಿಡ್ ಸೋಂಕಿನ ಭೀತಿ ನಡುವೆಯೇ ಜನಜೀವನ ಸಹಜ ಸ್ಥಿತಿಗೆ ತಲುಪುತ್ತಿದೆ. ಜನರ ಅಗತ್ಯಕ್ಕೆ ಅನುಸಾರವಾಗಿ ಮುಂಜಾಗ್ರತಾ ಕ್ರಮ ತೆಗೆದುಕೊಂಡು ಮೆಟ್ರೋ ರೈಲು ಸೇವೆ ಮತ್ತೆ ಪ್ರಾರಂಭಿಸುತ್ತೇವೆಂದರು.
ಆನಂದರಾವ್ ವೃತ್ತದ ಮೇಲ್ಸೇತುವೆಗೆ ಬ್ರಿಟಿಷರ ವಿರುದ್ಧ ಸೆಣಸಿದ ಕನ್ನಡದ ಕಲಿ, ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಭಂಟನಾಗಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಹೆಸರನ್ನು ಇಡಲಾಗಿದೆ. ಸಂಗೊಳ್ಳಿ ರಾಯಣ್ಣ ಕೊನೆ ಉಸಿರು ಇರುವವರೆಗೂ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಸೆಣಸಿದ್ದರು. ಇಂದಿನ ಯುವ ಪೀಳಿಗೆ ಸ್ಫೂರ್ತಿ ಹಾಗೂ ಮಾದರಿಯಾಗಿರುವ ಮಹಾನ್ ನಾಯಕನ ಹೆಸರನ್ನು ಈ ಮೇಲ್ಸೇತುವೆಗೆ ನಾಮಕರಣ ಮಾಡಲಾಗಿದ್ದು ವಾಹನ ದಟ್ಟಣೆ ನಿಯಂತ್ರಿಸಲು ಸಹಕಾರಿ ಎಂದು ಹೇಳಿದರು.
ನಗರದ ಸಮಗ್ರ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಸುಧಾರಣೆ ಗುರಿ ಸರ್ಕಾರದ ಮುಂದಿದೆ. ನಗರದ ಅಭಿವೃದ್ಧಿಗೆ ಒತ್ತು ನೀಡುವುದರಿಂದ ರಾಜ್ಯ ಹಾಗೂ ದೇಶದ ಆರ್ಥಿಕ ಬೆಳವಣಿಗೆಗೂ ಸಹಕಾರಿಯಾಗಲಿದೆ. ಸರ್ಕಾರ ನಗರ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ ಎಂದರು. ಮೇಲ್ಸೇತುವೆ ನಾಮ ಕಾರಣ ಮಾಡುವ ಮುನ್ನ ಮುಖ್ಯಮಂತ್ರಿ ಯಡಿ ಯೂರಪ್ಪ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಮೇಯರ್ ಎಂ.ಗೌತಮ್ ಕುಮಾರ್, ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಚಿವರಾದ ಬೈರತಿ ಬಸವ ರಾಜು, ಕೆ.ಎಸ್.ಈಶ್ವರಪ್ಪ, ಶಾಸಕ ದಿನೇಶ್ ಗುಂಡೂ ರಾವ್, ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್, ಉಪ ಮೇಯರ್ ರಾಮಮೋಹನ್ ರಾಜ್, ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್, ಪಾಲಿಕೆ ಸದಸ್ಯೆ ಲತಾಕುಮಾರ್ ರಾಥೋಡ್ ಮತ್ತಿತರರಿದ್ದರು.
ಎಸಿಪಿ ತ್ರಿಡಿ ಅಕ್ಷರದ ನಾಮಫಲಕ ವಿಶೇಷ : ನಾಮಫಲಕದಲ್ಲಿ ಎಸಿಪಿ ತ್ರಿಡಿ (ಅಲ್ಯುಮೀನಿಯಂ ಕಂಪೋಸಿಟ್ ಪ್ಯಾನೆಲ್ -ಎಸಿಪಿ – ಬಳಸಿರುವ) ಅಕ್ಷರ ಅಳವಡಿಸಲಾಗಿದೆ. ಸಂಗೊಳ್ಳಿರಾಯಣ್ಣ ಮೇಲ್ಸೇತುವೆ 615 ಮೀಟರ್ ಉದ್ದ, 14 ಮೀ ಅಗಲದ ಒಂದು ಮಾರ್ಗ ಶೇಷಾದ್ರಿ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಈ ಮೇಲ್ಸೇತುವೆ ಮಧ್ಯ ಭಾಗ ವಿಭಜನೆಯಾಗುವ 135 ಮೀಟರ್ ಉದ್ದ ಹಾಗೂ 9 ಮೀಟರ್ ಅಗಲದ ಮತ್ತೂಂದು ಮಾರ್ಗ ಎಸ್‌ಜೆಆರ್‌ಸಿ ಕಾಲೇಜಿನ ಮುಂಭಾಗದ ರಸ್ತೆಗೆ ಸೇರುತ್ತದೆ.
ರಸ್ತೆ ಗುಂಡಿ ಮುಕ್ತವಾದ ರಸ್ತೆಗಳು : ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗುರುವಾರ ಮೇಲ್ಸೇತುವೆ ನಾಮಕರಣ ಮಾಡುವುದು ನಿಗದಿಯಾಗುತ್ತಿದ್ದಂತೆ ಈ ಮೇಲ್ಸೇತುವೆಗೆ ಮಾರ್ಗ ಕಲ್ಪಿಸುವ ಹಲವು ರಸ್ತೆಗಳು ಗುಂಡಿ ಮುಕ್ತವಾಗಿವೆ.