Advertisement

ಮೆಟ್ರೋ ಸೇವೆ ಓಕೆ; ಸಮಸ್ಯೆ ಏಕೆ?

12:51 PM Jun 12, 2017 | |

ಬೆಂಗಳೂರು: “ಮೆಟ್ರೋ ರೈಲು ಸೇವೆ ತುಂಬಾ ಉತ್ತಮವಾಗಿದೆ. ಆದರೆ ಜನದಟ್ಟಣೆ ವಿಪರೀತ ಇರುವುದರಿಂದ ಸಂಚಾರ ದುಸ್ತರವಾಗಿದೆ. ಆದ್ದರಿಂದ ಕನಿಷ್ಠ ಇನ್ನೊಂದು ಬೋಗಿಯನ್ನಾದರೂ ಜೋಡಿಸಿ…’

Advertisement

“ನಮ್ಮ ಮೆಟ್ರೋ’ ಮೊದಲ ಹಂತದ ಉತ್ತರ-ದಕ್ಷಿಣ ಕಾರಿಡಾರ್‌ ಜೂ.17ರಂದು ಉದ್ಘಾಟನೆಗೊಳ್ಳಲಿರುವ ಹಿನ್ನೆಲೆಯಲ್ಲಿ ಭಾನುವಾರ ಅಧಿಕಾರಿಗಳ ಜತೆ ಪರಿಶೀಲನೆ ನಡೆಸಿದ ನಂತರ ಮೆಜೆಸ್ಟಿಕ್‌ನಲ್ಲಿ ಮೆಟ್ರೋ ಪ್ರಯಾಣ ಹೇಗಿದೆ ಎಂದು ವಿಚಾರಿಸಿದ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಅವರಿಗೆ ಪ್ರಯಾಣಿಕರೊಬ್ಬರು ಮುಂದಿಟ್ಟ ಬೇಡಿಕೆ ಇದು. 

ನಾಯಂಡಹಳ್ಳಿ ಕಡೆಯಿಂದ ಮೆಟ್ರೋ ರೈಲಿನಲ್ಲಿ ನಾಗರಾಜು ಎಂಬುವವರು ಮಗುವಿನೊಂದಿಗೆ ಮೆಜೆಸ್ಟಿಕ್‌ಗೆ ಬಂದಿಳಿದರು. ಆಗ ಅಲ್ಲಿಯೇ ಪರಿಶೀಲನೆ ನಡೆಸುತ್ತಿದ್ದ ಸಚಿವ ಜಾರ್ಜ್‌, “ಹೇಗಿದೆ ಮೆಟ್ರೋ ಪ್ರಯಾಣ? ಆರಾಮದಾಯಕವಾಗಿದೆಯೇ?’ ಎಂದು ವಿಚಾರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನಾಗರಾಜು, “ಮೆಟ್ರೋ ಸೇವೆ ಎಲ್ಲಾ ಚೆನ್ನಾಗಿದೆ ಸಾರ್‌. ಟ್ರಾಫಿಕ್‌ ಕಿರಿಕಿರಿಯೂ ಇಲ್ಲ. ಆದರೆ, ರೈಲು ಯಾವಾಗಲೂ ತುಂಬಿತುಳುಕುತ್ತದೆ. ಹಾಗಾಗಿ, ಇನ್ನೊಂದು ಬೋಗಿ ಜೋಡಿಸಬೇಕು’ ಎಂದು ಮನವಿ ಮಾಡಿದರು.

ವರ್ಷಾಂತ್ಯದವರೆಗೆ ಗೋಳು ತಪ್ಪಲ್ಲ?: ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, “ಶೀಘ್ರದಲ್ಲೇ ಮತ್ತಷ್ಟು ಬೋಗಿಗಳನ್ನು ಜೋಡಿಸಲಾಗುವುದು’ ಎಂದು ಭರವಸೆ ನೀಡಿದರು. ಇದೇ ಅಭಿಪ್ರಾಯಗಳನ್ನು ಇನ್ನೂ ಕೆಲವು ಪ್ರಯಾಣಿಕರು ಈ ವೇಳೆ ವ್ಯಕ್ತಪಡಿಸಿದಾಗ, “ಬೋಗಿ ಹೆಚ್ಚಳವಾಗಬೇಕೆಂದರೆ ಈ ವರ್ಷಾಂತ್ಯದವರೆಗೂ ಕಾಯುವುದು ಅನಿವಾರ್ಯ. ಏಕೆಂದರೆ  ನವೆಂಬರ್‌ ಅಂತ್ಯಕ್ಕೆ ಹೆಚ್ಚುವರಿ ಬೋಗಿಗಳನ್ನು ಪೂರೈಸುವುದಾಗಿ ಬಿಇಎಂಎಲ್‌ ಹೇಳಿದೆ,’ ಎಂದು ವರಸೆ ಬದಲಿಸಿದರು.

“ಇನ್ನು ಮೊದಲ ಹಂತ ಸಂಪೂರ್ಣವಾಗಿ ಕಾರ್ಯಾಚರಣೆ ಆರಂಭಿಸಿದ ತಿಂಗಳ ಅಂತರದಲ್ಲೇ ಪ್ರಯಾಣಿಕರ ಸಂಖ್ಯೆ ಐದು ಲಕ್ಷದ ಗಡಿ ದಾಟಲಿದೆ. ಈ ನಿಟ್ಟಿನಲ್ಲಿ ತಕ್ಷಣಕ್ಕೆ ಬಿಎಂಆರ್‌ಸಿ ಮುಂದಿರುವ ಆಯ್ಕೆ ಒಂದೇ, ಪ್ರಸ್ತುತ 4 ನಿಮಿಷಕ್ಕೆ ಒಂದರಂತೆ ಸಂಚರಿಸುವ ಮೆಟ್ರೋ ರೈಲುಗಳ ನಡುವಿನ ಸಂಚಾರ ಸಮಯದ ಅಂತರವನ್ನು 3 ನಿಮಿಷಕ್ಕೆ ಇಳಿಸುವುದು. ನಂತರದ ದಿನಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಿರುವ ನಿಲ್ದಾಣಗಳಿಂದಲೇ ಮೆಟ್ರೋ ರೈಲುಗಳನ್ನು ಓಡಿಸುವ ಯೋಚನೆಯೂ ಇದೆ,’ ಎಂದು ಸಚಿವ ಕೆ.ಜೆ. ಜಾರ್ಜ್‌ ತಿಳಿಸಿದರು. 

Advertisement

ಪ್ರಯಾಣಿಕರ ಹೆಚ್ಚಳವೇ ಸವಾಲು: ಪ್ರಸ್ತುತ ಒಂದೂವರೆ ಲಕ್ಷ ಪ್ರಯಾಣಿಕರ ನಿರ್ವಹಣೆಯೇ ಸವಾಲಾಗಿದೆ. ಹೀಗಿರುವಾಗ ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಎರಡೂವರೆ ಪಟ್ಟು ಹೆಚ್ಚಾಗಲಿದೆ. ಇನ್ನು ಜೂನ್‌ನಲ್ಲಿ ಮೊದಲ ಹಂತದ ಮೆಟ್ರೋ ಮಾರ್ಗದಲ್ಲಿ ಸಂಪೂರ್ಣವಾಗಿ ಸೇವೆ ಶುರುವಾಗಲಿದ್ದು, ಇದೇ ಅವಧಿಯಲ್ಲಿ ಶಾಲಾ-ಕಾಲೇಜುಗಳು ಕೂಡ ಆರಂಭಗೊಳ್ಳಲಿವೆ. ಪ್ರಯಾಣಿಕರ ದಟ್ಟಣೆ ಮತ್ತಷ್ಟು ಹೆಚ್ಚಿರಲಿದೆ. ಇದರ ನಿಯಂತ್ರಣ ನಿಗಮವನ್ನು ಚಿಂತೆಗೀಡು ಮಾಡಿದೆ.  

ಇಂಟರ್‌ಚೇಂಜ್‌ ಗೊಂದಲ?: ಈ ಮಧ್ಯೆ ಇಡೀ ಮಾರ್ಗಕ್ಕೆ ಒಂದೇ ಟಿಕೆಟ್‌ ಪಡೆದರೂ ಪೂರ್ವ-ಪಶ್ಚಿಮ ಕಾರಿಡಾರ್‌ನಿಂದ ಉತ್ತರ-ದಕ್ಷಿಣ ಕಾರಿಡಾರ್‌ನಲ್ಲಿ ಸಂಚರಿಸಬೇಕಾದರೆ ಮೆಜೆಸ್ಟಿಕ್‌ನಲ್ಲಿ ಒಂದು ರೈಲು ಇಳಿದು, ಮತ್ತೂಂದು ರೈಲು ಏರುವುದು ಅನಿವಾರ್ಯ. ಅಲ್ಲದೆ, ಇಡೀ ಯೋಜನೆಯಲ್ಲಿ ಅತಿ ಹೆಚ್ಚು ಪ್ರಯಾಣಿಕರ ದಟ್ಟಣೆ ಇರುವ ನಿಲ್ದಾಣ ಕೂಡ ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್‌) ಆಗಿದೆ. ಇದೆಲ್ಲದರಿಂದ ಮೆಜೆಸ್ಟಿಕ್‌ ಗೊಂದಲದ ಗೂಡಾಗಲಿದೆ. 

ಉತ್ತರ -ದಕ್ಷಿಣ ಕಾರಿಡಾರ್‌ 
* 50 ಮೊದಲ ಹಂತದಲ್ಲಿ ಲಭ್ಯವಿರುವ ರೈಲುಗಳ ಸಂಖ್ಯೆ
* 24 ನಿತ್ಯ ಕಾರ್ಯಾಚರಣೆಗಿಳಿಯುವ ರೈಲುಗಳು
* 260 ಟ್ರಿಪ್‌ಗ್ಳು ನೇರಳೆ ಮಾರ್ಗದಲ್ಲಿ ನಿತ್ಯ ಕಾರ್ಯಾಚರಣೆ
* 180 ಟ್ರಿಪ್‌ಗ್ಳು ಹಸಿರು ಮಾರ್ಗದಲ್ಲಿ ನಿತ್ಯ ಕಾರ್ಯಾಚರಣೆ
* 4 ನಿಮಿಷಕ್ಕೊಂದು ರೈಲು ಪೀಕ್‌ ಅವರ್‌ನಲ್ಲಿ ನೇರಳೆ ಮಾರ್ಗದಲ್ಲಿ ಸಂಚಾರ
* 8 ನಿಮಿಷಕ್ಕೊಂದು ರೈಲು ಹಸಿರು ಮಾರ್ಗದಲ್ಲಿ ಕನಿಷ್ಠ ಅಂತರದ ಸಂಚಾರ
* 42 ಕಿ.ಮೀ. ಮಾರ್ಗದ ಉದ್ದ
* 40 ನಿಲ್ದಾಣಗಳು 
* 15 ನಿಲ್ದಾಣಗಳ ಆವರಣದಲ್ಲಿ ವಾಹನ ನಿಲುಗಡೆ ವ್ಯವಸ್ಥೆ

Advertisement

Udayavani is now on Telegram. Click here to join our channel and stay updated with the latest news.

Next