Advertisement

ಕಡಲ ನಗರಿಯಲ್ಲಿ ಗರಿಗೆದರಿದ ನಗರ ಸಂಪರ್ಕದ ಕನಸು

04:37 AM Feb 09, 2019 | |

ಮಹಾನಗರ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ಮಂಡಿಸಿರುವ ಬಜೆಟ್‌ನಲ್ಲಿ ಮಂಗಳೂರಿಗೆ ಮೆಟ್ರೋ ರೈಲು ಸೇವೆ ಪರಿಚಯಿಸುವ ಪ್ರಸ್ತಾವ ಮಾಡಿರುವುದು ಗಮನಾರ್ಹ. ಇದರಿಂದ ಕರಾವಳಿ ಭಾಗದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿರುವಂತೆ ಮೆಟ್ರೋ ರೈಲು ಸಂಪರ್ಕ ಸಾಧ್ಯತೆಯ ಕನಸೊಂದು ಚಿಗುರೊಡೆದಿದೆ.

Advertisement

ಮಂಗಳೂರು, ಮೈಸೂರು ಸಹಿತ ರಾಜ್ಯದ 2ನೇ ಹಂತದ ಮಹಾನಗರಗಳಲ್ಲಿ ಮೆಟ್ರೋ ರೈಲು ಯೋಜನೆ ಅಳವಡಿಸುವ ವಿಚಾರವಾಗಿ ರಾಜ್ಯದ 2019-20ನೇ ಸಾಲಿನ ಬಜೆಟ್‌ನಲ್ಲಿ ಉಲ್ಲೇಖೀಸಿರುವುದು ಮಹತ್ವದ ಬೆಳವಣಿಗೆ. ಏಕೆಂದರೆ, ನಗರವು ಈಗಾಗಲೇ ಭೂಸಾರಿಗೆ, ವಾಯುಮಾರ್ಗ, ಜಲಮಾರ್ಗ, ರೈಲು ಮಾರ್ಗದ ಮೂಲಕ ಅತ್ಯುತ್ತಮವಾದ ಸಂಪರ್ಕ ವ್ಯವಸ್ಥೆ ಹೊಂದಿದೆ. ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕವಾಗಿ ಈ ರೀತಿಯ ಸಂಪರ್ಕ ವ್ಯವಸ್ಥೆಯು ದೇಶ-ವಿದೇಶಗಳ ಪ್ರವಾಸಿಗರನ್ನು ಕೂಡ ಮಂಗಳೂರಿನಂಥ ನಗರಗಳಿಗೆ ಆಕರ್ಷಿಸುವುದಕ್ಕೆ ಸಹಕಾರಿ. ಹೀಗಿರುವಾಗ, ಕಾಂಗ್ರೆಸ್‌-ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರಕಾರವು ಬಜೆಟ್‌ನಲ್ಲಿ ಈಗ ಮೆಟ್ರೋ ರೈಲು ಸೇವೆಯ ಸಾಧ್ಯಾ-ಸಾಧ್ಯತೆ ಬಗ್ಗೆ ಪ್ರಸ್ತಾವಿಸಿರುವುದು ನಗರದ ಸಮಗ್ರ ಬೆಳ ವಣಿಗೆಗಳಿಗೆ ಮತ್ತಷ್ಟು ಅವಕಾಶಗಳನ್ನು ತೆರೆದಿಡುವ ಸಾಧ್ಯತೆಯಿದೆ. ಅಷ್ಟೇ ಅಲ್ಲ, ಈ ಚಿಂತನೆ ಸಾಕಾರಗೊಂಡರೆ ಸ್ಮಾರ್ಟ್‌ ನಗರವಾಗಿ ಉನ್ನತೀಕರಣದ ಹೊಸ್ತಿಲಿನಲ್ಲಿರುವ ಮಂಗಳೂರಿನ ಅಭಿ ವೃದ್ಧಿಗೆ ಇನ್ನಷ್ಟು ವೇಗ ಲಭಿಸುವುದರಲ್ಲಿ ಅನುಮಾನವಿಲ್ಲ. ಈ ನಗರ ಶಿಕ್ಷಣ, ಆರೋಗ್ಯ ಸೇವೆ, ಪ್ರಸಿದ್ಧ ಧಾರ್ಮಿಕ ಕೇಂದ್ರಗಳ ಮೂಲಕ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಬಂದರು, ವಿಮಾನ ನಿಲ್ದಾಣ, ರೈಲು, ಮೂರು ಹೆದ್ದಾರಿಗಳನ್ನು ಒಳಗೊಂಡಿರುವ ದೇಶದ ಕೆಲವೇ ನಗರಗಳಲ್ಲಿ ಇದು ಒಂದು. ನಗರ ವಿಸ್ತಾರಗೊಳ್ಳುತ್ತಿದ್ದು, ಹೊರವಲಯಗಳನ್ನು ತನ್ನ ತೆಕ್ಕೆಗೆ ಸೆಳೆದುಕೊಂಡು ಬೆಳೆಯುತ್ತಿದೆ. ಆಡಳಿತಾತ್ಮಕವಾಗಿ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೀಮಿತವಾದರೂ ವ್ಯವಹಾರಾತ್ಮ ವಾಗಿ ಇದರಾಚೆಗೆ ನಗರ ವ್ಯಾಪಿಸುತ್ತಿದೆ. ಪೂರ್ವಭಾಗದಲ್ಲಿ ಬಿ.ಸಿ. ರೋಡ್‌ವರೆಗೆ, ದಕ್ಷಿಣದಲ್ಲಿ ಮುಡಿಪು, ತಲಪಾಡಿ, ಉತ್ತರದಲ್ಲಿ ಮೂಲ್ಕಿವರೆಗೆ ನಗರವ್ಯಾಪ್ತಿ ವ್ಯಾವಹಾರಿಕವಾಗಿ ಈಗಾಗಲೇ ವಿಸ್ತರಿಸಿದೆ. ಮೂಡುಬಿದಿರೆ ಶೈಕ್ಷಣಿಕ ಹಬ್‌ ಆಗಿ ನಗರ ದೊಂದಿಗೆ ಜೋಡಿಸಿಕೊಂಡಿದೆ.

ನಗರದ ಸುತ್ತಮುತ್ತಲ ಗ್ರಾಮಗಳು, ಮೂಲ್ಕಿ, ಉಳ್ಳಾಲ ಪುರಸಭೆಯ ಪ್ರದೇಶ ಗಳು, ಕೊಣಾಜೆ ಪ್ರದೇಶಗಳನ್ನು ಒಳಗೊಂಡು ಗ್ರೇಟರ್‌ ಮಂಗಳೂರು ರಚಿಸುವ ಪ್ರಸ್ತಾ ವನೆ ಕೂಡ ಚಿಂತನೆಯಲ್ಲಿದೆ. ಇವುಗಳ ಸೇರ್ಪಡೆಯಿಂದ ಮಹಾನಗರದ ಜನ ಸಂಖ್ಯೆಗೆ 2 ಲಕ್ಷ ಜನಸಂಖ್ಯೆ ಹೆಚ್ಚುವರಿ ಯಾಗಿ ಸೇರ್ಪಡೆಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ನಗರ ವಿಸ್ತಾರದ ವೇಗವನ್ನು ಗಣನೆಯಲ್ಲಿಟ್ಟುಕೊಂಡು ಮೋಟಾರು ಸಂಚಾರದ ಜತೆಗೆ ಮೆಟ್ರೋ ರೈಲು ಯೋಜನೆ ರೂಪಿಸುವುದು ಅಗತ್ಯ ಎಂಬ ಬೇಡಿಕೆಗಳು ವ್ಯಕ್ತವಾಗಿವೆ.

2006ರಲ್ಲೇ ಎಚ್‌ಡಿಕೆ ಪರಿಶೀಲನೆ 
2006ರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಮಂಗಳೂರಿಗೆ ಆಗಮಿಸಿದ್ದ ಸಂದರ್ಭ ಸ್ಕೈಬಸ್‌ ಪ್ರಸ್ತಾವನೆಯನ್ನು ಆಗ ಶಾಸಕರಾಗಿದ್ದ ಎನ್‌. ಯೋಗೀಶ್‌ ಭಟ್, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಪ್ರತಿನಿಧಿಗಳು ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಿದ್ದರು. ಈ ಬಗ್ಗೆ ಆಸಕ್ತಿ ತೋರಿಸಿದ್ದ ಅವರು ಬಿಲ್ಡ್‌ ಅಪರೇಟ್ ಆ್ಯಂಡ್‌ ಟ್ರಾನ್ಸ್‌ಫಾರ್‌(ಬಿಒಟಿ) ಆಧಾರದಲ್ಲಿ ಸಾಕಾರಗೊಳಿಸುವ ಬಗ್ಗೆ ಒಲವು ವ್ಯಕ್ತಪಡಿಸಿದ್ದರು. ಸಾಧ್ಯತ ವರದಿ ಸಿದ್ಧ ಪಡಿಸಲು ಒಂದು ಕೋ.ರೂ. ಒದಗಿಸುವ ಆಶ್ವಾಸನೆ ಕೂಡ ನೀಡಿದ್ದರು. ಆದರೆ ಸ್ಕೈಬಸ್‌ ಯೋಜನೆ ಗೋವಾದಲ್ಲಿ ವಿಫಲವಾಗಿದೆ ಎಂಬ ಅಂಶಗಳ ಹಿನ್ನೆಲೆಯಲ್ಲಿ ಯೋಜನೆಯ ಗಟ್ಟಿತನದ ಬಗ್ಗೆ ಸಂದೇಹಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಕೈಬಿಡಲಾಗಿತ್ತು.

ಮೆಟ್ರೋ ಪರಿಕಲ್ಪನೆ ವಿಸ್ತರಿಸುತ್ತಿದೆ
ನಗರದೊಳಗೆ ನಿರ್ದಿಷ್ಟ ಪರಿಧಿಗೆ ಸೀಮಿತವಾಗಿರುವ ಮೆಟ್ರೋ ರೈಲು ಪರಿಕಲ್ಪನೆ ಈಗ ವಿಸ್ತಾರಗೊಳ್ಳುತ್ತಿದೆ. ನಗರಗಳ ಮಧ್ಯೆ ಕೊಂಡಿಯಾಗಿ ಬೆಳೆಯುತ್ತಿದೆ. ಮಂಗಳೂರು, ಉಡುಪಿ, ಮಣಿಪಾಲ, ಮೂಡುಬಿದಿರೆ , ಬಿ.ಸಿ.ರೋಡ್‌, ಕೊಣಾಜೆ ಪ್ರದೇಶಗಳನ್ನು ಒಳಗೊಂಡು ಸಮಗ್ರ ಯೋಜನೆ ರೂಪಿಸಲು ಸಾಧ್ಯವಿದೆ. ಈ ಎಲ್ಲ ಪ್ರದೇಶಗಳು ವಾಣಿಜ್ಯ, ಔದ್ಯೋಗಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಪ್ರವಾಸೋದ್ಯಮವಾಗಿ ಪ್ರಾಮುಖ್ಯವನ್ನು ಪಡೆದುಕೊಂಡಿರುವ ನಗರಗಳು.

Advertisement

ದಶಕಗಳ ಹಿಂದಿನ ಪ್ರಸ್ತಾವನೆ 
ನಗರದಲ್ಲಿ ರೈಲ್ವೇ ಸಂಚಾರ ಜಾಲದ ಚಿಂತನೆ ದಶಕಗಳ ಹಿಂದೆ ರೂಪುಗೊಂಡಿತ್ತು. 2006ರಲ್ಲಿ ಸ್ಕೈಬಸ್‌ ಪ್ರಸ್ತಾವನೆ, 2008ರಲ್ಲಿ ಬಿಜೆಪಿ ಸರಕಾರದ ಬಜೆಟ್‌ನಲ್ಲಿ ಮೋನೋರೈಲು ಸಂಚಾರದ ಸಾಧ್ಯತ ವರದಿ ತಯಾರಿಗೆ ಪ್ರಸ್ತಾವನೆ ಮಾಡಲಾಗಿತ್ತು. ಆದರೆ ಆ ಎರಡೂ ಯೋಜನೆಗಳ ಅನುಷ್ಠಾನದ ದಿಕ್ಕಿನಲ್ಲಿ ಯಾವುದೇ ಪ್ರಗತಿ ಕಾಣಲಿಲ್ಲ. ಸ್ಕೈಬಸ್‌ ಯೋಜನೆ ಸಾಗುವ ಮಾರ್ಗದ ಬಗ್ಗೆ ಕರಡು ಪ್ರಸ್ತಾವನೆ ರೂಪಿಸಲಾಗಿತ್ತು. ಐಟಿ ಪಾರ್ಕ್‌ನ ಸರಹದ್ದಿನಲ್ಲಿರುವ ಅಮ್ಮೆಂಬಳದಿಂದ ವಿಶೇಷ ಆರ್ಥಿಕ ವಲಯದ ಸರಹದ್ದಿನಲ್ಲಿರುವ ಹಳೆಯಂಗಡಿಯವರೆಗೆ ಸ್ಕೈಬಸ್‌ ಸಂಚಾರ ವ್ಯವಸ್ಥೆ ಒಳಗೊಂಡಿರುವ ಕರಡು ನಕ್ಷೆಯನ್ನು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸಿದ್ಧಪಡಿಸಿತ್ತು. ಕರಡು ನಕ್ಷೆಯಂತೆ ಒಂದು ಮಾರ್ಗ ಕೊಣಾಜೆ, ತೊಕ್ಕೊಟ್ಟು, ಪಂಪ್‌ವೆಲ್‌, ಕಂಕನಾಡಿ ಜಂಕ್ಷನ್‌, ನಂತೂರು, ಕದ್ರಿ ಪಾರ್ಕ್‌, ಲಾಲ್‌ಬಾಗ್‌, ಲೇಡಿಹಿಲ್‌, ಕೊಟ್ಟಾರ, ಪಣಂಬೂರು ಮೂಲಕ ಸುರತ್ಕಲ್‌ ಹಾದಿಯಲ್ಲಿ ಇದು ಸಾಗುತ್ತಿದೆ. ಇನ್ನೊಂದು ಮಾರ್ಗ ಕಂಕನಾಡಿ ಜಂಕ್ಷನ್‌ನಿಂದ ಕವಲೊಡೆದು ಹಂಪನಕಟ್ಟೆ , ನವಭಾರತ್‌ ವೃತ್ತ ಮೂಲಕ ಸಾಗಿ ಲಾಲ್‌ಬಾಗ್‌ನಲ್ಲಿ ಮುಖ್ಯ ಮಾರ್ಗವನ್ನು ಸೇರುತ್ತದೆ. ಒಟ್ಟು 28.8 ಕಿ.ಮೀ. ಉದ್ದದ ಯೋಜನೆಯ ವೆಚ್ಚ 1,540 ಕೋ.ರೂ. ಎಂದು ಆಗ ಅಂದಾಜಿಸಲಾಗಿತ್ತು. ಮೋನೋರೈಲು ಪ್ರಸ್ತಾವನೆಯಲ್ಲಿ ಮಣಿಪಾಲದಿಂದ ಕೊಣಾಜೆವರೆಗೆ ರೈಲು ಸಂಚಾರ ವ್ಯವಸ್ಥೆ ಯೋಜನೆ ಒಳಗೊಂಡಿತ್ತು.

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next