Advertisement

ದೇಶದ ಮೆಟ್ರೋ ಯೋಜನೆಗಳಿಗೆ ತಾಂತ್ರಿಕ ತಂತ್ರಜ್ಞರ ಕೊರತೆ: ಶ್ರೀಧರನ್‌

11:51 AM Mar 19, 2017 | Team Udayavani |

ಬೆಂಗಳೂರು: “ದೇಶದ ಮೆಟ್ರೋ ಯೋಜನೆಗಳಿಗೆ ಸುರಂಗ ಕೊರೆಯುವ “ಟನಲ್‌ ಬೋರಿಂಗ್‌ ಮೆಷಿನ್‌’ (ಟಿಬಿಎಂ)ಗಳು ಹಾಗೂ ತಾಂತ್ರಿಕ ತಜ್ಞರ ಅಭಾವವಿದೆ. ಹೀಗಾಗಿ ಕಾಮಗಾರಿಗಳು ವಿಳಂಬವಾಗುತ್ತಿದೆ,” “ಮೆಟ್ರೋ ಮ್ಯಾನ್‌’ ಖ್ಯಾತಿಯ, ದೆಹಲಿ ಮೆಟ್ರೋನ ಹಿರಿಯ ಸಲಹೆಗಾರ ಡಾ.ಇ.ಶ್ರೀಧರನ್‌ ಹೇಳಿದ್ದಾರೆ. 

Advertisement

ನಗರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ದೇಶದಲ್ಲಿ 12 ಕಡೆ ಮೆಟ್ರೋ ಯೋಜನೆಗಳು ಪ್ರಗತಿಯಲ್ಲಿವೆ. ಟಿಬಿಎಂ ಯಂತ್ರಗಳಿಗೆ ಭಾರಿ ಬೇಡಿಕೆಯಿದೆ. ಅಲ್ಲದೇ ಸುರಂಗ ನಿರ್ಮಾಣ ಕಾಮಗಾರಿ ಎತ್ತರಿಸಿದ ಮಾರ್ಗದ ಕಾಮಗಾರಿಗಳಿಗಿಂತ ನಿಧಾನಗತಿಯಲ್ಲಿ ನಡೆಯಲಿವೆ,” ಎಂದು ಹೇಳಿದರು.

“ದೆಹಲಿ ಮೆಟ್ರೋ ಯೋಜನೆ ಅನುಷ್ಠಾನದ ವೇಳೆ ಐಐಟಿ ಸಂಸ್ಥೆಯಲ್ಲಿ ಎಂ.ಟೆಕ್‌ ಕೋರ್ಸ್‌ ಆರಂಭಿಸಿ ತಾಂತ್ರಿಕ ತಜ್ಞರನ್ನು ರೂಪಿಸಲಾಯಿತು. ಆದರೆ ಇಂದು ದೇಶದ ವಿವಿಧೆಡೆ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ತಾಂತ್ರಿಕ ತಜ್ಞರ ಕೊರತೆಯೂ ಕಾಡುತ್ತಿರಬಹುದು. ಇದು ಸಹಜವಾಗಿಯೇ ಕಾಮಗಾರಿ ಮೇಲೆ ಪರಿಣಾಮ ಬೀರಲಿದೆ,” ಎಂದು ಅಭಿಪ್ರಾಯಪಟ್ಟರು. 

“ನಮ್ಮ ಮೆಟ್ರೋ ಯೋಜನೆಯಲ್ಲಿ ಎಲ್ಲ ರೀತಿಯ ತಂತ್ರಜ್ಞಾನ ಬಳಸಲಾ­ಗುತ್ತಿದೆ. ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಜನಸಾಂದ್ರತೆಯೂ ಹೆಚ್ಚಿದ್ದು, ನಾನಾ ಸೇವೆಗಳ ಸಂಪರ್ಕ ಜಾಲ ಸ್ಥಳಾಂತರ, ಭೂಸ್ವಾಧೀನ ಪ್ರಕ್ರಿ­ಯೆಯಿಂದಾಗಿ ಯೋಜನೆ ಅನುಷ್ಠಾನ‌­ದಲ್ಲಿ ತಡವಾಗಿರಬಹುದು. ಟಿಬಿಎಂ ಯಂತ್ರಗಳಲ್ಲಿ ಬಳಸುವ ಕೆಲ ಉಪಕರಣಗಳು, ಪರಿಕರಗಳ ದುರಸ್ತಿ­ಯಿಂದಲೂ ವಿಳಂಬವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ,” ಎಂದು ಹೇಳಿದರು.

“ಯೋಜನೆಗೆ ಸಂಬಂಧಪಟ್ಟಂತೆ ತ್ವರಿ­ತವಾಗಿ ನಿರ್ಧಾರ ಕೈಗೊಳ್ಳುವುದು ಹಾಗೂ ಅನುಮೋದನೆ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವುದು “ವಿಶೇಷ ಉದ್ದೇಶಿತ ಯೋಜನೆ’ಯ ಉದ್ದೇಶ. ಆದರೆ “ನಮ್ಮ ಮೆಟ್ರೋ’ ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸುವ ಕಾಲಮಿತಿ ವಿಸ್ತರಣೆಯಾಗುತ್ತಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ,” ಎಂದರು.

Advertisement

“ಮೆಟ್ರೋ ಯೋಜನೆಗೆ ಅಗತ್ಯವಾದ ಅನುದಾನವನ್ನು ಸಕಾಲದಲ್ಲಿ ಬಿಡುಗಡೆ ಮಾಡುವುದು ಕೂಡ ಮುಖ್ಯವಾಗಿದೆ. ಸೂಕ್ತ ಮೇಲ್ವಿಚಾರಣೆಯೂ ಅಗತ್ಯವಾಗಿರುತ್ತದೆ. ಕರ್ನಾಟಕ ರಾಜ್ಯ ಸರ್ಕಾರವು ನಗರದಲ್ಲಿ ಅಗತ್ಯವಿರುವ ಕಡೆ ಮೆಟ್ರೋ ಸೇವೆ ವಿಸ್ತರಣೆಗೆ ಒಲವು ತೋರಿದೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಹೈಸ್ಪೀಡ್‌ ರೈಲು ಮಾತ್ರ ಪರ್ಯಾಯ 
ಬಸವೇಶ್ವರ ವೃತ್ತದಿಂದ ಹೆಬ್ಟಾಳದ ವರೆಗೆ ರಾಜ್ಯ ಸರ್ಕಾರ ನಿರ್ಮಿಸಲು ಉದ್ದೇಶಿಸಿದ್ದ ಉಕ್ಕಿನ ಸೇತುವೆಯನ್ನು ವಿರೋಧಗಳ ಹಿನ್ನೆಲೆಯಲ್ಲಿ ಕೈಬಿಡಲಾಗಿದೆ. ಹೀಗಾಗಿ ಪರ್ಯಾಯವೇನು ಎಂಬ ಪ್ರಶ್ನೆ ಎದ್ದಿದೆ. ಇದೇ ಹೊತ್ತಿನಲ್ಲೇ ಆ ಮಾರ್ಗದಲ್ಲಿ ಹೈಸ್ಪೀಡ್‌ ರೈಲು ಸೂಕ್ತ ಎಂದು ಮೆಟ್ರೋ ತಜ್ಞ ಶ್ರೀಧರನ್‌ ಅಬಿಪ್ರಾಯಪಟ್ಟಿದ್ದಾರೆ. ಬೆಂಳೂರಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಗಮ ಸಂಚಾರಕ್ಕಾಗಿ ಹೈಸ್ಪೀಡ್‌ ರೈಲು ಸೂಕ್ತವೆನಿಸಿದೆ.

ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಹೈಸ್ಪೀಡ್‌ ರೈಲು ಸಂಪರ್ಕ ಕಲ್ಪಿಸಬಹುದು. ಇಲ್ಲವೇ ಮೆಟ್ರೋ ರೈಲು ಮಾರ್ಗವನ್ನೇ ವಿಸ್ತರಿಸಬಹುದು. ಮೆಟ್ರೋ ಹಾಕುವುದಾದರೆ, ನಿಲ್ದಾಣಗಳನ್ನು ಕಡಿಮೆ ಮಾಡಿ ವೇಗ ಹೆಚ್ಚಿಸುವುದು ಸೂಕ್ತ ಎಂದು ಮೆಟ್ರೋ ತಜ್ಞ ಇ.ಶ್ರೀಧರನ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next