Advertisement

ವರ್ಷದೊಳಗೆ ಮೆಟ್ರೋಗೆ 3ರ ಬದಲು 6 ಬೋಗಿ

11:49 AM Jan 04, 2017 | Team Udayavani |

ಬೆಂಗಳೂರು: ಪೂರ್ವ-ಪಶ್ಚಿಮ ಕಾರಿಡಾರ್‌ನಲ್ಲಿ ಸಂಚರಿಸುವ ಮೆಟ್ರೋ ರೈಲುಗಳ ಸಾಮರ್ಥ್ಯ ವರ್ಷದಲ್ಲಿ ದುಪ್ಪಟ್ಟಾಗಲಿದೆ. ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಮಾರ್ಗದಲ್ಲಿ ಕನಿಷ್ಠ 3 ನಿಮಿಷಕ್ಕೊಂದು ರೈಲು ಓಡಿಸುವ ಸಾಮರ್ಥ್ಯ ಬಿಎಂಆರ್‌ಸಿ ಹೊಂದಿದೆ. ಆದರೆ, ಈಗಾಗಲೇ “ಪೀಕ್‌ ಅವರ್‌’ (ಜನದಟ್ಟಣೆ ಸಮಯ)ನಲ್ಲಿ 4 ನಿಮಿಷಗಳ ಅಂತರದಲ್ಲಿ ಮೆಟ್ರೋ ರೈಲು ಸಂಚರಿಸುತ್ತಿದೆ.

Advertisement

ಈ ಹಿನ್ನೆಲೆಯಲ್ಲಿ ಭವಿಷ್ಯದ ದೃಷ್ಟಿಯಿಂದ ಮೆಟ್ರೋ ಬೋಗಿಗಳ ವಿಸ್ತರಣೆ ಅನಿವಾರ್ಯವಾಗಿದ್ದು, ವರ್ಷದಲ್ಲಿ ಆರು ಬೋಗಿಗಳ ಮೆಟ್ರೋ ರೈಲು ಸಂಚರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ಸಿದ್ಧತೆ ನಡೆಸಿದೆ. ಈ ಸಂಬಂಧ ಈಗಾಗಲೇ ಟೆಂಡರ್‌ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಬಿಇಎಂಎಲ್‌ (ಭಾರತ್‌ ಅರ್ತ್‌ ಮೂವರ್ ಲಿಮಿಟೆಡ್‌) ಮಾತ್ರ ಟೆಂಡರ್‌ನಲ್ಲಿ ಭಾಗಿಯಾಗಿತ್ತು ಎಂದು ಮೂಲಗಳು ತಿಳಿಸಿವೆ.

ಅದರಂತೆ ಅಂದಾಜು 1,600 ಕೋಟಿ ವೆಚ್ಚದಲ್ಲಿ ಮುಂದಿನ 12 ತಿಂಗಳಲ್ಲಿ ಬಿಇಎಂಎಲ್‌ 150 ಬೋಗಿಗಳನ್ನು ನಿರ್ಮಿಸಿ ಕೊಡಲಿದೆ. ಈಗಾಗಲೇ ಕಾರ್ಯಾಚರಣೆ ಮಾಡುತ್ತಿರುವ ಮೆಟ್ರೋ ರೈಲುಗಳ ವಿನ್ಯಾಸವನ್ನೂ ಇದೇ ಕಂಪೆನಿ ರೂಪಿಸಿದೆ. ಈ ಮೂಲಕ ಮೂರು ಬೋಗಿಗಳಿರುವ ಈಗಿನ ಮೆಟ್ರೋ ರೈಲು ವರ್ಷಾಂತ್ಯಕ್ಕೆ ಆರು ಬೋಗಿಗಳಿಗೆ ವಿಸ್ತರಣೆ ಆಗಲಿದೆ ಎಂದು ಬಿಎಂಆರ್‌ಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೆಟ್ರೋ ಪರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ.

ಈ ಹಿನ್ನೆಲೆಯಲ್ಲಿ ರೈಲಿನ ಬೋಗಿಗಳ ಸಂಖ್ಯೆಯನ್ನು ಆರಕ್ಕೆ ಹೆಚ್ಚಿಸಲು ಉದ್ದೇಶಿಸಿದ್ದು, ಟೆಂಡರ್‌ ಪ್ರಕ್ರಿಯೆ ಕೂಡ ಮುಗಿಯುವ ಹಂತದಲ್ಲಿದೆ. ಎಂಟು ತಿಂಗಳಲ್ಲೇ ಹೆಚ್ಚುವರಿ ಬೋಗಿಗಳು ಸಿದ್ಧಗೊಳ್ಳಲಿದ್ದು, ವರ್ಷದಲ್ಲಿ ಅಳವಡಿಕೆ ಆಗಲಿವೆ ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ. ವಸಂತರಾವ್‌ ತಿಳಿಸಿದ್ದಾರೆ. 

ಹೆಚ್ಚುವರಿ ಬೋಗಿಗಳು ಯಾಕೆ?: ಈಗಾಗಲೇ 4 ನಿಮಿಷಕ್ಕೊಂದು ರೈಲು ಸಂಚರಿಸುತ್ತಿವೆ. ಸದ್ಯದ ಸಾಮರ್ಥ್ಯದಲ್ಲಿ 3 ನಿಮಿಷದ ಅಂತರದಲ್ಲಿ ರೈಲು ಓಡಿಸಬಹುದಾಗಿದೆ. 4ರಿಂದ 3 ನಿಮಿಷ ಅಂದರೆ ಒಂದು ನಿಮಿಷ ಕಡಿಮೆ ಮಾಡಿ, ಮೆಟ್ರೋ ಓಡಿಸುವುದರಿಂದ ನಿಗಮಕ್ಕಾಗಲಿ, ಪ್ರಯಾಣಿಕರಿಗಾಗಲಿ ನಿರೀಕ್ಷಿತಮಟ್ಟದಲ್ಲಿ ಉಪಯೋಗ ಆಗುವುದಿಲ್ಲ. ಕೇವಲ ಒಂದು ನಿಮಿಷ ತಗ್ಗಿಸಲು ಮತ್ತೂಂದು ರೈಲು ಓಡಿಸಬೇಕಾಗುತ್ತದೆ. ಇದಕ್ಕೆ ವಿದ್ಯುತ್‌ ಬಳಕೆ, ನಿರ್ವಹಣೆ ಸೇರಿದಂತೆ ಮತ್ತಿತರ ಹೆಚ್ಚುವರಿ ವೆಚ್ಚ ತಗಲುತ್ತದೆ.

Advertisement

ಹಾಗಾಗಿ, ಹೆಚ್ಚುವರಿ ಮೂರು ಬೋಗಿಗಳನ್ನು ಜೋಡಿಸುವುದು ಸೂಕ್ತ ಎಂಬುದು ತಜ್ಞರ ಅಭಿಪ್ರಾಯ. ಇದರಿಂದ ಪ್ರಯಾಣಿಕರನ್ನು ಕೊಂಡೊಯ್ಯುವ ಮೆಟ್ರೋ ರೈಲಿನ ಸಾಮರ್ಥ್ಯ ಎರಡು ಸಾವಿರಕ್ಕೆ ಏರಲಿದೆ ಎಂಬುದು ಲೆಕ್ಕಾಚಾರ.  ಅಧಿಕಾರಿಗಳ ಮಾಹಿತಿ ಪ್ರಕಾರ ನಿತ್ಯ ಒಟ್ಟಾರೆ 33 ಕಿ.ಮೀ. ಮೆಟ್ರೋ ಮಾರ್ಗದಲ್ಲಿ ಒಂದೂವರೆ ಲಕ್ಷ$ಜನ ಸಂಚರಿಸುತ್ತಿದ್ದಾರೆ. ನಿರೀಕ್ಷೆ ಇರುವುದು ಎರಡು ಲಕ್ಷಪ್ರಯಾಣಿಕರು. ಮುಂಬರುವ ದಿನಗಳಲ್ಲಿ ನಿರೀಕ್ಷೆ ಮೀರಿ ಜನ ಮೆಟ್ರೋ ಸಂಚರಿಸುವ ನಿರೀಕ್ಷೆ ಇದೆ.

ಇಂದು 2ನೇ ಹಂತದ ಪರೀಕ್ಷೆ
ನ್ಯಾಷನಲ್‌ ಕಾಲೇಜು ನಿಲ್ದಾಣದಿಂದ ಪುಟ್ಟೇನಹಳ್ಳಿ ನಡುವೆ “ನಮ್ಮ ಮೆಟ್ರೋ’ ಮೊದಲ ಪರೀಕ್ಷೆಯಲ್ಲಿ ಪಾಸಾಗಿದೆ. ಬುಧವಾರ ಎರಡನೇ ಪರೀಕ್ಷೆ ನಡೆಯಲಿದೆ ಎಂದು ಬಿಎಂಆರ್‌ಸಿ ಮೂಲಗಳು ತಿಳಿಸಿವೆ. ಮೆಟ್ರೋ ರೈಲು ಯಾವ ವೇಗದಲ್ಲಿ ಓಡುತ್ತಿದೆ? ಯಾವ ವೇಗದಲ್ಲಿ ಓಡಬೇಕು ಎನ್ನವುದು ಸೇರಿದಂತೆ ಟ್ರ್ಯಾಕ್‌ ಡಾಟಾ, ಸಿಗ್ನಲಿಂಗ್‌, ರೈಲು ಇರುವ ಸ್ಥಳ ಮತ್ತಿತರ ಪರೀಕ್ಷೆಯನ್ನು ಒಳಗೊಂಡ ಮೊದಲ “ಇಟರೇಷನ್‌’ (iteration) ಪೂರ್ಣಗೊಳಿಸಿ, ಫ್ರಾನ್ಸ್‌ಗೆ ಕಳುಹಿಸಲಾಗಿತ್ತು.

ಇದಕ್ಕೆ ಅನುಮೋದನೆ ಸಿಕ್ಕಿದ್ದು, ಎರಡನೇ ಇಟರೇಷನ್‌ ಬುಧವಾರದಿಂದ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಇದರ ಜತೆಗೆ ಇದೇ ಮಾರ್ಗದ ಮತ್ತೂಂದು ಹಳಿಯಲ್ಲೂ ಶೀಘ್ರದಲ್ಲೇ ಮೆಟ್ರೋ ರೈಲು ಪರೀಕ್ಷಾರ್ಥ ಸಂಚಾರ ನಡೆಯಲಿದೆ ಎನ್ನಲಾಗಿದೆ. 

ದೆಹಲಿ ಮಾದರಿ 
ದೆಹಲಿ ಮೆಟ್ರೋ ರೈಲು ಮೊದಲು 4 ಬೋಗಿಗಳಿದ್ದವು. ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ಇದನ್ನು ಆರಕ್ಕೆ ಹೆಚ್ಚಿಸಲಾಯಿತು. ಈಗ ಎಂಟು ಬೋಗಿಗಳಿಗೆ ವಿಸ್ತರಿಸಲಾಗಿದೆ. ಅದೇ ಮಾದರಿಯನ್ನು ಈಗ “ನಮ್ಮ ಮೆಟ್ರೋ’ದಲ್ಲೂ ಅನುಸರಿಸಲಾಗುತ್ತಿದೆ. 

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next