Advertisement

ಮೆಟ್ರೋ ಕಂ ಹೈಸ್ಪೀಡ್  ರೈಲು ಕೂಗು

01:10 PM Dec 24, 2018 | Team Udayavani |

ಬೆಂಗಳೂರು: ಸಂಚಾರದಟ್ಟಣೆ ನಿವಾರಣೆಗಾಗಿ ಸಿಲ್ಕ್ಬೋರ್ಡ್‌ ವೃತ್ತ- ಕೆ.ಆರ್‌.ಪುರ ನಡುವೆ ರೋಡ್‌ ಕಂ ರೈಲು ಮಾರ್ಗ ನಿರ್ಮಾಣಕ್ಕೆ ಚಿಂತನೆ ನಡೆಸುತ್ತಿರುವ ಬೆನ್ನಲ್ಲೇ ಇದೇ ಮಾದರಿಯಲ್ಲಿ ಹೆಬ್ಟಾಳ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲಿ ‘ಮೆಟ್ರೋ ಕಂ ಹೈಸ್ಪೀಡ್‌ ರೈಲು’ ಮಾರ್ಗವನ್ನೇಕೆ ನಿರ್ಮಿಸಬಾರದು ಎಂಬ ಕೂಗು ಕೇಳಿಬರುತ್ತಿದೆ.

Advertisement

ವಿಮಾನ ನಿಲ್ದಾಣದಲ್ಲಿ ವರ್ಷದಿಂದ ವರ್ಷಕ್ಕೆ ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಿದೆ. ಭವಿಷ್ಯದ ದೃಷ್ಟಿಯಿಂದ ಉದ್ದೇಶಿತ ಈ ಮಾರ್ಗದಲ್ಲಿ’ಡಬಲ್‌ ಡೆಕ್ಕರ್‌’ ಅಂದರೆ ಸಾಮಾನ್ಯ ಮೆಟ್ರೋ ಜತೆಗೆ ಹೈಸ್ಪೀಡ್‌ ರೈಲು ಮಾರ್ಗಕ್ಕೆ ಈಗಲೇ ಯೋಜನೆ ರೂಪಿಸುವ ಅಗತ್ಯವಿದೆ. ಇದರಿಂದ ಹೆಚ್ಚು-ಕಡಿಮೆ (ಶೇ. 10ರಷ್ಟು ಹೆಚ್ಚಳ ಆಗಬಹುದು) ಈಗಿರುವ ಯೋಜನಾ ವೆಚ್ಚದಲ್ಲೇ ಎರಡೂ ಪ್ರಕಾರದ ಸಾರಿಗೆ ವ್ಯವಸ್ಥೆ ರೂಪಿಸಬಹುದು ಎಂಬ ಸಲಹೆಗಳು ತಜ್ಞರಿಂದ ವ್ಯಕ್ತವಾಗಿವೆ.

ಸಾಮಾನ್ಯವಾಗಿ ಡಬಲ್‌ ಡೆಕ್ಕರ್‌ನಲ್ಲಿ ರಸ್ತೆ ಮತ್ತು ರೈಲು ಮಾರ್ಗ ನಿರ್ಮಾಣವಾಗುತ್ತದೆ. ಅದರಂತೆ ಮೆಟ್ರೋ ಎತ್ತರಿಸಿದ ಮಾರ್ಗದ ಮೇಲೆ ಹೈಸ್ಪೀಡ್‌ ರೈಲಿಗೆ ವಿಮಾನ ನಿಲ್ದಾಣ ಮಾರ್ಗದಲ್ಲಿ ಅವಕಾಶ ಇದೆ. ಒಂದರ ಮೇಲೊಂದು ನಿರ್ಮಿಸಲು ಸಾಧ್ಯವಾಗದಿದ್ದರೂ ನಾಲ್ಕು ಮಾರ್ಗಗಳನ್ನು ನಿರ್ಮಿಸಿ, ಸಾಮಾನ್ಯ ಮತ್ತು ಹೈಸ್ಪೀಡ್‌ ಎಂದು ಪ್ರತ್ಯೇಕ ಕಾರಿಡಾರ್‌ಗಳನ್ನಾಗಿ ಮಾಡಬಹುದು. ಇದಕ್ಕೆ ಹೆಚ್ಚುವರಿ ಭೂಮಿಯೂ ಬೇಕಾಗುವುದಿಲ್ಲ. ಸ್ಥಳೀಯ ಮತ್ತು ವಿಮಾನ ಪ್ರಯಾಣಿಕರಿಬ್ಬರಿಗೂ ಅನುಕೂಲ ಆಗಲಿದೆ. ದೀರ್ಘ‌ಕಾಲದ ಯೋಜನೆ ಯೂ ಆಗುತ್ತದೆ. ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದರೆ, ಇದೇ ಮಾರ್ಗವನ್ನು ಮೆಜೆಸ್ಟಿಕ್‌ನ ಕೆಂಪೇಗೌಡ ನಿಲ್ದಾಣದ ಇಂಟರ್‌ಚೇಂಜ್‌ಗೆ ಜೋಡಿಸಬಹುದು ಎಂದು ಮೆಟ್ರೋ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಎರಡು ಸಾಮಾನ್ಯ; ಎರಡು ಎಕ್ಸ್‌ಪ್ರೆಸ್‌ ಸೂಕ್ತ: ಹೈಸ್ಪೀಡ್‌ ರೈಲಿಗಿಂತ ಉದ್ದೇಶಿತ ಮೆಟ್ರೋ ಯೋಜನೆಯ ಪಥಗಳನ್ನು ದುಪ್ಪಟ್ಟು ಅಂದರೆ ನಾಲ್ಕು ಪಥಗಳನ್ನಾಗಿ ಪರಿವರ್ತಿಸಿ, ಅದಕ್ಕೆ ತಕ್ಕಂತೆ ವಿನ್ಯಾಸ ರೂಪಿಸಬೇಕು. ಅಲ್ಲಿ ಎರಡು ಪಥಗಳು ಎಕ್ಸ್‌ಪ್ರೆಸ್‌ ಮತ್ತೆರಡು ಸಾಮಾನ್ಯಕ್ಕೆ ಮೀಸಲಿಡಬೇಕು. ಮುಂಬೈನಲ್ಲಿ ಉಪನಗರ ರೈಲು ಮಾರ್ಗಗಳಲ್ಲಿ ಈ ವ್ಯವಸ್ಥೆ ಇದೆ. ದಕ್ಷಿಣ ಕೊರಿಯಾದಲ್ಲಿ ಮೆಟ್ರೋ ಮಾರ್ಗದಲ್ಲೇ ಈ ಸೌಲಭ್ಯ ಕಲ್ಪಿಸಲಾಗಿದೆ. ಹೀಗೆ ಮಾಡುವುದರಿಂದ ಎರಡೂ ವರ್ಗದ ಪ್ರಯಾಣಿಕರ ಬೇಡಿಕೆಗಳನ್ನು ಈಡೇರಿಸಿದಂತಾಗುತ್ತದೆ. ಬಿಎಂಆರ್‌ಸಿ ಈಗ ನಿರ್ಧರಿಸಿದಂತೆ ಕೇವಲ ಆರು ನಿಲ್ದಾಣಗಳನ್ನು ಸ್ಥಾಪಿಸಲು ಹೊರಟಿದೆ. ಆದರೆ, ಇದರಿಂದ ಸ್ಥಳೀಯ ಪ್ರಯಾಣಿಕರು ಸೌಲಭ್ಯ ವಂಚಿತರಾಗುವ ಸಾಧ್ಯತೆ ಹೆಚ್ಚಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಸಾರಿಗೆ ವ್ಯವಸ್ಥೆಗಳ ಎಂಜಿನಿಯರಿಂಗ್‌ ನ ಸಹ ಪ್ರಾಧ್ಯಾಪಕ ಡಾ.ಆಶಿಶ್‌ ವರ್ಮ ತಿಳಿಸುತ್ತಾರೆ.

ಎಲ್ಲರಿಗೂ ತಿಳಿದಿರುವಂತೆ ದೇಶದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವುದು ವಿಮಾನ ನಿಲ್ದಾಣವೆಂದರೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ. ವಾರ್ಷಿಕ ಶೇ. 20ರಿಂದ ಶೇ. 24ರಷ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಆ ಹಿನ್ನೆಲೆಯಲ್ಲಿ ಅಲ್ಲಿ ಮತ್ತೂಂದು ರನ್‌ವೇ, ಟರ್ಮಿನಲ್‌ ಬರುತ್ತಿದೆ. ಆಗ, ಪ್ರಯಾಣಿಕರ ದಟ್ಟಣೆ ಸಹಜವಾಗಿಯೇ ದುಪ್ಪಟ್ಟಾಗಲಿದೆ. ಆದ್ದರಿಂದ ಮುಂಬರುವ ವರ್ಷಗಳಲ್ಲಿ ಪ್ರಯಾಣಿಕರ ಸಂಖ್ಯೆ ಯಾವ ಮಟ್ಟದಲ್ಲಿ ಹೆಚ್ಚಲಿದೆ? ಈಗ ತಾವು ನಿರ್ಮಿಸುತ್ತಿರುವ ಮೆಟ್ರೋ ಯೋಜನೆಯು ಭವಿಷ್ಯದ ಪ್ರಯಾಣಿಕರ ದಟ್ಟಣೆಗೆ ಪರಿಹಾರ ಆಗಲಿದೆಯೇ? ಈ ಎಲ್ಲ ಅಂಶಗಳನ್ನೂ ನಿಗಮವು ಅಧ್ಯಯನ ಮಾಡಬೇಕು. ಅದನ್ನು ಆಧರಿಸಿ ಮರುವಿನ್ಯಾಸಗೊಳಿಸುವ ಅವಶ್ಯಕತೆ ಇದೆ ಎಂದೂ ಅವರು ಅಭಿಪ್ರಾಯಪಡುತ್ತಾರೆ.

Advertisement

ಬಿನ್ನಿಮಿಲ್‌ಗೆ ಸಂಪರ್ಕ ಕಲ್ಪಿಸಿ: ಭವಿಷ್ಯದ ದೃಷ್ಟಿಯಿಂದ ವಿಮಾನ ನಿಲ್ದಾಣಕ್ಕೆ ಎಕ್ಸ್‌ಪ್ರೆಸ್‌ ರೈಲಿನ ಅವಶ್ಯಕತೆ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಅದು ಹೆಬ್ಟಾಳಕ್ಕೆ ಸೀಮಿತವಾಗಬಾರದು. ನಗರದಿಂದ ಹೆಬ್ಟಾಳದ ಮೂಲಕ ಏರ್‌ಪೋರ್ಟ್‌ಗೆ ಸಂಪರ್ಕ ಕಲ್ಪಿಸುವಂತಿರಬೇಕು. ಅದರಲ್ಲೂ ಬಿನ್ನಿಮಿಲ್‌ ನಲ್ಲಿ ಸುಮಾರು 20 ಎಕರೆ ಜಾಗ ಲಭ್ಯವಿದ್ದು, ಅಲ್ಲಿಂದ ಮೆಟ್ರೋ ಸಂಪರ್ಕ ಕಲ್ಪಿಸಿದರೆ, ಪ್ರಯಾಣಿಕರಿಗೆ ಹೆಚ್ಚು ಅನುಕೂಲ ಆಗಲಿದೆ ಎಂದು ಮೆಟ್ರೋ ಮತ್ತು ಸಬ್‌ಅರ್ಬನ್‌ ರೈಲು ಪ್ರಯಾಣಿಕರ ಸಂಘದ ಅಧ್ಯಕ್ಷ ಪ್ರಕಾಶ್‌ ಮಂಡೂತ್‌ ಆಗ್ರಹಿಸುತ್ತಾರೆ.

ಪರಿಶೀಲಿಸಬಹುದು: ಎಂಡಿ: ಹೆಬ್ಟಾಳ- ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಡುವೆ ‘ಡಬಲ್‌ ಡೆಕರ್‌’ ನಿರ್ಮಾಣ ಮಾಡಲು ಅವಕಾಶಗಳಿವೆ. ಇದು ಕಾರ್ಯಸಾಧು ಮತ್ತು ಎಲ್ಲ ವರ್ಗದ ಪ್ರಯಾಣಿಕರಿಗೆ ಅನುಕೂಲಕರವೂ ಆಗಿದೆ. ಈ ನಿಟ್ಟಿನಲ್ಲಿ ಚಿಂತನೆ ನಡೆಸಬಹುದು ಎಂದು ಹೆಸರು ಹೇಳಲಿಚ್ಛಿಸದ ಬಿಎಂಆರ್‌ಸಿ ಉನ್ನತ ಅಧಿಕಾರಿಯೊಬ್ಬರು ಒಪ್ಪಿಕೊಳ್ಳುತ್ತಾರೆ.

‘ಡಬಲ್‌ ಡೆಕರ್‌’ ಎಂದರೆ ರೋಡ್‌ ಕಂ ರೈಲು. ಆದರೆ, ಮೆಟ್ರೋ ಕಂ ಹೈಸ್ಪೀಡ್‌ ಇರುವುದನ್ನು ನಾನು ಎಲ್ಲಿಯೂ ನೋಡಿಲ್ಲ. ಮುಂಬೈನಲ್ಲಿ ಎಕ್ಸ್‌ ಪ್ರಸ್‌ ಮತ್ತು ಸಾಮಾನ್ಯ ಎಂಬ ಎರಡು ಮಾರ್ಗಗಳಿರುವುದು ಗೊತ್ತು. ಅಷ್ಟಕ್ಕೂ ನಾವು ಈ ನಿಟ್ಟಿನಲ್ಲಿ ಈವರೆಗೆ ಯೋಚಿಸಿಲ್ಲ. ಮುಂದಿನ ದಿನಗಳಲ್ಲಿ ಇದನ್ನೂ ಪರಿಶೀಲಿಸಬಹುದು. ಆದರೆ, ಪ್ರಸ್ತುತ ನಮ್ಮ ಆದ್ಯತೆ ಈಗಾಗಲೇ ಇರುವ ಯೋಜನೆಗಳನ್ನು ತ್ವರಿತ ಗತಿಯಲ್ಲಿ ಮಾಡಿಮುಗಿಸುವುದಾಗಿದೆ ಎಂದು ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್  ‘ಉದಯವಾಣಿ’ಗೆ ಸಷ್ಟಪಡಿಸುತ್ತಾರೆ. 

ನಿತ್ಯ 95 ಸಾವಿರ ಜನರಿಂದ ಪ್ರಯಾಣ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್‌)ದಿಂದ ನಿತ್ಯ ಸರಾಸರಿ 650 ವಿಮಾನಗಳು ಕಾರ್ಯಾಚರಣೆ ನಡೆಸುತ್ತಿದ್ದು, 90-95 ಸಾವಿರ ಜನ ಪ್ರಯಾಣಿಸುತ್ತಾರೆ. ಪ್ರತಿ ವರ್ಷ ವಿಮಾನ ನಿಲ್ದಾಣವು ಪ್ರಯಾಣಿಕರ ಸಂಖ್ಯೆ ಮತ್ತು ವಿಮಾನಗಳ ಕಾರ್ಯಾಚರಣೆಯಲ್ಲಿ ಶೇ.20ರಿಂದ ಶೇ.24ರಷ್ಟು ಪ್ರಗತಿ ಸಾಧಿಸುತ್ತಿದೆ. ಕಳೆದ ತ್ತೈಮಾಸಿಕ (ಜುಲೈ-ಸೆಪ್ಟೆಂಬರ್‌)ದಲ್ಲಿ ಪ್ರಯಾಣಿಕರ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ, ಶೇ. 28.1ರಷ್ಟು ವೃದ್ಧಿಯಾಗಿದೆ. ಅಷ್ಟೇ ಅಲ್ಲ, ಬೆಂಗಳೂರು ದೇಶದ ಅತಿಹೆಚ್ಚು ದಟ್ಟಣೆವುಳ್ಳ ವಿಮಾನ ನಿಲ್ದಾಣಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಹಾಗೂ ಎರಡನೇ ಅತಿ ವೇಗವಾಗಿ ಪ್ರಗತಿ ಹೊಂದುತ್ತಿರುವ ನಿಲ್ದಾಣವಾಗಿದೆ. ಪ್ರಯಾಣಿಕರ 2022ರ ವೇಳೆಗೆ ಇಲ್ಲಿ ಹೊಸ ಟರ್ಮಿನಲ್‌ ಬರಲಿದೆ. 

ಹಿಂದಿನ ಮಾರ್ಗ
ನಾಗವಾರ, ಹೆಗಡೆ ನಗರ, ಜಕ್ಕೂರು, ಕೋಗಿಲು, ಚಿಕ್ಕಜಾಲ, ಟ್ರಂಪೆಟ್‌, ವೆಸ್ಟ್  ಕೆಎಐ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. 

ಪರಿಷ್ಕೃತ ಮಾರ್ಗ
ನಾಗವಾರ, ಹೆಬ್ಟಾಳ, ಜಕ್ಕೂರು, ಕೋಗಿಲು, ಚಿಕ್ಕಜಾಲ, ಟ್ರಂಪೆಟ್‌, ವೆಸ್ಟ್ ಕೆಎಐ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.

ಸ್ಥಿತಿಗತಿ 
ಪರಿಷ್ಕೃತ ವಿನ್ಯಾಸವು ಸಚಿವ ಸಂಪುಟದ ಅನುಮೋದನೆ ಪಡೆಯುವುದು ಬಾಕಿ ಇದೆ.

 ●ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next