Advertisement

ರಾಷ್ಟ್ರೀಯ ಟೋಲ್‌ ನೀತಿ ನಿಯಮ ಉಲ್ಲಂಘನೆಯಾದರೆ ಕ್ರಮ

06:35 AM Feb 21, 2018 | |

ವಿಧಾನಪರಿಷತ್ತು: ರಾಷ್ಟ್ರೀಯ ಟೋಲ್‌ ನೀತಿಯ ನಿಯಮಗಳು ಉಲ್ಲಂಘನೆಯಾಗಿದ್ದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಭರವಸೆ ನೀಡಿದರು.

Advertisement

ಜೆಡಿಎಸ್‌ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಪ್ರಶ್ನೆಗೆ ಉತ್ತರಿಸಿದ ಅವರು, ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ರಸ್ತೆ ಅಭಿವೃದ್ಧಿಪಡಿಸಿ ಟೋಲ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗೆಂದು ಗುತ್ತಿಗೆ ಸಂಸ್ಥೆಗಳು ಸ್ವೇಚ್ಛಾಚಾರದಿಂದ ವರ್ತಿಸಲು ಅವಕಾಶವಿಲ್ಲ. ರಾಷ್ಟ್ರೀಯ ಟೋಲ್‌ ನೀತಿ ನಿಯಮಾವಳಿ ಉಲ್ಲಂಘನೆಯಾದರೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

2017ರ ಫೆ.13ರಂದು ಸಭೆ ನಡೆಸಿ ಟೋಲ್‌ಗೇಟ್‌ಗಳಲ್ಲಿನ ಸಮಸ್ಯೆ ನಿವಾರಣೆಗೆ ಸೂಚನೆ ನೀಡಲಾಗಿತ್ತು. ವಾಹನ ದಟ್ಟಣೆ ತೀವ್ರವಾಗಿರುವ ಸಮಯದಲ್ಲಿ ತೊಂದರೆಯಾಗಬಹುದು. ಎಲ್ಲವೂ ಸರಿ ಇದೆ ಎಂದು ಹೇಳುವುದಿಲ್ಲ. ಆದರೆ ಅನಗತ್ಯ ಕಿರಿಕಿರಿ, ತೊಂದರೆಯಾದರೆ ಖಂಡಿತ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದಕ್ಕೂ ಮೊದಲು ಬಸವರಾಜ ಹೊರಟ್ಟಿ, ಟೋಲ್‌ಗೇಟ್‌ಗಳಲ್ಲಿ 2-3 ನಿಮಿಷವೂ ನಿಲ್ಲದ ಸ್ಥಿತಿ ಇರಬೇಕು. ಆದರೆ 20 ನಿಮಿಷ ನಿಲ್ಲುವಂತಾಗುತ್ತದೆ. ಜನಪ್ರತಿನಿಧಿಗಳಿಗೇ ಈ ಪರಿಸ್ಥಿತಿಯಾದರೆ ಆ್ಯಂಬುಲೆನ್ಸ್‌ ಹಾಗೂ ಸಾಮಾನ್ಯ ಜನರ ಕತೆ ಏನು ? ವಿಧಾನ ಪರಿಷತ್‌ ನೀಡಿರುವ ಗುರುತಿನ ಚೀಟಿಯನ್ನೂ ಪರಿಗಣಿಸದಿದ್ದರೆ ಏನು ಮಾಡುವುದು. ಪಾಸ್‌ಗಳು ದುರುಪಯೋಗವಾಗುತ್ತಿವೆ ಎಂದು ದೂರಿದರು.

ಇದಕ್ಕೆ ದನಿಗೂಡಿಸಿದ ಬಿಜೆಪಿಯ ಸೋಮಣ್ಣ ಬೇವಿನಮರದ, ನನ್ನ ಗುರುತಿನ ಚೀಟಿ ತೋರಿದರೂ ನಂಬದೆ ಒಂದೂವರೆ ಗಂಟೆ ತಡೆದಿದ್ದರು. ಸಚಿವ ವಿನಯ್‌ ಕುಲಕರ್ಣಿಯವರ ಬೆಂಬಲಿಗರು ಸ್ಥಳಕ್ಕೆ ಬಂದು ವಿಧಾನ ಪರಿಷತ್‌ ಸದಸ್ಯರೆಂದು ಹೇಳಿದರೂ ಸ್ಪಂದಿಸದಿದ್ದಾಗ ಟೋಲ್‌ನಲ್ಲಿ ಸಾಲುಗಟ್ಟಿ ನಿಂತ ವಾಹನದಾರರು ವಾಗ್ವಾದಕ್ಕಿಳಿದಾಗ ಮುಂದೆ ಹೋಗಲು ಅವಕಾಶ ನೀಡಿದರು. ಇದು ಸರಿಯೇ ಎಂದು ಪ್ರಶ್ನಿಸಿದರು. ಆಗ ಸಚಿವ ಮಹದೇವಪ್ಪ, ನಿರ್ದಿಷ್ಟ ಘಟನೆಗಳ ಬಗ್ಗೆ ಮಾಹಿತಿ ನೀಡಿದರೆ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.

Advertisement

1,685 ಕೋಟಿ ರೂ. ಬಿಲ್‌ ಬಾಕಿ
ವಿಧಾನ ಪರಿಷತ್ತು:
ಲೋಕೋಪಯೋಗಿ, ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯಲ್ಲಿ ಸದ್ಯ 1685 ಕೋಟಿ ರೂ. ಬಿಲ್‌ ಮೊತ್ತ ಬಾಕಿ ಇದೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದರು.

ಬಿಜೆಪಿಯ ಸುನಿಲ್‌ ಸುಬ್ರಮಣಿ ಪ್ರಶ್ನೆಗೆ ಉತ್ತರಿಸಿದ ಅವರು, 2018ರ ಜನವರಿ ಅಂತ್ಯಕ್ಕೆ 2,268.28 ಕೋಟಿ ರೂ. ಬಿಲ್‌ ಮೊತ್ತ ಬಾಕಿಯಿತ್ತು. ಫೆಬ್ರವರಿಯಲ್ಲಿ 582 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕೊಡುಗೆ ಜಿಲ್ಲೆಯಲ್ಲಿ 37.96 ಕೋಟಿ ರೂ. ಬಿಲ್‌ ಮೊತ್ತ ಬಾಕಿ ಇದೆ ಎಂದು ಮಾಹಿತಿ ನೀಡಿದರು.

2015-16 ಹಾಗೂ 2016-17ನೇ ಸಾಲಿನ ಕಾಮಗಾರಿಗಳ ಬಿಲ್‌ ಮೊತ್ತ ಬಾಕಿ ಇಲ್ಲ. ಆಯವ್ಯಯದಲ್ಲಿ ಕಾಯ್ದಿರಿಸಿದ ಅನುದಾನದಂತೆ ಬಿಲ್‌ ಪಾವತಿ ಮಾಡಲಾಗುತ್ತಿದ್ದು, ಜೇಷ್ಠತೆ ಪಾಲಿಸಲಾಗುತ್ತಿದೆ. ಕೊಡಗು ಜಿಲ್ಲೆಗೂ 150 ಕೋಟಿ ರೂ. ಮೊತ್ತದ ವಿಶೇಷ ಪ್ಯಾಕೇಜ್‌ ರೂಪಿಸಲಾಗಿದೆ ಎಂದು ಹೇಳಿದರು.

ದೇಶದಲ್ಲೇ 2ನೇ ಅತಿ ದೊಡ್ಡ ಸೇತುವೆ
ವಿಧಾನ ಪರಿಷತ್ತು:
ಸಿಗಂದೂರು- ತುಮರಿ ನಡುವೆ ಸುಮಾರು 600 ಕೋಟಿ ರೂ. ವೆಚ್ಚದಲ್ಲಿ ದೇಶದ 2ನೇ ಅತಿ ದೊಡ್ಡ ಸೇತುವೆ ನಿರ್ಮಾಣವಾಗಲಿದೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿದರು.

ಬಿಜೆಪಿ ಸದಸ್ಯೆ ತಾರಾ ಅನುರಾಧ ಪ್ರಶ್ನೆಗೆ ಉತ್ತರಿಸಿದ ಅವರು, ಸಿಗಂದೂರು- ತುಮರಿ ನಡುವೆ ಯಾವ ರೀತಿಯ ಸಂಪರ್ಕ ಕಲ್ಪಿಸಬೇಕು ಎಂಬ ಬಗ್ಗೆ ಯಾರಿಗೂ ಸ್ಪಷ್ಟತೆ ಇರಲಿಲ್ಲ. ನಮ್ಮ ಸರ್ಕಾರ ಸೇತುವೆ ನಿರ್ಮಾಣಕ್ಕೆ ನಿರ್ಧರಿಸಿದೆ. ಹಾಗೆಯೇ ತುಮಕೂರು- ಶಿವಮೊಗ್ಗ ರಸ್ತೆಯನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ನಡೆದಿದೆ ಎಂದು ತಿಳಿಸಿದರು.

ರಾಜ್ಯ ಹೆದ್ದಾರಿಗಳ ದುರಸ್ತಿಗೆ 2016-17ನೇ ಸಾಲಿನಲ್ಲಿ ಕೇಂದ್ರ ರಸ್ತೆ ನಿಧಿಯಿಂದ 783.50 ಕೋಟಿ ರೂ. ಮೊತ್ತದ ಕಾಮಗಾರಿ ಮಂಜೂರಾಗಿದೆ. ಕಾಮಗಾರಿಗಳ ಪ್ರಗತಿಗೆ ಅನುಗುಣವಾಗಿ ರಾಜ್ಯ ಸರ್ಕಾರ ವೆಚ್ಚ ಮಾಡಿದ ಮೊತ್ತಕ್ಕೆ ಪೂರಕವಾಗಿ ಕೇಂದ್ರ ಸರ್ಕಾರವು ಮರುಪಾವತಿ ಮಾಡುತ್ತದೆ. 2017-18ನೇ ಸಾಲಿನಲ್ಲಿ 230 ಕೋಟಿ ರೂ. ವೆಚ್ಚವಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next