Advertisement

ಕಡೆಕಾರು ಗ್ರಾಮದ ತೋಡಿನಲ್ಲಿ ಉಡುಪಿ ನಗರದ ಕೊಳಚೆ ನೀರು

01:18 PM May 31, 2022 | Team Udayavani |

ಮಲ್ಪೆ: ನಗರದ ಡ್ರೈನೇಜಿನ ನೀರು ಕಡೆಕಾರು ಗ್ರಾ.ಪಂ. ವ್ಯಾಪ್ತಿಯ ತೋಡಿನಲ್ಲಿ ಹರಿದು ಪರಿಸರದ ಈ ಪ್ರದೇಶಗಳು ಸಾಂಕ್ರಾಮಿಕ ರೋಗಗಳ ಮೂಲವಾಗಿ ಪರಿವರ್ತನೆಯಾಗಿದೆ. ಇದರಿಂದಾಗಿ ತೋಡಿನ ಪರಿಸರದ ಜನರು ದಿನದ 24 ಗಂಟೆ ಮೂಗು ಬಾಯಿ ಮುಚ್ಚಿಕೊಂಡೇ ಬದುಕಬೇಕಾದ ಪರಿಸ್ಥಿತಿ ಎದುರಾಗಿದೆ.

Advertisement

ರಾಷ್ಟ್ರೀಯ ಹೆದ್ದಾರಿ ಬಲಾಯಿಪಾದೆಯಲ್ಲಿರುವ ನಗರಸಭೆಯ ವೆಟ್‌ವೆಲ್‌ -1 ಮತ್ತು 2ರ ಸಮಸ್ಯೆ. ಕಳೆದ ಮೂರು ದಿನಗಳಿಂದ ನಗರದ ಡ್ರೈನೇಜ್‌ ನೀರನ್ನು ನೇರವಾಗಿ ಈ ವೆಟ್‌ವೆಲ್‌ ಮೂಲಕ ಕಡೆಕಾರು ಗ್ರಾಮದ ತೋಡಿಗೆ ಬಿಡಲಾಗುತ್ತಿದೆ. ಕಡೆಕಾರು ಗ್ರಾಮದ ತೋಡು ಪರಿಸರದ 300ಕ್ಕೂ ಅಧಿಕ ಮನೆಗಳ ಬಾವಿ ನೀರು ಹಾಳಾಗಿದೆ. ದಿನದಿಂದ ದಿನಕ್ಕೆ ಸಮಸ್ಯೆ ಉಲ್ಬಣಿಸುತ್ತಾ ಹೋದರೂ ಯಾವುದೇ ಪರಿಹಾರ ದೊರೆಯಲಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.

ನಗರದ ಕೊಳಚೆ ನೀರು ಕಿನ್ನಿಮೂಲ್ಕಿ ಬಲಾಯಿಪಾದೆ, ಕಡೆಕಾರ್‌, ಕಪ್ಪೆಟ್ಟುಬೈಲು, ಕಿದಿಯೂರುಬೈಲು, ಅಂಬಲಪಾಡಿ, ಮಜ್ಜಿಗೆ ಪಾದೆ, ಬಂಕೇರುಕಟ್ಟದ ಹರಿದು ಬಂದು ಕಲ್ಮಾಡಿ ಹೊಳೆಯನ್ನು ಸೇರುತ್ತದೆ. ತೋಡಿನ ನೀರು ಅಸಹ್ಯ ದುರ್ವಾಸನೆ ಬೀರುತ್ತಿದೆ. ಪರಿಸರದ ಸಾವಿರಾರು ಮನೆಗಳಿಗೆ ಕೊಳಚೆ ನೀರಿನಿಂದಾಗಿ ಅವರ ಬದುಕು ನರಕ ಸದೃಶ್ಯವಾಗಿದೆ.

ಕಳೆದ ಹಲವು ಸಮಯಗಳಿಂದ ಇಲ್ಲಿನ ಗ್ರಾಮಸ್ಥರು ಸಮಸ್ಯೆಯನ್ನು ಅನುಭವಿಸಿಕೊಂಡು ಬರುತ್ತಿರುವುದು ಸಾಮಾನ್ಯ. ಈ ಹಿಂದೆಯೂ ಕೂಡ ಇದೇ ಸಮಸ್ಯೆ ತಲೆದೋರಿತ್ತು. ಆ ಬಳಿಕ ಕೆಲವು ಕಾಲ ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಲ್ಪಿಸಲಾಗಿತ್ತು. ಇದೀಗ ಕೆಲವು ಸಮಯದಿಂದ ಮತ್ತೆ ಸಮಸ್ಯೆ ಉದ್ಭವಿಸಿದೆ. ಆದರೆ ಶಾಶ್ವತ ಪರಿಹಾರ ಇನ್ನೂ ಸಿಕ್ಕಿಲ್ಲ ಎನ್ನುತ್ತಾರೆ ಕಡೆಕಾರು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಸರಸ್ವತಿ ಅವರು.

ನಮ್ಮನ್ನು ಬದುಕಲು ಬಿಡಿ

Advertisement

ಮೊದಲೇ ಕುಡಿಯುವ ನೀರಿನ ಸಮಸ್ಯೆ ಇರುವ ಈ ಭಾಗದಲ್ಲಿ ಇದ್ದ ಕೆಲವೊಂದು ಶುದ್ಧ ನೀರಿನ ಬಾವಿಗಳಿಗೆ ಡ್ರೈನೇಜ್‌ನ ಕೊಳಚೆ ನೀರು ಸೇರಿ ಇದ್ದ ಬಾವಿ ನೀರನ್ನು ಉಪಯೋಗಿಸದಂತೆ ಮಾಡಿದೆ. ದುರ್ವಾಸನೆಯಿಂದಾಗಿ ನಾವು ಸರಿಯಾಗಿ ಉಸಿರಾಡುವಂತಿಲ್ಲ, ಊಟ ಮಾಡುವಂತಿಲ್ಲ. ಸೊಳ್ಳೆ ಕಾಟ ತಡೆಯೋಕಾಗಲ್ಲ. ನಮ್ಮನ್ನು ಬದುಕಲು ಬಿಡಿ, ಇಲ್ಲವೆ ಈ ತೋಡಿಗೆ ವಿಷ ಹಾಕಿ. -ಶಾರದಾ ಅಡಪ, ಸ್ಥಳೀಯರು

ಉಗ್ರ ಪ್ರತಿಭಟನೆ

ಇದೀಗ ತೋಡಿನಲ್ಲಿ ಕೊಳಚೆ ನೀರು ಹರಿಯುತ್ತಿದ್ದು ಕೆಟ್ಟ ವಾಸನೆಯಿಂದ ಮನೆ ಹೊರಗೆ ಬರುವ ಹಾಗಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ನಾಗರಿಕರು ತೊಂದರೆಯನ್ನು ಅನುಭವಿಸುವಂತಾಗಿದೆ. ಸ್ನಾನ ಮಾಡುವಂತಿಲ್ಲ, ಬಟ್ಟೆ ಒಗೆಯುವಂತಿಲ್ಲ, ಸಾರ್ವಜನಿಕ ವಾತಾವರಣವನ್ನು ಕೆಡಿಸುತ್ತಿರುವ ಈ ಸಮಸ್ಯೆಗೆ ಅತೀ ಶೀಘ್ರವಾಗಿ ನಗರಸಭೆ ಶಾಶ್ವತ ಪರಿಹಾರ ಕೈಗೊಳ್ಳುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು, ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆಯನ್ನು ನಡೆಸುವುದೆಂದು ನಿರ್ಧರಿಸಿದ್ದೇವೆ. – ನವೀನ್‌ ಶೆಟ್ಟಿ, ಉಪಾಧ್ಯಕ್ಷರು, ಕಡೆಕಾರು ಗ್ರಾ.ಪಂ.

ದುರಸ್ತಿ ಕಾರ್ಯ

ರಾಷ್ಟ್ರೀಯ ಹೆದ್ದಾರಿ ವೆಟ್‌ವೆಲ್‌ನ ಭಾಗದಲ್ಲಿ ಸಮಸ್ಯೆ ಉಂಟಾಗಿರುವ ಬಗ್ಗೆ ಈಗಾಗಲೇ ನನ್ನ ಗಮನಕ್ಕೆ ಬಂದಿದೆ. ಇಲ್ಲಿನ ಪಂಪ್‌ ಹಾಳಾಗಿದ್ದು, ತತ್‌ ಕ್ಷಣ ದುರಸ್ತಿಗೊಳಿಸುವ ಕಾರ್ಯ ನಡೆಸಲಾಗುವುದು. -ಉದಯ ಶೆಟ್ಟಿ, ಪೌರಾಯುಕ್ತರು, ಉಡುಪಿ ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next