ಮಹಾನಗರ: ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಪಾಯ ಆಹ್ವಾನಿಸುವ ರೀತಿ ಅಳವಡಿಸಲಾಗಿರುವ ವಿದ್ಯುತ್ ಸಂಪರ್ಕ-ಸರಬರಾಜಿನ ಟ್ರಾನ್ಸ್‌ಫಾರ್ಮ ರ್‌ಗಳು, ತುಂಡಾಗಿ ಹೋಗಿರುವ ವಯರ್‌ಗಳು, ಎಲ್‌ಟಿಡಿ ಬಾಕ್ಸ್‌ಗಳು, ಸ್ವಿಚ್ ಬೋರ್ಡ್‌ಗಳನ್ನು ರಿಪೇರಿ ಮಾಡುವ ದಿಕ್ಕಿನಲ್ಲಿ ಮೆಸ್ಕಾಂ (ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ) ಮತ್ತು ಮಹಾನಗರ ಪಾಲಿಕೆ ಎರಡನೇ ಹಂತದಲ್ಲಿ ಕಾರ್ಯಪ್ರವೃತ್ತವಾಗಿವೆ.
ನಗರ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯುತ್ ಸಂಪರ್ಕ ಹಾಗೂ ಸರಬರಾಜು ವ್ಯವಸ್ಥೆ ಸಮರ್ಪಕವಾಗಿ ನಿರ್ವಹಣೆ ಆಗದಿರುವ ಕಾರಣ ಸಾರ್ವಜನಿಕರಿಗೆ ಎದುರಾಗಿರುವ ಅಪಾಯದ ಕುರಿತಂತೆ “ಸುದಿನ’ವು ಕಳೆದ ಕೆಲ ದಿನಗಳ ಹಿಂದೆ “ವಿದ್ಯುತ್-ಆಪತ್ತು ಇರಲಿ ಎಚ್ಚರ’ ಎಂಬ ಶೀರ್ಷಿಕೆಯಡಿಯಲ್ಲಿ ಫೋಟೋಗಳನ್ನು ಪ್ರಕಟಿಸಿತ್ತು. ಎಚ್ಚೆತ್ತುಕೊಂಡ ಸಂಬಂಧಪಟ್ಟ ಇಲಾಖೆ ಕೆಲವು ಕಡೆಗಳಲ್ಲಿ ತತ್‌ಕ್ಷಣದ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ನಗರದ ಮೆಸ್ಕಾಂ ಕಚೇರಿ ಮುಂಭಾಗದ ಡಿವೈಡರ್‌ನಲ್ಲಿ ಬೀದಿದೀಪದ ಎಲ್‌ಟಿಡಿ ಬಾಕ್ಸ್ ತೆರೆದಿಟ್ಟು ಸಾರ್ವಜನಿಕರಿಗೆ ಅಪಾಯ ಸೂಚಿಸುತ್ತಿತ್ತು. ಈ ಬಗ್ಗೆ “ಸುದಿನ’ ದಲ್ಲಿ ಫೋಟೋ ಪ್ರಕಟಿಸಲಾಗಿದ್ದು, ಈಗ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡು ತತ್‌ಕ್ಷಣಕ್ಕೆ ಬಾಕ್ಸ್ ಮುಚ್ಚುವ ಕೆಲಸಕ್ಕೆ ಮುಂದಾಗಿದೆ. ಅದೇ ರೀತಿ ಹಂಪನಕಟ್ಟೆಯ ಫುಟ್‌ಪಾತ್‌ನಲ್ಲಿಯೂ ವಿದ್ಯುತ್ ಬಾಕ್ಸ್ ಬಾಯ್ದೆರೆದಿತ್ತು. ಇದಕ್ಕೂ ಸಂಬಂಧಪಟ್ಟ ಇಲಾಖೆ ಸ್ಪಂದಿಸಿ ಮುಚ್ಚಳ ಹಾಕಲಾಗಿದೆ. ಆದರೂ, ಇನ್ನೂ ಕೆಲವು ಕಡೆಗಳಲ್ಲಿ, ಒಳರಸ್ತೆಗಳಲ್ಲಿ ವಿದ್ಯುತ್ ಬಾಕ್ಸ್ ಬಾಯ್ದೆರೆದಿದ್ದು, ಆ ಬಗ್ಗೆಯೂ ಗಮನ ನೀಡಬೇಕಿದೆ.
ಮೆಸ್ಕಾಂ, ಮಹಾನಗರ ಪಾಲಿಕೆ ಅಧಿಕಾರಿಗಳು ಈಗಾಗಲೇ ಸಭೆ ನಡೆಸಿ, ನಗರದಲ್ಲಿ ವಿದ್ಯುತ್‌ನಿಂದ ಶಾಕ್ ಹೊಡೆಯಬಹುದಾದ ಅಪಾಯಕಾರಿ ಸ್ಥಳಗಳಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳುವ ಮೂಲಕ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ. “ಸುದಿನ’ವು ಕಳೆದ ವರ್ಷ “ವಿದ್ಯುತ್-ಆಪತ್ತು ಇರಲಿ ಎಚ್ಚರ’ ಎಂಬ ಅಭಿಯಾನವನ್ನು ಕೈಗೊಂಡಿದ್ದು, ಆ ವೇಳೆ ಸಂಬಂಧಪಟ್ಟ ಇಲಾಖೆಯು ನಗರದಲ್ಲಿರುವ ಟ್ರಾನ್ಸ್‌ಫಾರ್ಮರ್‌ಗಳಲ್ಲಿ ಬಾಯ್ದೆರೆದುಕೊಂಡಿರುವ ಎಲ್‌ಟಿಡಿ ಬಾಕ್ಸ್‌ಗಳನ್ನು ಗುರುತಿಸಿ, ಮಂಗಳೂರು ನಗರ ಮತ್ತು ಉಳ್ಳಾಲ ಪ್ರದೇಶಗಳಲ್ಲಿ ಒಟ್ಟಾರೆ 270 ಹೊಸ ಎಲ್‌ಟಿಡಿ ಬಾಕ್ಸ್ ಗಳನ್ನು ಅಳವಡಿಸಿತ್ತು. ನಗರದ ಇನ್ನೂ ಎಲ್ಲೆಲ್ಲಿ ಕೆಟ್ಟು ಹೋಗಿರುವ ಬಾಕ್ಸ್‌ಗಳಿವೆ ಸೇರಿದಂತೆ ವಿದ್ಯುತ್ ಶಾಕಿಂಗ್ ಸ್ಪಾಟ್‌ಗಳ ಬಗ್ಗೆ ಇಲಾಖೆ ಮಾಹಿತಿ ಸಂಗ್ರಹಿಸುವ ಕೆಲಸ ಮಾಡುತ್ತಿದೆ.
ಕ್ರಮ ಕೈಗೊಳ್ಳುತ್ತೇವೆ
ನಗರದಲ್ಲಿ ಬಾಯ್ದೆರೆದ ವಿದ್ಯುತ್ ಬಾಕ್ಸ್‌ಗೆ ಈಗಾಗಲೇ ಹೊಸ ಬಾಕ್ಸ್‌ಗಳನ್ನು ಅಳವಡಿಸಲಾಗಿದೆ. ನಗರಗಳಲ್ಲಿನ ಮತ್ತು ಕೆಲವೆಡೆ ಬಾಯ್ದೆರೆದಿರುವ ಬಾಕ್ಸ್‌ಗಳಿದ್ದರೆ ಆ ಬಗ್ಗೆ ಲೈನ್‌ಮ್ಯಾನ್‌ಗಳು ಸೆಕ್ಷನ್ ಆಫೀಸರ್, ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ತಿಳಿಸಲು ಸೂಚಿಸಲಾಗಿದೆ. ಕೂಡಲೇ ಕ್ರಮ ಕೈಗೊಳ್ಳುತ್ತೇವೆ.
- ಕೃಷ್ಣರಾಜ್, ಮೆಸ್ಕಾಂ ಕಾರ್ಯಕಾರಿ ಅಭಿಯಂತರ