Advertisement
ಗ್ರಾಮಾಂತರ ಪ್ರದೇಶದ ವಿದ್ಯುತ್ ಬಳಕೆದಾರ ಗ್ರಾಹಕರು ನಗರ ಪ್ರದೇಶಕ್ಕೆ ತೆರಳಿ ಸರತಿ ಸಾಲಿನಲ್ಲಿ ಗಂಟೆಗಟ್ಟಲೇ ನಿಂತು ಬಿಲ್ ಪಾವತಿ ಮಾಡುತ್ತಿದ್ದರು. ಇದರಿಂದ ಗ್ರಾಹಕರಿಗೆ ಮುಕ್ತಿ ನೀಡುವ ಕಾರಣದಿಂದ ನಗರದ ಪ್ರದೇಶದ ವಿದ್ಯುತ್ ಗ್ರಾಹಕರಿಗೆ ಮಾತ್ರ ಆನ್‌ಲೈನ್ ಬಿಲ್ ಪಾವತಿ ಸೌಲಭ್ಯ ನೀಡಿದ್ದ ಮೆಸ್ಕಾಂ ಇದೀಗ ಗ್ರಾಮೀಣ ಪ್ರದೇಶದ ಗ್ರಾಹಕರಿಗೂ ಈ ಸೌಲಭ್ಯವನ್ನು ವಿಸ್ತರಿಸಿವೆ. ಇದರೊಂದಿಗೆ ಮೆಸ್ಕಾಂ ವ್ಯಾಪ್ತಿಯ ಉಡುಪಿ, ದ.ಕ., ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಸುಮಾರು 16 ಲಕ್ಷಕ್ಕೂ ಅಧಿಕ ಗ್ರಾಹಕರು ಈ ಸೌಲಭ್ಯವನ್ನು ಪಡೆಯಲು ಸಾಧ್ಯವಾಗಿದೆ. ಗ್ರಾಹಕರು ಮನೆಯಲ್ಲಿಯೇ ಕುಳಿತು ಆ್ಯಂಡ್ರಾಯ್ಡ ಪೋನ್ ಮೂಲಕ ಬಿಲ್ ಪಾವತಿ ಮಾಡುವ ಸರಳ ವಿಧಾನವನ್ನು ಮೆಸ್ಕಾಂ ಪರಿಚಯಿಸಿದೆ.
www. mesco.in ವೆಬ್‌ಸೈಟ್‌ಗೆ ಹೋದಾಗ ಆಯ್ಕೆ ಪರದೆಯು ತೆರೆದುಕೊಳ್ಳುತ್ತದೆ. ಹಾಗೆಯೇ ಆನ್‌ಲೈನ್ ಪೇಮೆಂಟ್ ಸಿಸ್ಟಮ್ ಐಕಾನ್ ಕಾಣುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಆರ್‌ಎಪಿಡಿಆರ್ ಪಟ್ಟಣ ಹಾಗೂ ಗ್ರಾಮಾಂತರ ಎಂಬ ಆಯ್ಕೆ ತೆರೆದುಕೊಳ್ಳುತ್ತದೆ. ಗ್ರಾಮೀಣ ಭಾಗದ ಗ್ರಾಹಕರು ಗ್ರಾಮಾಂತರ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ಅನಂತರ ವಿದ್ಯುತ್ ಗ್ರಾಹಕರ ಆರ್‌ಆರ್ ಸಂಖ್ಯೆ ನಮೂದಿಸಿ ತ್ವರಿತವಾಗಿ ಬಿಲ್ ಪಾವತಿ ಮಾಡಬಹುದು. ಪೇಟಿಎಂ ಮೂಲಕವೂ ಬಿಲ್ ಪಾವತಿ ಮಾಡುವ ಅವಕಾಶವಿದ್ದು, ಗ್ರಾಹಕರು ಮೊಬೈಲ್ ಸಂಖ್ಯೆ ದಾಖಲು ಮಾಡಿದ್ದರೆ, ಪಾವತಿಸಿದ ಕೂಡಲೇ ಎಸ್‌ಎಂಸ್ ಸಂದೇಶ ನೀಡುವ ವ್ಯವಸ್ಥೆಯೂ ಇದೆ. ನಗರ ಪ್ರದೇಶದವರು ಭಾರತ್ ಬಿಲ್ ಪೇ ಸರ್ವಿಸ್ (ಬಿಬಿಪಿಎಸ್) ಮೂಲಕವೂ ಬಿಲ್ ಪಾವತಿಸಬಹುದು. ಆದರೆ ಈ ಸೌಲಭ್ಯವು ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಸದ್ಯಕ್ಕೆ ಸಿಗುತ್ತಿಲ್ಲ. ಮೇ 16ರಿಂದ ಆನ್‌ಲೈನ್ ಪಾವತಿ ವ್ಯವಸ್ಥೆಯನ್ನು ಅಧಿಕೃತವಾಗಿ ಆರಂಭಿಸಲಾಗಿದೆ. ಮೆಸ್ಕಾಂನ 24 ಲಕ್ಷ ಗ್ರಾಹಕರ ಪೈಕಿ 16 ಲಕ್ಷಕ್ಕೂ ಅಧಿಕ ಗ್ರಾಮೀಣ ಭಾಗದ ಗ್ರಾಹಕರು ಈ ಸೌಲಭ್ಯ ಪಡೆಯಲಿದ್ದಾರೆ.
Related Articles
ಬಿಲ್ ಪಾವತಿಗಾಗಿ ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಸಮಯ ವ್ಯರ್ಥ ಮಾಡಬೇಕಾಗಿಲ್ಲ. ಮನೆಯಲ್ಲೇ ಮೊಬೈಲ್ ಬಳಕೆ ಮಾಡಿಕೊಂಡು ಆನ್‌ಲೈನ್ ವ್ಯವಸ್ಥೆಯಿಂದ ಬಿಲ್ ಪಾವತಿಸಬಹುದು.
– ಸ್ನೇಹಲ್ ಆರ್., ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ
Advertisement