Advertisement

Mescom ಅನಿಯಮಿತ ವಿದ್ಯುತ್‌ ಕಡಿತದಿಂದ ಉದ್ದಿಮೆಗೆ ನಷ್ಟ

12:50 AM Jan 17, 2024 | Team Udayavani |

ಮಂಗಳೂರು: ಜಿಲ್ಲೆಯಲ್ಲಿ ಪದೇ ಪದೇ ಆಗುತ್ತಿರುವ ವಿದ್ಯುತ್‌ ಕಡಿತ, ವೋಲ್ಟೇಜ್ ಏರಿಳಿತಗಳಿಂದ ವಾಣಿಜ್ಯ, ಕೈಗಾರಿಕೆ ಕ್ಷೇತ್ರಕ್ಕೆ ನಷ್ಟ ಉಂಟಾಗುತ್ತಿದೆ. ಮೆಸ್ಕಾಂ ತನ್ನ ಸೇವೆಗಳನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಬೇಕಾದ ಅಗತ್ಯವಿದೆ. ವಿದ್ಯುತ್‌ ಕಡಿತದ ಮಾಹಿತಿಯನ್ನು ಸಮರ್ಪಕವಾಗಿ ಪೂರೈಸಬೇಕಿದೆ ಎಂಬ ಅಹವಾಲು, ಸಲಹೆ ವಾಣಿಜ್ಯ ಬಳಕೆದಾರರ ಸಮೂಹದಿಂದ ಕೇಳಿಬಂತು.

Advertisement

ಮಂಗಳವಾರ ನಗರದಲ್ಲಿ ಮೆಸ್ಕಾಂ ಹಮ್ಮಿಕೊಂಡ ಎಚ್‌ಟಿ (ಹೈ ಟೆನ್ಶನ್‌) ಬಳಕೆದಾರರ ಸಭೆಯಲ್ಲಿ ನೂರಾರು ಮಂದಿ ಪಾಲ್ಗೊಂಡು ವಿದ್ಯುತ್‌ ಕುರಿತ ಸಮಸ್ಯೆಗಳನ್ನು ಮುಂದಿಟ್ಟರು.

ಕ್ರೆಡಾೖ ಮಂಗಳೂರು ಅಧ್ಯಕ್ಷ ವಿನೋದ್‌ ಪಿಂಟೊ ಮಾತನಾಡಿ, ನಗರದ ಅನೇಕ ಅಪಾರ್ಟ್‌ಮೆಂಟ್‌ಗಳಲ್ಲಿ ಎಚ್‌ಟಿಯಿಂದ ಎಲ್‌ಟಿಗೆ ಪರಿವರ್ತನೆಗೆ ಅರ್ಹತೆ ಇದ್ದರೂ ಅದು ಆಗುತ್ತಿಲ್ಲ, ಆದಷ್ಟು ಬೇಗನೆ ಮಾಡಿಕೊಡಬೇಕು ಎಂದರು. ಐಟಿ ಕ್ಷೇತ್ರದಲ್ಲಿ ಮುಂದಿನ ಕೆಲವು ವರ್ಷಗಳಲ್ಲಿ ಗಣನೀಯ ಬೆಳವಣಿಗೆಯಾಗಲಿದ್ದು, ಈಗಿರುವ 25 ಸಾವಿರ ಮಂದಿಯಿಂದ 50 ಸಾವಿರಕ್ಕೆ ಏರಿಕೆಯಾಲಿದೆ. ಇದನ್ನು ಮೆಸ್ಕಾಂ ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ಆಗ್ರಹಿಸಿದರು.

ಗ್ರಾಹಕರ ಅಹವಾಲು
ಜಿಲ್ಲೆಯ ವಿವಿಧ ಕೈಗಾರಿಕೆಗಳ ಪ್ರತಿನಿಧಿಗಳು ವಿದ್ಯುತ್‌ ಸಮಸ್ಯೆಯಿಂದಾಗಿ ತಮ್ಮ ಉದ್ದಿಮೆಗಳು ಅನುಭವಿಸುತ್ತಿರುವ ತೊಂದರೆಗಳನ್ನು ವಿವರಿಸಿದರು. ವಿಭಾಗವಾರು ವಾಟ್ಸಾಪ್‌ ಗ್ರೂಪ್‌ಗ್ಳನ್ನು ರಚಿಸಿ ವಿದ್ಯುತ್‌ ವ್ಯತ್ಯಯದ ಮಾಹಿತಿ ನೀಡಬೇಕು, ಎಚ್‌ಟಿಯಿಂದ ಎಲ್‌ಟಿ ಪರಿವರ್ತನೆಯನ್ನು ತ್ವರಿತಗೊಳಿಸಬೇಕು, ವಾಣಿಜ್ಯ ಕಟ್ಟಡಗಳಿಗೆ ಬಿಲ್‌ ಆದಷ್ಟೂ ಮೊದಲ ವಾರ ಬೇಗನೆ ಕೊಡಬೇಕು, ಹಾಗೂ ಪಾವತಿ ದಿನಾಂಕ ವಿಸ್ತರಣೆ ಮಾಡಬೇಕು ಇತ್ಯಾದಿ ಬೇಡಿಕೆಗಳು ಕೇಳಿಬಂದವು.

ಮೆಸ್ಕಾಂ ನಿರ್ದೇಶಕ (ತಾಂತ್ರಿಕ) ಎಚ್‌.ಜಿ. ರಮೇಶ್‌, ಅಧೀಕ್ಷಕ ಇಂಜಿನಿಯರ್‌ ಕೃಷ್ಣರಾಜು, ಮುಖ್ಯ ಇಂಜಿನಿಯರ್‌ ಪುಷ್ಪಾ, ಅಪರ ಮುಖ್ಯ ಪರಿವೀಕ್ಷಕ ಸುದೇಶ್‌ ಮಾರ್ಟಿಸ್‌, ಲೆಕ್ಕ ಪರಿಶೋಧಕ ಹರಿಶ್ಚಂದ್ರ, ಮುಖ್ಯ ಆರ್ಥಿಕ ಅಧಿಕಾರಿ ಮೌರಿಸ್‌ ಡಿ’ಸೋಜಾ ಉಪಸ್ಥಿತರಿದ್ದರು.

Advertisement

ಕಾವೂರು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಸಂತೋಷ್‌ ನಾಯಕ್‌ ಸ್ವಾಗತಿಸಿದರು. ಲಾವಣ್ಯ ಕಾರ್ಯಕ್ರಮ ನಿರೂಪಿಸಿದರು. ಲೋಹಿತ್‌ ಬಿಎಸ್‌ ವಂದಿಸಿದರು.

ಶೀಘ್ರ ಸ್ಪಂದಿಸುವೆ: ಎಂಡಿ
ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ ಮಾತನಾಡಿ, ದೂರುಗಳನ್ನು ಬಗೆಹರಿಸುವುದಕ್ಕೆ ಸ್ಥಳೀಯವಾಗಿ ಆಯಾ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿಗೆ ಸೂಚನೆ ನೀಡಿದರಲ್ಲದೆ, ಮುಂದೆ ತಾವೇ ಖುದ್ದಾಗಿ ಇವೆಲ್ಲವೂ ಪರಿಹಾರವಾಗಿರುವುದನ್ನು ದೃಢಪಡಿಸುವುದಾಗಿ ತಿಳಿಸಿದರು.

ವಿದ್ಯುತ್‌ ಪರಿವೀಕ್ಷಣೆಯಿಂದ ವೇತನ!
ವಿದ್ಯುತ್‌ ಪರಿವೀಕ್ಷಣೆ ವರ್ಷಕ್ಕೊಮ್ಮೆ ಮಾಡುವುದು ಬೇಡ ಎಂಬ ಗ್ರಾಹಕರೊಬ್ಬರ ಒತ್ತಾಯಕ್ಕೆ ವಿದ್ಯುತ್‌ ಪರಿವೀಕ್ಷಕರು ಉತ್ತರಿಸಿ, ಇದು ಸರಕಾರದ ಅಧಿಸೂಚನೆ, ಅದರಂತೆ ಮಾಡಲಾಗುತ್ತಿದೆ. ಅಲ್ಲದೆ ಇದು ನಾನ್‌-ಪ್ಲಾನ್‌ ಕ್ಷೇತ್ರವಾದ್ದರಿಂದ ನಮ್ಮ ವೇತನವೂ ಇದರಿಂದಲೇ ಆಗಬೇಕು ಎಂದಾಗ ಸಭೆಯಲ್ಲಿ ನಗು ಕೇಳಿಬಂತು. ನಿಮ್ಮ ವೇತನಕ್ಕೆ ನಮಗೆ ಯಾಕೆ ವರ್ಷಕ್ಕೊಮ್ಮೆ ಪರಿಶೀಲನೆ ಎಂಬ ಪ್ರಶ್ನೆಗಳೂ ಬಂದವು. ಇದಕ್ಕೆ ಉತ್ತರಿಸಿದ ಮೆಸ್ಕಾಂ ಎಂಡಿ, ಇದು ಸರಕಾರದ ನೀತಿಯಾದ್ದರಿಂದ ಅದನ್ನು ಬದಲಾಯಿಸಬೇಕಾದರೆ ಸರಕಾರಕ್ಕೇ ಮನವಿ ಸಲ್ಲಿಸಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next