Advertisement
ಪ್ರತೀ ತಿಂಗಳು ವಿದ್ಯುತ್ ಬಿಲ್ ಬರುತ್ತದೆ. ಅದರಂತೆ ನಿರ್ದಿಷ್ಟ ದಿನಾಂಕದೊಳಗೆ ಬಿಲ್ ಪಾವತಿ ಮಾಡುತ್ತಿದ್ದೇವೆ. ಆದರೂ ಮೆಸ್ಕಾಂ ಹೊಸದಾಗಿ ನೋಟಿಸ್ ನೀಡಿ, ಹಿಂಬಾಕಿ ಪಾವತಿಸುವಂತೆ ಗಡುವು ನೀಡಿರುವುದು ಆತಂಕ ಸೃಷ್ಟಿಸಿದೆ. ಪ್ರತೀ ತಿಂಗಳು ಸರಿಯಾದ ಸಮಯಕ್ಕೆ ವಿದ್ಯುತ್ ಬಿಲ್ ನೀಡಿ ಹೋಗುತ್ತಾರೆ. ಅದೇ ತಿಂಗಳು ಪಾವತಿಸುತ್ತೇವೆ. ಪಾವತಿ ಎರಡು ತಿಂಗಳು ವಿಳಂಬವಾದರೂ ವಿದ್ಯುತ್ ಕಡಿತ ಮಾಡುತ್ತಾರೆ. ಪಾವತಿಸುವ ವರೆಗೂ ಮರಳಿ ಸಂಪರ್ಕ ನೀಡುವುದಿಲ್ಲ. ಮಳೆ, ಗಾಳಿ ಇತ್ಯಾದಿ ಸಂದರ್ಭದಲ್ಲಿ ಅನಿರ್ದಿಷ್ಟಾವಧಿ ವಿದ್ಯುತ್ ಇಲ್ಲದಿದ್ದರೂ ಬಿಲ್ ಮಾತ್ರ ಸರಾಸರಿಯಲ್ಲೇ ಬರುತ್ತದೆ. ಬಿಲ್ ಪಾವತಿಸದ ಅನಂತರದಲ್ಲೂ ಇಂತಹ ನೋಟಿಸ್ ನೀಡಿ, ಹೆಚ್ಚುವರಿ ಹಣ ವಸೂಲಿಗೆ ಮುಂದಾಗಿರುವುದು ಸರಿಯಲ್ಲ ಎಂದು ಗ್ರಾಹಕರು ಅಳಲು ತೋಡಿಕೊಂಡಿದ್ದಾರೆ.
3 ತಿಂಗಳಿಂದ ಮೀಟರ್ ದೋಷ ಇದೆ ಎಂದಾದರೆ ಬಿಲ್ ನೀಡಲು ಬರುತ್ತಿದ್ದ ಮೆಸ್ಕಾಂ ಸಿಬಂದಿ ಈ ಬಗ್ಗೆ ಮಾಹಿತಿ ನೀಡಿಲ್ಲ ಏಕೆ? ಮೀಟರ್ ಸರಿಯಾಗಿಲ್ಲ. ಬದಲಾವಣೆ ಮಾಡಬೇಕು ಅಥವಾ ವಿದ್ಯುತ್ ಯುನಿಟ್ ಬಳಿಕೆಯನ್ನು ಸರಿಯಾಗಿ ತೋರಿಸುತ್ತಿಲ್ಲ ಎಂಬಿತ್ಯಾದಿ ಯಾವುದೇ ಸೂಚನೆಯನ್ನು ನೀಡದೇ ಏಕಾಏಕಿ ಬಾಕಿ ಹಣ ಪಾವತಿಸಬೇಕು ಎಂದು ಗಡುವು ನೀಡಿರುವುದು ಸರಿಯಲ್ಲ ಎಂದು ಗ್ರಾಹಕರು ತಿಳಿಸಿದ್ದಾರೆ.
Related Articles
ಅನೇಕ ಮನೆಗಳಲ್ಲಿ ಮೀಟರ್ ದೋಷ ಪೂರಿತವಾಗಿ ಹೊಸ ಮೀಟರ್ ಅಳವಡಿಸಲು ಈಗಾಗಲೇ ಇಲಾಖೆಗೆ ಪತ್ರ ಬರೆದಿದ್ದೇವೆ. ಇನ್ನೂ ಮೀಟರ್ ಪೂರೈಕೆಯಾಗಿಲ್ಲ. ಸಾವಿರಕ್ಕೂ ಅಧಿಕ ಮೀಟರ್ ಬರಬೇಕಿದೆ. ಹೀಗಾಗಿ ಕಳೆದ 3 ತಿಂಗಳಲ್ಲಿ ಮೀಟರ್ ಮಾಪನ ದೋಷದಿಂದ ಕೆಲವರು ಹೆಚ್ಚುವರಿಯಾಗಿ ಬಿಲ್ ಪಾವತಿಸಬೇಕಾಗಿದೆ. ಈ ಬಗ್ಗೆ ಪತ್ರವನ್ನು ಕಳುಹಿಸಿದ್ದೇವೆ. ಅವರು ಬಳಕೆ ಮಾಡಿರುವ ಒಟ್ಟಾರೆ ವಿದ್ಯುತ್‌ನ ಯುನಿಟ್ ಆಧಾರದಲ್ಲಿ ಸರಾಸರಿ ತೆಗೆದು ಪರಿಷ್ಕರಿಸಿ, ಹಿಂಬಾಕಿ ಪಾವತಿಗೆ ತಿಳಿಸಿದ್ದೇವೆ. ಹೊಸ ಮೀಟರ್ ಬರುವವರೆಗೂ ಈ ರೀತಿಯ ಸಮಸ್ಯೆ ಎದುರಾಗಬಹುದು. ಎಲ್ಲರಿಗೂ ಹೀಗೆ ಆಗುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
Advertisement
ಇದನ್ನೂ ಓದಿ : ಒಂದು ಸಾವಿರ ರೂ. ದರದಲ್ಲಿ ಉತ್ತಮ ಇಯರ್ ಬಡ್: ಯಾವುದಿದು?