ಕಾರ್ಕಳ: ಹೊಸ ಗುತ್ತಿಗೆದಾರ ಹಾಗೂ ಹಳೆ ಗುತ್ತಿಗೆದಾರರ ನಡುವಿನ ವೈವನಸ್ಸಿನಿಂದಾಗಿ ವಿದ್ಯುತ್ ಬಿಲ್ ಪಾವತಿ ಕೇಂದ್ರ ಸಂಪೂರ್ಣ ಸ್ಥಗಿತಗೊಂಡಿದೆ. ಕಾರ್ಕಳ ಪುರಸಭೆಯ ಕಚೇರಿಯ ಕೆಳ ಅಂತಸ್ತಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಾವತಿ ಕೇಂದ್ರಕ್ಕೆ ಬಿಲ್ ಪಾವತಿಸಲು ದೂರದಿಂದ ಆಗಮಿಸುತ್ತಿರುವ ಗ್ರಾಹಕರು ಮಂಕಾಗುತ್ತಿದ್ದಾರೆ. ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ವಿದ್ಯುತ್ ಬಿಲ್ ಪಾವತಿಕೇಂದ್ರ ಕಳೆದ ಎರಡು ತಿಂಗಳಿನಿಂದ ಬಂದ್ ಆಗಿದೆ. ಸದ್ಯ ಅಲ್ಲಿದ್ದ ಯಂತ್ರೋಪಕರಣ ಹಾಗೆಯೇ ಇವೆ. ಆಗಮಿಸಿದವರು ಬರೀಗೈಲಿ ವಾಪಾಸಾಗುತ್ತಿದ್ದಾರೆ.
ನಡೆದದ್ದೇನು?
ಇಲ್ಲಿ ಹಿಂದೆ ಕಾರ್ಯಾಚರಿಸುತ್ತಿದ್ದ ಯಂತ್ರೋಪಕರಣ ಹಳೇ ಮಾದರಿಯದ್ದಾಗಿದ್ದು, ಹೀಗಾಗಿ ಹೊಸ ತಂತ್ರಜ್ಞಾನದಿಂದ ಕೂಡಿದ ಯಂತ್ರೋಪಕರಣಕ್ಕೆ ಟೆಂಡರ್ ಆಹ್ವಾನಿಸಲಾಗಿದೆ. ಆದರೆ ಹೊಸ ಗುತ್ತಿಗೆದಾರನಿಗೆ ಟೆಂಡರ್ ನೀಡಿರುವ ಪರಿಣಾಮ ಹಿಂದೆ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆದಾರ, ಅಲ್ಲಿ ಅಳವಡಿಸಿದ ಯಂತ್ರೋಪಕರಣವನ್ನು ತೆರವುಗೊಳಿಸಲಿಲ್ಲ. ಇದರಿಂದಾಗಿ ಹೊಸ ಯಂತ್ರೋಪಕರಣ ಅಳವಡಿಕೆಗೆ ಸಮಸ್ಯೆ ಉಂಟಾಗಿದೆ. ಈಗಾಗಲೇ ಹೊಸ ಯಂತ್ರೋಪಕರಣ ಸರಬರಾಜು ಮಾಡಲಾಗಿದೆ. ಹಳೆ ಯಂತ್ರೋಪಕರಣವನ್ನು ಈ ಹಿಂದಿನ ಗುತ್ತಿಗೆದಾರರು ತೆರವು ಮಾಡಿದರೆ ಅಲ್ಲೇ ಮತ್ತೆ ಪ್ರಾರಂಭಿಸಲಿದ್ದೇವೆ. ಅದು ಸಾಧ್ಯವಾಗದಿದ್ದರೆ ಪೇಟೆಯ ಆಸುಪಾಸಿನಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ಮೆಸ್ಕಾಂ ಕಾರ್ಕಳ ವಿಭಾಗದ ಜೆಇಇ ದಿಲೀಪ್ ತಿಳಿಸಿದ್ದಾರೆ.
ಬಿಲ್ ಪಾವತಿ ಸೇವೆ ದೊರೆಯದ ಕಾರಣ ಜನತೆ ಪುರಸಭೆಯನ್ನು ದೂರುತ್ತಿದ್ದಾರೆ. ಇದು ಮೆಸ್ಕಾಂ ವಿಭಾಗದ ಸಮಸ್ಯೆಯಾಗಿದೆ. ಮೆಸ್ಕಾಂಗೆ ಪುರಸಭೆ ಜಾಗ ಬಿಟ್ಟುಕೊಡಲು ಹೇಳಿದೆ ಎನ್ನುವ ಸುಳ್ಳು ವದಂತಿ ಕೂಡ ಹಬ್ಬಿದೆ. ಯಾರೂ ಅಪಪ್ರಚಾರ ಮಾಡಬಾರದು ಎಂದು ಪುರಸಭೆಯ ಮುಖ್ಯಾಧಿಕಾರಿ ಮೇಬಲ್ ತಿಳಿಸಿದ್ದಾರೆ.